'ಪೈಲ್ವಾನ್' - ಕಿಚ್ಚ ಸುದೀಪ್ ನಟನೆಯ ಸಿನಿಮಾ.. ಕನ್ನಡ ಸಿನಿಮಾರಂಗವನ್ನ ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ಹೇಳಲಾಗುತ್ತಿರುವ ಸಿನಿಮಾ. 'ಕೆ.ಜಿ.ಎಫ್' ದಾಖಲೆಯನ್ನ ಸಹ ಮೀರಿ ನಿಲ್ಲುತ್ತೆ ಅನ್ನೋ ಭರವಸೆಯನ್ನ ಹುಟ್ಟಿಸಿರುವ ಸಿನಿಮಾ. ಅದಕ್ಕೆ ತಕ್ಕಂತೆ ಈ ಸಿನಿಮಾದ ಒಂದು ಸಣ್ಣ ಟೀಸರ್ ಬಿಡುಗಡೆಯಾಗಿದೆ. ಟೀಸರ್ನಲ್ಲಿನ ಸುದೀಪ್ ಅವತಾರ ಕಂಡು ಕನ್ನಡ ಚಿತ್ರಪ್ರೇಮಿಗಳು ಹಿರಿ ಹಿರಿ ಹಿಗ್ಗುತ್ತಿದ್ದಾರೆ ಅಷ್ಟೇ ಅಲ್ಲ ಬಾಲಿವುಡ್ನಿಂದ ಟಾಲಿವುಡ್ವರೆಗೂ ಎಲ್ಲ ಸೆಲೆಬ್ರಿಟಗಳೂ . ವ್ಹಾರೆವಾ ಕಿಚ್ಚ ಅಂತಿದ್ದಾರೆ.
ಇನ್ನು ಈ ಟೀಸರ್ ನೋಡಿರುವ ಸಿನಿಮಾ ಮಂದಿ ಮೆಚ್ಚುಗೆಯ ಮಾತುಗಳನ್ನ ಟ್ವಿಟರ್-ಫೇಸ್ಬುಕ್ನ ಗೋಡೆಗಳ ಮೇಲೆ ಬರೆಯುತ್ತಿದ್ದಾರೆ. ಅದರಲ್ಲಿ ಕನ್ನಡ ಸಿನಿಮಾ ಮಂದಿ ಮಾತ್ರ ಅಲ್ಲ... ಟಾಲಿವುಡ್, ಕಾಲಿವುಡ್, ಬಾಲಿವುಡ್ನವರೂ ಇದ್ದಾರೆ. ಅದರಲ್ಲೂ ಸಿನಿಮಾ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ ಬಾಲಿವುಡ್ನ ಬ್ಯಾಡ್ಬಾಯ್ ಹಾಗೂ ಹಣ ಮುದ್ರಿಸುವ ಯಂತ್ರ ಸಲ್ಮಾನ್ ಖಾನ್ ಅವರು ಪೈಲ್ವಾನ್ ಬಗೆಗೆ ಮಾಡಿರೋ ಟ್ವೀಟ್.
ಬಾಲಿವುಡ್ ನಟ ಸಲ್ಮಾನ್ ಖಾನ್, ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಟೀಸರ್ ನೋಡಿ ಸಖತ್ ಇಷ್ಟಪಟ್ಟಿದ್ದಾರಂತೆ. ಅದೇ ಖುಷಿಯಲ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೈಲ್ವಾನ್ ಟೀಸರ್ ಲಿಂಕ್ ಶೇರ್ ಮಾಡಿ, ಮನಸಾರೆ ಹೊಗಳಿದ್ದಾರೆ.
'ನಾವೇನು ಶುರು ಮಾಡಿದ್ವಿ, ಅದನ್ನ ಇನ್ನೊಂದು ಲೆವೆಲ್ಗೆ ನೀವು ತೆಗೆದುಕೊಂಡು ಹೋಗಿದ್ದೀರಿ ಕಿಚ್ಚ ಸುದೀಪ್. ಅಭಿನಂದನೆಗಳು ಹಾಗೂ ಶುಭಾಶಯಗಳು ಒಳ್ಳೆಯದಾಗಲಿ 'ಪೈಲ್ವಾನ'ನಿಗೆ' ಎಂದು ಟ್ವೀಟ್ ಮಾಡಿದ್ದಾರೆ ಸಲ್ಲು.
ಇನ್ನು ಸಲ್ಮಾನ್ ಖಾನ್ ಅವ್ರ ಈ ಮೆಚ್ಚುಗೆ ಮಾತುಗಳನ್ನ ಕೇಳಿ ಸುದೀಪ್ಗೆ ಮನ ತುಂಬಿ ಬಂದಿದೆ. ಇದು ನಿಜಾನಾ ಅಂತ ಅವರಿಗೆ ಅವರೇ ಪ್ರಶ್ನೆ ಮಾಡಿಕೊಳ್ಳುವಷ್ಟು, ಅಚ್ಚರಿಯನ್ನ ಮೂಡಿಸಿದೆ ಸಲ್ಲುಭಾಯ್ ಟ್ವೀಟ್.
'ಇದು ನಿಜಾನಾ? ನಾನಿನ್ನೂ ಮಲಗಿದ್ದೀನಾ? ಸುಲ್ತಾನ್ ಸಲ್ಮಾನ್ ಟ್ವೀಟ್ ಈ ದಿನವನ್ನ ನನ್ನದಾಗಿಸಿದೆ. ಧನ್ಯವಾದಗಳು. ನಿಮ್ಮನ್ನ ಅಪ್ಪಿಕೊಳ್ಳಬೇಕು ಎಂದೆನಿಸುತ್ತಿದೆ' ಎಂದು ಸುದೀಪ್ ಪ್ರತಿಕ್ರಿಸಿದ್ದಾರೆ.
![]()
ಸಲ್ಮಾನ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸುದೀಪ್
ಸಲ್ಮಾನ್ ಹಾಗೂ ಸುದೀಪ್ ಅವರ ಟ್ವೀಟ್ ನೋಡುತ್ತಿದ್ದರೆ, ಇವರಿಬ್ಬರ ಸ್ನೇಹ ಎಂತದ್ದು ಎನ್ನುವುದರ ಅರಿವಾಗುತ್ತೆ. ಅಂದಹಾಗೆ ಸಲ್ಮಾನ್ ಖಾನ್ ಹಾಗೂ ಸುದೀಪ್ ಬಹಳ ಒಳ್ಳೆಯ ಸ್ನೇಹಿತರು. ಇವರಿಬ್ಬರು ಭೇಟಿಯಾಗಿದ್ದು ಕಡಿಮೆಯಾದರೂ ಫೋನ್ನಲ್ಲಿ ಟಚ್ನಲ್ಲಿರುತ್ತಾರೆ. ಒಬ್ಬರ ಸಿನಿಮಾ ಬಗ್ಗೆ ಇನ್ನೊಬ್ಬರು ಮೆಚ್ಚುಗೆಯ ಮಾತುಗಳನ್ನ ಆಡುತ್ತಿರುತ್ತಾರೆ.
ಸಲ್ಲು-ಸುದೀಪ್ ಸ್ನೇಹಕ್ಕೆ ಅಡಿಪಾಯ ಹಾಕಿದ ಸಿಸಿಎಲ್
ಇನ್ನು ಸುದೀಪ್ ಅವರಿಗೂ ಸಲ್ಮಾನ್ಗೂ ಸ್ನೇಹ ಶುರುವಾಗಿದ್ದು ಸಿಸಿಎಲ್ ಮೂಲಕ. ಸುದೀಪ್ ಸಿಸಿಎಲ್ನಲ್ಲಿ ಕರ್ನಾಟಕ ಬುಲ್ಡೋಜರ್ ಟೀಮ್ನ ನಾಯಕರಾಗಿದರೆ, ಮುಂಬೈ ಹೀರೋಸ್ ಟೀಮ್ ಸಲ್ಮಾನ್ ಸಹೋದರ ಸುಹೈಲ್ ಖಾನ್ ಮಾಲೀಕರಾಗಿದ್ದರು. ಹೀಗಾಗಿ ಸಿಸಿಎಲ್ ನಡೆಯುವಾಗ ಸಲ್ಮಾನ್ ಸಹ ಮೈದಾನಕ್ಕೆ ಬರುತ್ತಿದ್ದರು. ಈ ವೇಳೆ ಸುದೀಪ್ ಹಾಗೂ ಸಲ್ಮಾನ್ ನಡುವೆ ಪರಿಚಯವಾಗಿತ್ತು. ಅದು ಸ್ನೇಹಕ್ಕೆ ತಿರುಗಲು ತುಂಬಾ ಸಮಯವೇನು ಹಿಡಿಯಲಿಲ್ಲ.
ಹಾಗೆ ಹಿಂದಿಯಲ್ಲಿ ಸಲ್ಮಾನ್ ನಡೆಸಿಕೊಡುವ 'ಬಿಗ್ಬಾಸ್ 'ಕಾರ್ಯಕ್ರಮ. ಕನ್ನಡದಲ್ಲಿ ಸುದೀಪ್ ಅವರ ನಿರೂಪಣೆಯಲ್ಲಿ ಬರ್ತಿರೋದು ಗೊತ್ತೇ ಇದೆ. ಅಂದಹಾಗೆ ಕನ್ನಡದ ಬಿಗ್ಬಾಸ್ನ ಮೊದಲೆರಡು ಸೀಸನ್ನ ಶೂಟಿಂಗ್ ಪುಣೆಯ ಲೊನಾವಾಲದಲ್ಲಿ ಹಿಂದಿ ವರ್ಷನ್ಗಾಗಿ ಹಾಕಿರೋ ಸೆಟ್ನಲ್ಲಿ ನಡೆಯುತ್ತಿತ್ತು. ಈ ವೇಳೆ ಅಲ್ಲಿ ಹಿಂದಿ ವರ್ಷನ್ನ ಶೂಟ್ನಲ್ಲಿ ಭಾಗವಹಿಸುತ್ತಿದ್ದ ಸಲ್ಮಾನ್ರನ್ನ ಸುದೀಪ್ ಭೇಟಿಯಾಗುತ್ತಿದ್ದರು. 2014ರಲ್ಲಿ 'ಬಿಗ್ಬಾಸ್ ಕನ್ನಡ ಸೀಸನ್ 2' ರ ಶೂಟಿಂಗ್ ವೇಳೆ, ಸಲ್ಮಾನ್ ಅವರನ್ನ ಭೇಟಿಯಾಗಿದ್ದರ ಬಗ್ಗೆ, ಅವರ ಜೊತೆ ಸಮಯ ಕಳೆದಿದ್ದ ಬಗ್ಗೆ ತಮ್ಮ ಟ್ವೀಟರ್ನಲ್ಲಿ ಬರೆದುಕೊಂಡಿದ್ದರು ಕಿಚ್ಚ ಸುದೀಪ್.
![]()
ಸಲ್ಮಾನ್ ಜತೆ ಕಾಲ ಕಳೆದ ಬಗ್ಗೆ ಸುದೀಪ್ ಮಾಡಿರುವ ಟ್ವೀಟ್
ಒಂದಷ್ಟು ಸಮಯವನ್ನ ಸಲ್ಮಾನ್ ಜೊತೆ ಕಳೆಯೋ ಅವಕಾಶ ನಿನ್ನೆ ನನಗೆ ಸಿಕ್ತು. ಒಬ್ಬ ಒಳ್ಳೆಯ ಮನುಷ್ಯನ ಜೊತೆ ಸಮಯ ಕಳೆದಿದ್ದು ನಿಜಕ್ಕೂ ಖುಷಿಯಾಗ್ತಿದೆ. ಸಿನಿಮಾಗಳ ಬಗ್ಗೆ, ಕ್ರಿಕೆಟ್ ಬಗ್ಗೆ, ಬಿಗ್ಬಾಸ್ ಬಗ್ಗೆ ನಾವಿಬ್ರು ತುಂಬಾ ಮಾತನಾಡಿದ್ವಿ...
ಇನ್ನು ಇದಾದ ನಂತರ ಸಲ್ಮಾನ್ ಖಾನ್ ನಟನೆಯ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲಿದ್ದಾರೆ ಎಂಬ ಮಾತು ಸಹ ಕೇಳಿಬಂದಿತ್ತು. ಆದರೆ ಆ ಸಮಯ ಇನ್ನೂ ಕೂಡಿ ಬಂದಿಲ್ಲ. ಒಟ್ಟಾರೆ ಸುದೀಪ್-ಸಲ್ಮಾನ್ ಇಬ್ಬರೂ ಒಂದೇ ಇಂಡಸ್ಟ್ರಿಯವರಾದರೂ ಸಹ, ಇಬ್ಬರು ಒಟ್ಟಿಗೆ ಕೆಲಸ ಮಾಡಿಲ್ಲ ಅಂದರೂನೂ, ಇಬ್ಬರ ನಡುವೆ ಆತ್ಮೀಯ ಸ್ನೇಹ ಇರೋದಂತೂ ಸತ್ಯ.
ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೈಯಲ್ಲಿ ಮಿಂಚಲಿದೆ ಡಿ-ಬಾಸ್ ಕಡಗ
'ಯಜಮಾನ'ನ ಹುಡುಗಿ, ಕೊಡಗಿನ ಬೆಗಡಿ ರಶ್ಮಿಕಾರ ಪ್ರಾಣಿ ಪ್ರೀತಿ...!