ರಕ್ತ ಸಿಕ್ತ​ ಥ್ರಿಲ್ಲರ್ ಕಥೆಯೊಂದಿಗೆ ಮರಳಿದ್ದಾರೆ ಸುನೀಲ್ ಕುಮಾರ್ ದೇಸಾಯಿ

news18
Updated:August 25, 2018, 7:15 PM IST
ರಕ್ತ ಸಿಕ್ತ​ ಥ್ರಿಲ್ಲರ್ ಕಥೆಯೊಂದಿಗೆ ಮರಳಿದ್ದಾರೆ ಸುನೀಲ್ ಕುಮಾರ್ ದೇಸಾಯಿ
news18
Updated: August 25, 2018, 7:15 PM IST
-ನ್ಯೂಸ್ 18 ಕನ್ನಡ

'ತರ್ಕ', 'ಉತ್ಕರ್ಷ', 'ಸಂಘರ್ಷ', 'ನಿಷ್ಕರ್ಷ'...ಮುಂತಾದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸುನೀಲ್ ಕುಮಾರ್ ದೇಸಾಯಿ ಎರಡು ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಕಂಬ್ಯಾಕ್ ಮಾಡಿದ್ದಾರೆ. ಅದರಲ್ಲೂ ಈ ಬಾರಿ ತಮ್ಮ ಹಳೆಯ ಟೈಟಲ್ ಸಿದ್ಧಾಂತಗಳೊಂದಿಗೆ ಮರಳಿರುವುದು ವಿಶೇಷ.

ಕನ್ನಡ ಸಿನಿರಂಗದ ಸಸ್ಪೆನ್ಸ್ ಥ್ರಿಲ್ಲರ್​ ಚಿತ್ರಗಳ ಮಾಸ್ಟರ್ ಮೈಂಡ್ ಖ್ಯಾತಿಯ ದೇಸಾಯಿ  'ಉದ್ಘರ್ಷ' ಎಂಬ ಚಿತ್ರದೊಂದಿಗೆ ಹಿಂತಿರುಗಿದ್ದಾರೆ. ಈ ಚಿತ್ರ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಚಿತ್ರದ  ಫಸ್ಟ್​ ಲುಕ್ ಪೋಸ್ಟರ್​ನ್ನು ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡಿದ್ದು, ಚಿತ್ರದ ಮೊದಲ ನೋಟವು ಕುತೂಹಲ ಮೂಡಿಸಿದೆ.

'ಮರ್ಮ', 'ಕ್ಷಣ ಕ್ಷಣ 'ಮತ್ತು 'ರೇ...' ಚಿತ್ರಗಳಿಂದ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಸುನೀಲ್ ಕುಮಾರ್ ದೇಸಾಯಿ ಈ ಬಾರಿ ಮತ್ತೆ ಸಸ್ಪೆನ್ಸ್​ ಥ್ರಿಲ್ಲರ್​ನೊಂದಿಗೆ ಕ್ರೈಂ ಕಥೆಯನ್ನು ಹೇಳಲು ಹೊರಟಿದ್ದಾರೆ. ಫಸ್ಟ್​ ಲುಕ್​​ನಲ್ಲಿ ರಕ್ತ ಸಿಕ್ತ ಹುಡುಗಿಯೊಬ್ಬಳ ಕಾಲುಗಳನ್ನು ತೋರಿಸಿರುವ ನಿರ್ದೇಶಕರು ಪೋಸ್ಟರ್​ನಲ್ಲೇ ಕುತೂಹಲ ಕೆರಳಿಸಿದ್ದಾರೆ. ಚಿತ್ರದ ಪೋಸ್ಟರ್​ಗೆ ಸಿನಿ ಪ್ರಿಯರು ಫಿದಾ ಆಗಿದ್ದು, ಸಿನಿಮಾದ ಮೇಲೆ ಕುತೂಹಲ​ ಹುಟ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಈ ಚಿತ್ರದ ಚಿತ್ರೀಕರಣವು ಈಗಾಗಲೇ ಅರ್ಧದಷ್ಟು ಮುಗಿದಿದ್ದು, ಕಥೆಯೊಂದಿಗೆ ತಾರಾಗಣದ ಬಗ್ಗೆ ಕೂಡ ಈ ಹಿಂದೆ ನಿರ್ದೇಶಕರು  ಎಲ್ಲೂ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಹೊಸ ಗೆಲುವಿನ ಹುಡುಕಾಟದಲ್ಲಿರುವ ಸುನೀಲ್ ಕುಮಾರ್ ದೇಸಾಯಿ ಅವರು ಈ ಚಿತ್ರಕ್ಕಾಗಿ ಬಹುಭಾಷಾ ತಾರೆಗಳನ್ನು ಒಂದುಗೂಡಿಸಿದ್ದಾರೆ.

ತಮಿಳಿನ 'ಸಿಂಗಂ3' ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಖಡಕ್ ಅಭಿನಯದಿಂದ ಕಮಾಲ್ ಮಾಡಿರುವ ಠಾಕೂರ್ ಅನೂಪ್ ಸಿಂಗ್ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರದಲ್ಲಿ ಅಭಿನಯಿಸಿದ್ದ ಅನೂಪ್ 'ಉದ್ಘರ್ಷ'ದಲ್ಲೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಕಬಾಲಿ' ಖ್ಯಾತಿಯ ನಟಿ ಧನ್ಸಿಕಾ ಇಲ್ಲೂ ರಫ್ ಅಂಡ್ ಟಫ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದ್ದು, ತೆಲುಗಿನ 'ನೇನು ಶೈಲಜಾ' ಚಿತ್ರ ಖ್ಯಾತಿಯ ತಾನ್ಯ ಹೋಪ್, 'ಬಾಹುಬಲಿ' ಪ್ರಭಾಕರ್ ಕೂಡ ಈ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. 'ಹೆಬ್ಬುಲಿ' ಸಿನಿಮಾದಲ್ಲಿ ಘರ್ಜಿಸಿದ್ದ ಕಬೀರ್ ಸಿಂಗ್ ದುಹಾನ್, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸೇರಿದಂತೆ ಕನ್ನಡಿಗರಿಗೆ ಚಿರ ಪರಿಚಿತ ಹಲವು ಮುಖಗಳು ಈ ಚಿತ್ರದಲ್ಲಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕರಿದ್ದರೂ ಹಾಡುಗಳಿಲ್ಲ
Loading...

ಈ ಚಿತ್ರದಲ್ಲಿ ಯಾವುದೇ ಹಾಡುಗಳಿರದಿರುವುದು ಮತ್ತೊಂದು ವಿಶೇಷ.  ಆದರೆ ಚಿತ್ರಕ್ಕಾಗಿ ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ಸಂಜೋಯ್ ಚೌಧರಿ ರಾಗ ಸಂಯೋಜಿಸಿದ್ದಾರೆ.  ಸಸ್ಫೆನ್ಸ್ ಥ್ರಿಲ್ಲರ್ ಕಥೆ ಆಗಿರುವುದರಿಂದ ಸುನೀಲ್ ಕುಮಾರ್ ದೇಸಾಯಿ ಹಿನ್ನಲೆ ಸಂಗೀತಕ್ಕಾಗಿ 'ಬೇಬಿ', 'ಗೋಲ್​ಮಾಲ್3' ಚಿತ್ರಗಳ ಖ್ಯಾತಿಯ ಸಂಜೋಯ್ ಚೌಧರಿ ಅವರ ಮೊರೆ ಹೋಗಿದ್ದಾರಂತೆ.

ಖ್ಯಾತ ತಂತ್ರಜ್ಞರ ತಂಡ

ಈ ಚಿತ್ರಕ್ಕಾಗಿ ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮಾ ಸಾಹಸ ಸಂಯೋಜನೆ ಮಾಡಲಿದ್ದು, 200ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಕಲನ ನಿರ್ವಹಿಸಿರುವ ಸಂಕಲನಕಾರ ಬಿ.ಎಸ್ ಕೆಂಪರಾಜು ಕತ್ತರಿ ಪ್ರಯೋಗ ಮಾಡಲಿದ್ದಾರೆ. ಅಲ್ಲದೆ ಪಿ.ರಾಜನ್ ಮತ್ತು ವಿಷ್ಣುವರ್ಧನ್ ಜೋಡಿ ಛಾಯಾಗ್ರಹಣ ಮಾಡಲಿದ್ದಾರೆ.

ಹೊಸ ನಿರ್ಮಾಪಕರು-ಹೊಸ ಕನಸು

ದೇವರಾಜ್. ಆರ್ ಎಂಬ ಹೊಸ ನಿರ್ಮಾಪಕರು ಸುನೀಲ್ ಕುಮಾರ್ ದೇಸಾಯಿ ಅವರ ಕನಸಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರದ ಬಂಡವಾಳಕ್ಕಾಗಿ ರಾಜಿ ಮಾಡಿಕೊಳ್ಳದ ದೇವರಾಜ್​ ಅವರಿಗೆ ಸಹ ನಿರ್ಮಾಪಕರಾಗಿ ರಾಜೇಂದ್ರ ಕುಮಾರ್ ಸಾಥ್ ನೀಡಿದ್ದಾರೆ. ಡಿ ಕ್ರಿಯೇಷನ್ಸ್ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿರುವ ಹೊಸ ನಿರ್ಮಾಪಕರು  ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...