ತಮ್ಮ ಮಧುರವಾದ ಕಂಠದಿಂದ ಹಾಡುಗಳಿಗೆ ಜೀವ ತುಂಬುತ್ತಿದ್ದ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರು ಈ ಸಾಲಿನ ಪದ್ಮವಿಭೂಷಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಭಾರತ ಸರ್ಕಾರ ಸಾಧಕರಿಗೆ ಪದ್ಮವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ವರ್ಷ 7 ಮಂದಿ ಪದ್ಮವಿಭೂಷಣ ಹಾಗೂ 10 ಮಂದಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಸ್.ಪಿ.ಬಿ. ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ. 2020ರ ಸೆ.25ರಂದು ಗಾನ ಕೋಗಿಲೆ ಬಾಲಸುಬ್ರಹ್ಮಣ್ಯಂ ಅವರು ಕೊನೆಯುಸಿರೆಳೆದಿದ್ದರು. ಕಳೆದ 50 ವರ್ಷಗಳಿಂದ ಅನೇಕ ಭಾಷೆಗಳಲ್ಲಿ ಹಾಡುವ ಮೂಲಕ ಕೋಟ್ಯಂತರ ಜನರ ಮನದಲ್ಲಿ ಜಾಗ ಪಡೆದ ಗಾನ ದಿಗ್ಗಜ ಎಸ್ಪಿ ಬಾಲಸುಬ್ರಹ್ಮಣ್ಯಂ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಪ್ರಕಟಿಸುತ್ತಿದ್ದಂತೆಯೇ ಬಾಲಸುಬ್ರಹ್ಮಣ್ಯಂ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಗಾಯಕನಿಗೆ ಸಂದ ಪುರಸ್ಕಾರಕ್ಕೆ ಸೆಲೆಬ್ರಿಟಿಗಳೂ ಸಹ ಸಂಭ್ರಮದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಖುಷಿ ಪಡುತ್ತಿದ್ದಾರೆ.
ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಅವರು ಕೆಲವೇ ಗಂಟೆಗಳ ಹಿಂದೆಯಷ್ಟೆ ಈ ಟ್ವೀಟ್ ಮಾಡಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ಸಂದಿರುವುದು ಅತೀವ ಸಂತೋಷವನ್ನು ತಂದಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಜೀವಂತ ಇರುವ ಗಾನ ಮಾಂತ್ರಿಕನಿಗೆ ಯಾವ ಪ್ರಶಸ್ತಿಯೂ ಕಡಿಮೆಯೇ. ಪ್ರಶಸ್ತಿಗೆ ಗೌರವ ಹೆಚ್ಚಿಸುವ ಪ್ರತಿಭೆ ಹಾಗೂ ವ್ಯಕ್ತಿತ್ವ ಅವರದಾಗಿತ್ತು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ ತಾಯಿ ಶಾರದೆಯ ವರಪುತ್ರ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ಸಂದಿರುವುದು ಅತೀವ ಸಂತೋಷವನ್ನು ತಂದಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಜೀವಂತ ಇರುವ ಗಾನ ಮಾಂತ್ರಿಕನಿಗೆ ಯಾವ ಪ್ರಶಸ್ತಿಯೂ ಕಡಿಮೆಯೇ. ಪ್ರಶಸ್ತಿಗೆ ಗೌರವ ಹೆಚ್ಚಿಸುವ ಪ್ರತಿಭೆ ಹಾಗೂ ವ್ಯಕ್ತಿತ್ವ ಅವರದಾಗಿತ್ತು#SPB pic.twitter.com/ujZO0xvuQV
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) January 26, 2021
ಕನ್ನಡದ ಸಾಹಿತಿ ಉಪೇಂದ್ರ ಕುಮಾರ್ ಅವರಿಗಾಗಿ 12 ಗಂಟೆಗಳಲ್ಲಿ ಎಸ್ಪಿಬಿ 21 ಕನ್ನಡ ಹಾಡುಗಳನ್ನು ಹಾಡಿ ರೆಕಾರ್ಡ್ ಮಾಡಿದ್ದರು. ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ 19 ಹಾಡುಗಳನ್ನೂ ರೆಕಾರ್ಡ್ ಮಾಡಿದ್ದರು. ಅಂತೆಯೇ ಹಿಂದಿಯಲ್ಲಿ 16 ಹಾಡುಗಳನ್ನು ಧ್ವನಿ ಮುದ್ರಿಸಿದ್ದರಂತೆ.
ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಹೆಚ್ಚು ಹಾಡಿರುವ ಗಾಯಕ ಬಾಲಸುಬ್ರಹ್ಮಣ್ಯಂ. ಅತಿ ಹೆಚ್ಚು ಹಾಡು ಹಾಡಿರುವ ಕಾರಣದಿಂದಲೇ ಅವರ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕ ಸೇರಿದೆ. ವರ್ಷದಲ್ಲಿ 930 ಹಾಡುಗಳು ಅಂದರೆ, ದಿನಕ್ಕೆ ಅಂದಾಜು 3 ಹಾಡುಗಳು ಎಂದರೂ 2018ರ ಹೊತ್ತಿಗೆ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಖಾಸಗಿ ಆಲ್ಬಂಗಳೂ ಇವರ ಖಾತೆಯಲ್ಲಿವೆ.
ಎಪಿಬಿ ಪಡೆದ ಪ್ರಶಸ್ತಿಗಳ ವಿವಿರ:
ಎಸ್ಪಿಬಿ ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿ ಪಡೆದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರು. ತೆಲುಗಿನ ಸಾಗರ ಸಂಗಮಂ, ರುದ್ರವೀಣಾ ಹಾಗೂ ಶಂಕರಾಭರಣಂ, ತಮಿಳಿನ ಮಿನ್ಸಾರೆ ಕನವು, ಕನ್ನಡದ ಸಂಗೀತ ಸಾಗರ ಪಂಚಾಕ್ಷರಿ ಗವಾಯಿ ಸಿನಿಮಾಗಳಿಗೆ ಒಟ್ಟು 6 ರಾಷ್ಟ್ರೀಯ ಪ್ರಶಸ್ತರಿ ಪಡೆದಿದ್ದಾರೆ. ಉಳಿದಂತೆ ಬಾಲಿವುಡ್ನ ಫಿಲ್ಮ್ಫೇರ್ ಪ್ರಶಸ್ತಿ, 25 ನಂದಿ ಅವಾರ್ಡ್, ಪದ್ಮಶ್ರೀ (2001), ಪದ್ಮಭೂಷಣ(2011) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಗಂಡನ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ನಟಿ ನಮಿತಾ..!
ದಕ್ಷಿಣ ಭಾರತದ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನವಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲೂ ಸಾಧನೆ ಮಾಡಿದ್ದಾರೆ. ಇವರ ನಿರ್ವಹಣೆಯಲ್ಲಿ ಮೂಡಿ ಬರುತ್ತಿದ್ದ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮವಂತೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ