news18-kannada Updated:August 24, 2020, 10:33 AM IST
ಎಸ್ ಪಿ ಬಾಲಸುಬ್ರಹ್ಮಣ್ಯಂ
ಗಾನ ಗಂಧರ್ವ, ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಕೊರೋನಾ ವೈರಸ್ ಅಂಟಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿಗೆ ಈಗ ಕೊರೋನಾ ವರದಿ ನೆಗೆಟಿವ್ ಬಂದಿದೆ. ಇದು ಅವರ ಅಭಿಮಾನಿ ವಲಯಕ್ಕೆ ಸಂತಸ ತಂದಿದೆ. ಎಸ್ಪಿಬಿ ಕೊರೋನಾ ಸೋಂಕಿಗೆ ತುತ್ತಾಗಿ ಕಳೆದ ಎರಡು ವಾರಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಸ್ಪಿಬಿ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿ ಹರಿದಾಡಿದ ಬೆನ್ನಲ್ಲೇ ಅವರು ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದರು. ಕೊನೆಗೂ ಅಭಿಮಾನಿಗಳ ಕೋರಿಕೆ ಈಡೇರಿದೆ.
ಈ ಬಗ್ಗೆ ಗೀತ ಸಾಹಿತಿ ಕೆ. ಕಲ್ಯಾಣ್ ಮಾಹಿತಿ ನೀಡಿದ್ದಾರೆ. ಎಸ್ಪಿಬಿ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಕೊರೋನಾ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ. ಕೊರೋನಾ ವೈರಸ್ ಬಂದಾಗ ದೇಹದಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತವೆ. ಆದರೆ, ಕೊರೋನಾದಿಂದ ಈಗ ಅವರು ಮುಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಾಣುವ ಆಶಾಭಾವ ಮೂಡಿದೆ.
ಇದನ್ನೂ ಓದಿ: ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿರ; ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಆಸ್ಪತ್ರೆ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಥಮ್ಸ್ಅಪ್ ತೋರಿಸಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿರುವುದರಿಂದ ಅಭಿಮಾನಿಗಳು ಕಂಗಾಲಾಗಿದ್ದರು. ಆದರೆ ಈಗ ಹೊಸ ಸುದ್ದಿ ಕೇಳಿ ಅಭಿಮಾನಿಗಳು ಕೊಂಚ ನಿರಾಳರಾಗಿದ್ದರು.
ಸ್ಯಾಂಡಲ್ವುಡ್, ಬಾಲಿವುಡ್ ಸೇರಿದಂತೆ ದೇಶದ ಹಲವು ಭಾಷೆಗಳ ಚಿತ್ರರಂಗದಲ್ಲಿ ಹಾಡುಗಳಿಗೆ ದನಿಯಾಗಿರುವ ಎಸ್ಪಿಬಿ ಇದುವರೆಗೂ ಸುಮಾರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
Published by:
Rajesh Duggumane
First published:
August 24, 2020, 10:08 AM IST