ಗಾಡ್ ಆಫ್ ದಿ ಮಾಸ್ ಎಂದೇ ಕರೆಸಿಕೊಳ್ಳುವ ಟಾಲಿವುಡ್ ನಟ ನಂದಮುರಿ ಬಾಲಕೃಷ್ಣ (Nandamuri Balakrishna) ಭಿನಯದ 108ನೇ ಸಿನಿಮಾಕ್ಕೆ ಸ್ಯಾಂಡಲ್ವುಡ್ ನಟಿ ಶ್ರೀಲೀಲಾ (Sreeleela) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಮುನ್ನ ಪೆಳ್ಳಿ ಸಂದಡಿ (PelliSandaD) ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದ ಶ್ರೀಲೀಲಾ ಮೊದಲ ಸಿನಿಮಾದಲ್ಲಿಯೇ ಜನಪ್ರಿಯತೆ ಗಳಿಸಿದ್ದರು. ಇದಾದ ಬಳಿಕ ತೆಲುಗು ಚಿತ್ರರಂಗದಲ್ಲಿ (Tollywood) ಶ್ರೀಲೀಲಾ ಅವರಿಗೆ ಸ್ಟಾರ್ ನಟರ ಜೊತೆಗೆ ಅಭಿನಯಿಸಲು ಸಾಕಷ್ಟು ಆಫರ್ಗಳ ಸುರಿಮಳೆ ಹರಿದುಬರಲಾರಂಭಿಸಿತ್ತು.
NBK108ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್
ಸದ್ಯ ನಟ ನಂದಮೂರಿ ಬಾಲಕೃಷ್ಣ ಅಭಿನಯಿಸುತ್ತಿರುವ 108 ನೇ ಸಿನಿಮಾ ಇಂದು ಅದ್ದೂರಿಯಾಗಿ ಸೆಟ್ಟೇರಿದೆ. ಈ ಸಿನಿಮಾಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದು, ಶೈನ್ ಸ್ಕ್ರೀನ್ ಬ್ಯಾನರ್ನಡಿ ಸಾಹು ಗರಪಟಿ ಮತ್ತು ಹರೀಶ್ ಪೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಿಶೇಷವೆಂದರೆ ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.
ಇಂದು ಶುಭ ಮೂಹೂರ್ತದಲ್ಲಿ NBK108ನೇ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದ್ದು, ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಚಾಲನೆ, ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್ ಮುಹೂರ್ತ ಸೀನ್ಗೆ ಆಕ್ಷನ್ ಕಟ್ ಹೇಳುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಶೀಘ್ರವೇ ಸಿನಿಮಾ ಟೈಟಲ್ ಕೂಡ ಚಿತ್ರತಂಡ ಅನೌನ್ಸ್ ಮಾಡಲಿದೆ.
ನಂದಮೂರಿ ಬಾಲಕೃಷ್ಣ ಜೊತೆಗೆ ಶ್ರೀಲೀಲಾ ಡ್ಯೂಯೆಟ್
ಆಕ್ಷನ್ ಕಮ್ ಮಾಸ್ ಹೀರೋ ಆಗಿರುವ ನಟ ನಂದಮೂರಿ ಬಾಲಕೃಷ್ಣ ಅವರು ಟಾಲಿವುಡ್ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಹೆಣೆದಿರುವ ಅನಿಲ್ ರವಿಪುಡಿ ಅವರು, ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನೂ ಈ ಸಿನಿಮಾಕ್ಕೆ ಎಸ್. ತಮನ್ ಸಂಗೀತ ಸಂಯೋಜಿಸುತ್ತಿದ್ದು, ಖ್ಯಾತ ಸಾಹಸ ನಿರ್ದೇಶಕ ವಿ. ವೆಂಕಟ್ ಮಾಸ್ಟರ್ ಸಾಹಸ ನಿರ್ದೇಶನ ಮಾಡಲಿದ್ದಾರೆ. ಇಂದಿನಿಂದಲೇ ಚಿತ್ರೀಕರಣ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಶ್ರೀಲೀಲಾ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆ ಮೊದಲ ಬಾರಿಗೆ ನಂದಮೂರಿ ಬಾಲಕೃಷ್ಣ ಅವರೊಂದಿಗೆ ಶ್ರೀಲೀಲಾ ಡ್ಯೂಯೆಟ್ ಆಡಲಿದ್ದು, ತೆರೆ ಮೇಲೆ ಈ ಜೋಡಿ ಅಭಿಮಾನಿಗಳನ್ನು ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.
ಕಿಸ್ ನಟಿ ಕೈಯಲ್ಲಿದೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು
ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ ನಂತರ ಭರಾಟೆ, ಬೈಟು ಲವ್ ಎಂಬ ಮೂರು ಚಿತ್ರಗಳಲ್ಲಿ ನಟಿಸಿ ಇದೀಗ ತೆಲುಗು ಚಿತ್ರರಂಗಕ್ಕೆ ಹಾರಿದ್ದಾರೆ. ಪೆಳ್ಳಿ ಸಂದಡಿ’ ಚಿತ್ರದಲ್ಲಿ ನಟಿಸಿ ಮೊದಲ ಸಿನಿಮಾದಲ್ಲಿಯೇ ಸೈ ಎನಿಸಿಕೊಂಡ ಶ್ರೀ ಲೀಲಾ ಸದ್ಯ ತೆಲುಗಿನಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಇನ್ನೂ ಹೆಸರಿಡದ ಚಿತ್ರ, ಧಮಾಕಾ ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಶನ್ನ ಚಿತ್ರ, ನಿತಿನ್ ಅಭಿನಯದ 32ನೇ ಚಿತ್ರ, ವೈಷ್ಣವ್ ತೇಜಾ ಅಭಿನಯದ 4ನೇ ಚಿತ್ರ, ಅನಗನಗಾ ಒಕ ರೋಜು ಹೀಗೆ ಸಾಲು, ಸಾಲು ಸಿನಿಮಾಗೆ ಸಹಿ ಹಾಕಿರುವ ಶ್ರೀಲೀಲಾ ಸುಮಾರು ಎರಡರಿಂದ ಮೂರು ವರ್ಷಗಳು ಬ್ಯುಸಿಯಾಗಿರುವುದು ಖಂಡಿತ ಎಂದೇ ಹೇಳಬಹುದು.
ಒಟ್ಟಾರೆ ಟಾಲಿವುಡ್ನಲ್ಲಿ ಮಿಂಚುತ್ತಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆಗೂ ಸೆಡ್ಡು ಹೊಡೆದು ಮುನ್ನುಗ್ಗುತ್ತಿರುವ ಶ್ರೀಲೀಲಾಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ