'ಕಬ್ಜ'... ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾ. ಆರ್.ಚಂದ್ರು ನಿರ್ದೇಶನದಲ್ಲಿ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರತಂಡ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಈ ಹಿಂದೆಯೇ ಸಂಕ್ರಾಂತಿ ಹಬ್ಬದಂದು ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡುವುದಾಗಿ ಚಿತ್ರತಂಡ ಪ್ರಕಟಿಸಿತ್ತು. ಅದರಂತೆಯೇ ಇಂದು ಸಿನಿಮಾ ಕುರಿತಾದ ದೊಡ್ಡ ಅಪ್ಡೇಟ್ ನೀಡಿದೆ. ಈ ಚಿತ್ರ ಪ್ರಕಟವಾದಾಗಿನಿಂದಲೂ ಸ್ಯಾಂಡಲ್ವುಡ್ನಲ್ಲಿ ಬಿರುಗಾಳಿ ಎದ್ದಿದೆ. ಏಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಅಪ್ಪಟ ಕನ್ನಡ ಮಣ್ಣಿನ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಉಪೇಂದ್ರ ಅವರು ಮತ್ತೆ ಕಮರ್ಷಿಯಲ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಈಗಾಗಲೇ ಚಿತ್ರತಂಡ ರಿಲೀಸ್ ಮಾಡಿರುವ ಥೀಮ್ ಪೋಸ್ಟರ್, ಪೋಸ್ಟರ್ ಹಾಗೂ ವಿಭಿನ್ನವಾದ ಫೋಟೋಶೂಟ್ ಸಿನಿ ದುನಿಯಾದಲ್ಲಿ ಸಖತ್ ಸಂಚಲನ ಸೃಷ್ಟಿಸಿದೆ.'ಕಬ್ಜ' ಚಿತ್ರದ ಫೋಟೋಶೂಟ್ ಮೇಕಿಂಗ್ನಲ್ಲಿ ಅಂಡರ್ ವರ್ಲ್ಡ್ನ ಹೊಸ ದೃಷ್ಟಿಕೋನವನ್ನು ಬಿಚ್ಚಿಡಲಾಗಿತ್ತು. ಇದರಲ್ಲಿ ಉಪ್ಪಿಯ ವಿಭಿನ್ನ ಗೆಟಪ್ಪು... ಲುಕ್ಕು... ಕಂಡು ಚಿತ್ರಪ್ರೇಮಿಗಳು ಥ್ರಿಲ್ಲಾಗಿದ್ದರು. ಕೆಜಿಎಫ್ ನಂತರ ಕನ್ನಡದಲ್ಲಿ ಭಾರೀ ಮಟ್ಟದಲ್ಲಿ ಸದ್ದು ಮಾಡಲಿರುವ ಸಿನಿಮಾ ಎಂದೇ ಹೇಳಲಾಗುತ್ತಿದೆ. ಇದರಿಂದಾಗಿ ಕಬ್ಜ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲವಿದೆ.
'ಕಬ್ಜ' ಸಿನಿಮಾ 80ರ ದಶಕದ ಡಾನ್ ಒಬ್ಬರ ಕತೆಯಾಗಿದ್ದು, ಇದರಲ್ಲಿ ಬೇರೆ ಭಾಷೆಗಳ ಖಳ ನಟರೂ ಕಾಣಿಸಿಕೊಳ್ಳಲಿದ್ದಾರಂತೆ. ಡಾನ್ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ ಕಾಣಿಸಿಕೊಂಡರೆ, ಮಾಫಿಯಾವನ್ನೇ ಮುಗಿಸುವವನ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.

ಕಬ್ಜ ಸಿನಿಮಾದಲ್ಲಿ ಭಾರ್ಗವ್ ಬಕ್ಷಿಯಾಗಿ ಕಿಚ್ಚ ಸುದೀಪ್
ಹೌದು, ಸಂಕ್ರಾಂತಿ ಹಬ್ಬದ ಅಂಗವಾಗಿ ಕಬ್ಜ ಚಿತ್ರತಂಡ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಇದರಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವ ಬಗ್ಗೆ ಪ್ರಕಟಿಸಿದೆ. ಜೊತೆಗೆ ಸುದೀಪ್ ಅವರ ಪಾತ್ರ ಭಾರ್ಗವ್ ಬಕ್ಷಿಯ ಫಸ್ಟ್ಲುಕ್ ಅನ್ನೂ ರಿಲೀಸ್ ಮಾಡಿದೆ.
ಇನ್ನು ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಈಗ ಇದೇ ಮೊದಲ ಬಾರಿಗೆ ಡಾನ್ ಮಾಫಿಯಾ ಕಥೆಯುಳ್ಳ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರನ್ನು ಈ ಸಿನಿಮಾದಲ್ಲಿ ಬಹಳ ಪ್ರಮುಖವಾದ ಪಾತ್ರ ಎಂದು ನಿರ್ದೇಶಕ ಚಂದ್ರ ತಿಳಿಸಿದ್ದಾರೆ.
https://t.co/MgJNODBZwk
ಸದ್ಯಕ್ಕೆ ಚಿತ್ರೀಕರಣಕ್ಕೆ ಸಿದ್ಧತೆಯಲ್ಲಿ ತೊಡಗಿರುವ ಕಬ್ಜ ಚಿತ್ರತಂಡ, ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಆರಂಭಿಸಲಿದೆಯಂತೆ. ಈ ಹಿಂದೆ “ಐ ಲವ್ ಯು’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಷ್ಟೇ ಬಿಡುಗಡೆ ಮಾಡಿದ್ದ ಚಂದ್ರು, ಈ ಬಾರಿ ಬರೋಬ್ಬರಿ ಏಳು ಭಾಷೆಗಳಲ್ಲಿ ತಮ್ಮ ಹೊಸ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಚಂದ್ರು ಪ್ಯಾನ್ ಇಂಡಿಯಾದತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ: ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಶುಭ ಕೋರಿದ ದರ್ಶನ್-ಪುನೀತ್ ರಾಜ್ಕುಮಾರ್..!
ಸಿನಿಮಾ 80ರ ದಶಕದ ಅಂಡರ್ವರ್ಲ್ಡ್ ಆಧಾರಿತ ಚಿತ್ರ ಕಥೆ ಹೊಂದಿದ್ದು, ಈ ಚಿತ್ರದಲ್ಲಿ ರೆಟ್ರೋ ಸ್ಟೈಲಿನಲ್ಲಿ ಉಪ್ಪಿ ಮಿಂಚಲಿದ್ದಾರೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ಗಳಲ್ಲಿ ಕಬ್ಜ ಚಿತ್ರೀಕರಣ ನಡೆಸಲಾಗಿದೆ. ಲಾಕ್ಡೌನ್ ಸಡಿಲಗೊಂಡ ನಂತರ ಮಿನರ್ವ ಮಿಲ್ಬಳಿ ಕೂಡ ದೊಡ್ಡ ಸೆಟ್ ಆಗಿ ಚಿತ್ರೀಕರಣ ನಡೆಸಲಾಗಿತ್ತು. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿದೆ.
ಇದನ್ನೂ ಓದಿ: ಸ್ವರ್ಣದೋಕುಳಿಲಿರುವ ಲಂಕೆಯಲ್ಲಿನ ರಕ್ತಸಿಕ್ತ ಕಥೆಯೇ ಈ ಹೀರೋ..!
ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರಿದ್ದಾರೆ.