Pailwaan: ಪೈಲ್ವಾನ್ ಪವರ್: ಮುಚ್ಚಿ ಹೋಗಿದ್ದ ಚಿತ್ರಮಂದಿರಗಳು ರೀ ಓಪನ್..!

Pailwaan: ಈ ಬಾರಿ ಸುದೀಪ್ ಕನ್ನಡದಲ್ಲೇ 150 ರಿಂದ 200 ಕೋಟಿ ಕಮಾಯಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಹಿಂದಿ ಹಾಗೂ ಇತರೆ ಭಾಷೆಗಳಿಂದ 100 ರಿಂದ 150 ಕೋಟಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

zahir | news18-kannada
Updated:September 11, 2019, 6:34 PM IST
Pailwaan: ಪೈಲ್ವಾನ್ ಪವರ್: ಮುಚ್ಚಿ ಹೋಗಿದ್ದ ಚಿತ್ರಮಂದಿರಗಳು ರೀ ಓಪನ್..!
Pailwaan
  • Share this:
'ಪೈಲ್ವಾನ್' ಅಖಾಡಕ್ಕೆ ಇಳಿಯಲು ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಚಿತ್ರದ ಭರ್ಜರಿ ಪ್ರೊಮೋಷನ್​ನಲ್ಲಿ ಕಿಚ್ಚ ಸುದೀಪ್ ಮತ್ತು ತಂಡ ತೊಡಗಿಸಿಕೊಂಡಿದೆ. ಬಾಕ್ಸಾಫೀಸ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಎನ್ನಲಾಗಿರುವ ಅಭಿನಯ ಚಕ್ರವರ್ತಿ ಅಭಿನಯದ ಈ ಚಿತ್ರವು ವಿಶ್ವದಾದ್ಯಂತ ಸೆ.12ರಂದು 4 ಸಾವಿರಕ್ಕಿಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅದರಲ್ಲೂ ಕನ್ನಡ ಚಿತ್ರಗಳಿಗೆ ನೆಲೆ ಇಲ್ಲದಂತಿದ್ದ ಅನೇಕ ಪ್ರದೇಶಗಳಲ್ಲಿ ಕಿಚ್ಚನ ಕುಸ್ತಿ  ಆರಂಭವಾಗುತ್ತಿರುವುದು ವಿಶೇಷ. ಹೆಬ್ಬುಲಿ ನಿರ್ದೇಶಕ ಕೃಷ್ಣ ಅವರ ಪತ್ನಿ ಸ್ವಪ್ನಾ ನಿರ್ಮಿಸಿರುವ ಈ ಸಿನಿಮಾ ಅತೀ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಚಿತ್ರ ಎಂಬ ದಾಖಲೆ ಬರೆಯಲಿದೆ.

ಇನ್ನು ಚಿತ್ರದ ವಿತರಣೆ ಹಕ್ಕನ್ನು 'ಕೆಜಿಎಫ್' ನಿರ್ಮಾಪಕ ಕಾರ್ತಿಕ್ ಗೌಡ ಪಡೆದಿದ್ದು, 'ಪೈಲ್ವಾನ್​'ನ ಭರ್ಜರಿ ಎಂಟ್ರಿಗೆ ವೇದಿಕೆ ಸಿದ್ಧಪಡಿಸಿದೆ. ಅದರಂತೆ ಕನ್ನಡ ಚಿತ್ರಗಳಿಗೆ ಥಿಯೇಟರ್​ ಸಿಗಲ್ಲ ಎಂಬಂತಿದ್ದ ಹೈದರಾಬಾದ್ ಕರ್ನಾಟಕ, ಕೋಲಾರ, ತುಮಕೂರು ಗಡಿಭಾಗಗಳ ಹಲವು ಸಿನಿಮಂದಿರಗಳಲ್ಲಿ ಕನ್ನಡ ಚಿತ್ರ ಮತ್ತೆ ಎಂಟ್ರಿಕೊಟ್ಟಿದೆ.

ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಎಷ್ಟೋ ಚಿತ್ರಮಂದಿರಗಳು ಮುಚ್ಚಿ ಹೋಗಿತ್ತು. ಇದೀಗ ಹೈದರಾಬಾದ್ ಕರ್ನಾಟಕವೊಂದರಲ್ಲೇ 5-6 ಥಿಯೇಟರ್​ಗಳು 'ಪೈಲ್ವಾನ್'​ಗಾಗಿ ರೀ ಓಪನ್ ಆಗುತ್ತಿದೆ. ಕರುನಾಡಿನಲ್ಲಿರುವ ಎಲ್ಲಾ ಚಿತ್ರಮಂದಿರಗಳು ಕನ್ನಡ ಸೆಂಟರ್​ಗಳು. ಆದರೆ ತೆಲುಗು ಸಿನಿಮಾ ಹಾಕಿ ಅವುಗಳನ್ನು ತೆಲುಗು ಸೆಂಟರ್ ಮಾಡಲಾಗಿತ್ತು. ಇದೀಗ ಅನೇಕ ತೆಲುಗು ಸೆಂಟರ್​ ಎನ್ನಲಾಗುವ ಚಿತ್ರಮಂದಿರಗಳಲ್ಲಿ 'ಪೈಲ್ವಾನ್' ತೊಡೆ ತಟ್ಟಲಿದ್ದಾನೆ ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ.

ಇನ್ನು ಉತ್ತರ ಭಾರತದಲ್ಲೂ ಪೈಲ್ವಾನ್ 2000 ಕ್ಕೂ ಹೆಚ್ಚಿನ ಸ್ಕ್ರೀನ್​ನಲ್ಲಿ ಅಬ್ಬರಿಸಲಿದ್ದು, ಈ ಮೂಲಕ ಹಿಂದೆ ಕೆಜಿಎಫ್ ನಿರ್ಮಿಸಿದ್ದ ದಾಖಲೆಯನ್ನು ಪೈಲ್ವಾನ್ ಅಳಿಸಿ ಹಾಕಲಿದ್ದಾನೆ. ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ 'ಪೈಲ್ವಾನ್' ವಿಜೃಂಭಿಸಲಿದ್ದು, ತೆಲುಗಿನಲ್ಲೂ ಬಹು ಸಂಖ್ಯೆಯಲ್ಲಿ ಬಿಡುಗಡೆ ಮಾಡಲು ವಾರಾಹಿ ಸಂಸ್ಥೆ ಪ್ಲ್ಯಾನ್ ಮಾಡಿಕೊಂಡಿದೆ.

ಇವೆಲ್ಲಕ್ಕಿಂತ ವಿಶೇಷ ಎಂದರೆ  ಪೈಲ್ವಾನ್ ಚಿತ್ರದ ಬಾಕ್ಸಾಫೀಸ್ ಲೆಕ್ಕಾಚಾರಗಳು ಈಗಲೇ ಆರಂಭವಾಗಿರುವುದು. ಏಕೆಂದರೆ ಸ್ಯಾಂಡಲ್​ವುಡ್ ಬಚ್ಚನ್​ಗೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಅನ್ಯಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಕಾಲಿವುಡ್​ನಲ್ಲಿ ಪುಲಿ ಚಿತ್ರದಲ್ಲಿ ಅಭಿನಯಿಸಿದ್ದ ಸುದೀಪ್​ಗೆ ನಟ ವಿಜಯ್ ಫ್ಯಾನ್ಸ್​ ಸಾಥ್ ನೀಡಲಿರುವುದು ಪಕ್ಕವಾಗಿದೆ. ತಮಿಳು ಚಿತ್ರರಂಗದ ಮೂಲಗಳ ಪ್ರಕಾರ ಪೈಲ್ವಾನ್ ಅದ್ಧೂರಿ ಓಪನಿಂಗ್ ಸಿಗಲಿದೆ. ಇನ್ನು ಈಗ ಎಂಬ ಚಿತ್ರದ ಮೂಲಕ ಟಾಲಿವುಡ್ ಹಾಗೂ ಮಾಲಿವುಡ್​ನಲ್ಲಿ ಅಭಿನಯ ಚಕ್ರವರ್ತಿ ಅಬ್ಬರಿಸಿದ್ದು ಇನ್ನೂ ಕೂಡ ಅಲ್ಲಿನ ಸಿನಿಪ್ರಿಯರು ಮರೆತಿಲ್ಲ. ಇದು ಪೈಲ್ವಾನ್​ಗೆ ಪ್ಲಸ್ ಪಾಯಿಂಟ್ ಆಗಲಿದೆ.

ಇದರೊಂದಿಗೆ ಸೈರಾ ನರಸಿಂಹಾ ರೆಡ್ಡಿ ಸಿನಿಮಾದಲ್ಲೂ ಸುದೀಪ್ ಕಾಣಿಸಿಕೊಂಡಿರುವುದು ಪೈಲ್ವಾನ್ ಪ್ರಚಾರಕ್ಕೆ ತೆಲುಗಿನಲ್ಲಿ ಭರ್ಜರಿ ಸ್ವಾಗತಕ್ಕೆ ಕಾರಣವಾಗಲಿದೆ. ಹಾಗೆಯೇ ಬಾಲಿವುಡ್​ನ ಮೇರುನಟ ಅಮಿತಾಭ್ ಬಚ್ಚನ್​ ಅವರೊಂದಿಗೆ ರಣ್ ಚಿತ್ರದಲ್ಲಿ ಈ ಹಿಂದೆ ನಟಿಸಿದ್ದರು. ಇದರೊಂದಿಗೆ ಸಲ್ಮಾನ್ ಖಾನ್ ಅಭಿನಯದ ದಬಂಗ್ 3 ಚಿತ್ರದಲ್ಲೂ ವಿಲನ್ ಪಾತ್ರಕ್ಕೆ ಸುದೀಪ್ ಜೀವ ತುಂಬಿದ್ದಾರೆ. ಹಾಗೆಯೇ ಪೈಲ್ವಾನ್​ನ ಗುರುವಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಹ ಕಾಣಿಸಿದ್ದಾರೆ. ಇವೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡರೆ ಪರಭಾಷಾ  ಚಿತ್ರಪ್ರೇಮಿಗಳು ಥಿಯೇಟರಿಗೆ ಹರಿದು ಬರಲಿದ್ದಾರೆ. ಹೀಗಾಗಿ ಎಲ್ಲಾ ವುಡ್​ಗಳಲ್ಲೂ ಕಿಚ್ಚನ ಆರ್ಭಟ ಮೊದಲ ದಿನದಿಂದಲೇ ಆರಂಭವಾಗಲಿದೆ ಎನ್ನಲಾಗುತ್ತಿದೆ.ಹೀಗಾಗಿ ಪೈಲ್ವಾನ್ ಸಹ ನೂರು ಕೋಟಿ ಕ್ಲಬ್ ಸೇರುವುದಂತು ಪಕ್ಕಾ  ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪರಿಣಿತರು. ಇದಕ್ಕೆ ಒಂದು ಕಾರಣ ಕಿಚ್ಚ ಸುದೀಪ್ ಅನ್ಯಭಾಷಿಗರಿಗೂ ಪರಿಚಿತ ಮುಖ ಎಂಬುದು. ಮತ್ತೊಂದು ಕಾರಣ ಉತ್ತರದಲ್ಲಿ ಪೈಲ್ವಾನ್​ರನ್ನು ಅಖಾಡಕ್ಕೆ ಇಳಿಸುತ್ತಿರುವುದು ಜೀ ಸ್ಟುಡಿಯೋಸ್ ಸಂಸ್ಥೆ. ಏಕೆಂದರೆ ಈ ಚಿತ್ರವನ್ನು ಈಗಾಗಲೇ ಅಮೆರಿಕ, ಕೆನಡಾ ಸೇರಿದಂತೆ ಎಲ್ಲಾ ಕಡೆ ಏಕಕಾಲಕ್ಕೆ ರಿಲೀಸ್ ಮಾಡಲು ಜೀ ಸಂಸ್ಥೆ ರೆಡಿಯಾಗಿದೆ.

ಈ ಬಾಕ್ಸಿಂಗ್ ಚಿತ್ರವು ಸುಮಾರು 4 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗಲಿದ್ದು, ಈ ಬಾರಿ ಸುದೀಪ್ ಕನ್ನಡದಲ್ಲೇ 150 ರಿಂದ 200 ಕೋಟಿ ಕಮಾಯಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಹಿಂದಿ ಹಾಗೂ ಇತರೆ ಭಾಷೆಗಳಿಂದ 100 ರಿಂದ 150 ಕೋಟಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಬಾಕ್ಸಾಫೀಸ್ ಪಂಡಿತರುಗಳ ಈ ಲೆಕ್ಕಾಚಾರಗಳನ್ನು ಗಮನಿಸಿದರೆ ಪೈಲ್ವಾನ್ ಕಿಚ್ಚ ಸುದೀಪ್ ಅವರ ಕೆರಿಯರ್​ನ ಬಿಗ್ ಹಿಟ್ ಸಿನಿಮಾ ಎನಿಸಿಕೊಳ್ಳುವುದಂತು ಪಕ್ಕಾ.
First published: September 11, 2019, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading