ʻಶೂಟಿಂಗ್ ಜತೆಜತೆಗೆ ಎಡಿಟಿಂಗ್ ಕೂಡ ಮಾಡುತ್ತಿದ್ದ ಕಾರಣ ಈಗಾಗಲೇ ಆರು ತಾಸುಗಳ ಕಂಟೆಂಟ್ ರೆಡಿಯಿದೆ. ಇನ್ನೂ ಆರು ತಾಸುಗಳ ಕಂಟೆಂಟ್ ಬೇಕಿದೆ, ಅದನ್ನೇ ಪ್ಲ್ಯಾನ್ ಮಾಡಿಕೊಂಡು ಸದ್ಯ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ವಾರದಿಂದ ಬಾಲಿವುಡ್ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರೂ ನಮ್ಮ ತಂಡ ಸೇರಿಕೊಳ್ಳಲಿದ್ದಾರೆ. ಶಂಕರ್ ಬಿದರಿಯವರ ಪಾತ್ರದಲ್ಲಿ ಅವರ ನಟಿಸಲಿದ್ದಾರೆʼ ಎಂದು ವೆಬ್ಸಿರೀಸ್ ಕುರಿತು ಮತ್ತಷ್ಟು ಮಾಹಿತಿ ನೀಡುತ್ತಾರೆ ರಮೇಶ್.
ಅಟ್ಟಹಾಸ ಚಿತ್ರದಲ್ಲಿ ಅಣ್ಣಾವ್ರ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಸುರೇಶ್ ಓಬೆರಾಯ್ ಅವರೇ ಈ ವೆಬ್ಸಿರೀಸ್ನಲ್ಲೂ ಡಾ. ರಾಜ್ಕುಮಾರ್ರ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪುತ್ರ ಖ್ಯಾತ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ನಟಿಸುವ ಸಾಧ್ಯತೆಯಿದೆ. ಇನ್ನು 70ರಿಂದ 80 ದಿನಗಳ ಚಿತ್ರೀಕರಣ ಮಾಡಿದರೆ ಎರಡೂ ಸೀಸನ್ ಕಂಪ್ಲೀಟ್ ಆಗಲಿವೆಯಂತೆ.
ʻಈಗ ಮಲೆಮಹದೇಶ್ವರ ಬೆಟ್ಟದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಕೆಲ ಕ್ಲೋಸಪ್ ಮತ್ತು ಮ್ಯಾಚಿಂಗ್ ಶಾಟ್ಸ್ನ ಬೆಂಗಳೂರಿನ ಸಮೀಪದ ರಾಗಿಹಳ್ಳಿ ಗುಡ್ಡದಲ್ಲೇ ಶೂಟ್ ಮಾಡುತ್ತಿದ್ದೇವೆ. ಆದರೆ ಶೇಕಡಾ 90ರಷ್ಟು ಚಿತ್ರೀಕರಣ ಎಂಎಂ ಹಿಲ್ಸ್ನಲ್ಲೇ ಮಾಡಿದ್ದೇವೆ. ಕೊವಿಡ್ ಇರುವುದರಿಂದ ಸರ್ಕಾರ ನೀಡಿರುವ ಮಾರ್ಗಸೂಚಿಗಳಂತೆಯೇ ಕೇವಲ 30 ಜನರ ತಂಡದೊಂದಿಗೆ ಚಿತ್ರೀಕರಣ ಮಾಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ಶೂಟಿಂಗ್ ಮಾಡುವುದೇ ಸಮಸ್ಯೆ. ಕಾಡಿನಲ್ಲಿ ಏನೂ ಸಮಸ್ಯೆ ಇಲ್ಲ. ಕಾಡಿನ ಕೆಲ ಹಳ್ಳಿಗಳಲ್ಲಿ ಕೊವಿಡ್ ಬಗ್ಗೆ ಗೊತ್ತಿಲ್ಲ,” ಎಂದು ಕಾಡಿನಲ್ಲಿ ಶೂಟಿಂಗ್ ಮಾಡುತ್ತಿರುವ ಬಗೆಗಿನ ಅನುಭವ ಬಿಚ್ಚಿಡುತ್ತಾರೆ ನಿರ್ದೇಶಕ ಎಎಂಆರ್ ರಮೇಶ್.
ವೀರಪ್ಪನ್ ಹಂಗರ್ ಫಾರ್ ಕಿಲ್, ವೆಬ್ಸಿರೀಸ್ಗೆ ಸುಮಾರು 12 ತಾಸುಗಳಷ್ಟು ಕಂಟೆಂಟ್ ಅರ್ಥಾತ್ ಐದು ಸಿನಿಮಾಗಳಷ್ಟು ಕಂಟೆಂಟ್ ಬೇಕಿದೆ. ಒಟ್ಟು 18ರಿಂದ 20 ಎಪಿಸೋಡ್ಗಳಷ್ಟು ಕಂಟೆಂಟ್ ಸಿದ್ಧಮಾಡಿಕೊಂಡು ಆ ಬಳಿಕ ಓಟಿಟಿ ಅಥವಾ ಡಿಜಿಟಲ್ ಪ್ಲ್ಯಾಟ್ಫಾರ್ಮ್ಗಳ ಬಳಿ ಮಾತನಾಡುವ ಐಡಿಯಾ ನಿರ್ದೇಶಕರದು. ಇನ್ನೊಂದು ತಿಂಗಳಲ್ಲಿ ಅದರ ಬಗ್ಗೆಯೂ ಸ್ಪಷ್ಟತೆ ದೊರೆಯಲಿದ್ದು, ಆದರೆ ಡಿಸೆಂಬರ್ ಅಂತ್ಯಕ್ಕೆ ಮೊದಲ ಸೀಸನ್ ಹಾಗೂ ಮಾರ್ಚ್ ಹೊತ್ತಿಗೆ ಎರಡನೇ ಸೀಸನ್ ರೆಡಿಯಾಗುವ ನಿರೀಕ್ಷೆಯಿದೆ.
ಅಟ್ಟಹಾಸ ಚಿತ್ರದಲ್ಲಿ ಹೆಚ್ಚೇನೂ ಹೇಳಲು ಸಾಧ್ಯವಾಗಿರಲಿಲ್ಲ. ಆದರೆ ಈ ವೆಬ್ಸಿರೀಸ್ನಲ್ಲಿ ವೀರಪ್ಪನ್ ಅಟ್ಟಹಾಸ, ಪೊಲೀಸರ ಸಾಹಸ ಹಾಗೂ ಅಣ್ಣಾವ್ರ ಅಪಹರಣ ಪ್ರಕರಣಗಳ ಬಗ್ಗೆ ಹೆಚ್ಚು ಗಮನಹರಿಸಿದ್ದಾರಂತೆ ನಿರ್ದೇಶಕರು. ʻಮಧುಕರ್ ಶೆಟ್ಟಿ, ಶಂಕರ್ ಬಿದರಿ, ಕೆಂಪಯ್ಯ, ರಾಮಕೃಷ್ಣಪ್ರಸಾದ್, ಮೀಸೆ ನಾಗರಾಜ್, ಬಾವಾ, ಹರ್ಷವರ್ಧನ್ ರಾಜು, ಮಿರ್ಜಿ ಸೇರಿದಂತೆ ವೀರಪ್ಪನ್ ಮಟ್ಟ ಹಾಕುವಲ್ಲಿ ಹಲವು ಖಡಕ್ ಪೊಲೀಸ್ ಆಫೀಸರ್ಗಳ ಕೊಡುಗೆ ಅಪಾರ. 180 ಜನ ವೀರಪ್ಪನ್ ಸಂಗಡಿಗರಿರುತ್ತಾರೆ. ಶಂಕರ್ ಬಿದರಿ ಅವರ ಸಮಯದಲ್ಲಿ ಆ ಗ್ಯಾಂಗ್ಅನ್ನು ಕೇವಲ ಆರು ಜನಕ್ಕೆ ತರುತ್ತಾರೆ. ಅವರ ಕಾರ್ಯಾಚರಣೆ ಹೇಗಿತ್ತು ಎಂಬುದರ ಬಗ್ಗೆಯೂ ತಿಳಿಸಲಿದ್ದೇನೆ. ಇದೇ ರೀತಿ ಐದಾರು ಜನ ಟಾಪ್ ಸ್ಟಾರ್ಗಳನ್ನು ಹಿಂದಿ ಭಾಷೆಯಿಂದ ಕರೆತರುತ್ತಿದ್ದೇನೆ. ಕನ್ನಡದಲ್ಲಿ ಅರ್ಜುನ್ ಸರ್ಜಾ, ಕಿಶೋರ್ ಹಾಗೂ ಸುಚೇಂದ್ರ ಪ್ರಸಾದ್, ಲಕ್ಷ್ಮೀ ರೈ, ನಟಿಸಲಿದ್ದಾರೆ ಎಂದು ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ ಎಎಂಆರ್ ರಮೇಶ್.
ಇನ್ನು ವೀರಪ್ಪನ್ ವೆಬ್ಸಿರೀಸ್ ಬಳಿಕ ನಿರ್ದೇಶಕ ಎಎಂಆರ್ ರಮೇಶ್ ಒಂದು ಇಂಟರ್ನ್ಯಾಶನಲ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಹಾಗೂ ಎಲ್ಟಿಟಿಇ ಕುರಿತ ಈ ಪ್ರಾಜೆಕ್ಟ್ ಕನ್ನಡ, ಹಿಂದಿ ಮಾತ್ರವಲ್ಲ ಜೊತೆಗೆ ಇಂಗ್ಲೀಷ್ನಲ್ಲೂ ಮೂಡಿಬರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ