ಮುಂಬೈ,(ಆ.05): ಮಾರಕ ಕಾಯಿಲೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಸ್ನೇಹಿತರ ದಿನದ ಪ್ರಯುಕ್ತ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತಮ್ಮ ಗೆಳತಿ ಸುಸಾನೆ ಖಾನ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅಂದಹಾಗೆ ಈ ಫೋಟೋವನ್ನು ಕ್ಲಿಕ್ಕಿಸಿದ್ದು ಹೃತಿಕ್ ರೋಷನ್.
ಕ್ಯಾನ್ಸರ್ ಇರುವ ಕಾರಣ ತಮ್ಮ ಕೇಶ ಮುಂಡನ ಮಾಡಿಸಿಕೊಂಡಿರುವ ಸೋನಾಲಿ ಅದೇ ಲುಕ್ನಲ್ಲಿ ಫೋಟೋಗೆ ಪೋಸ್ ನೀಡಿ, "ಈ ಕ್ಷಣದಲ್ಲಿ ನಾನು ನಿಜವಾಗಿಯೂ ತುಂಬಾ ಖುಷಿಯಾಗಿದ್ದೇನೆ. ಹೀಗೆ ಹೇಳಿದರೆ ಜನರು ನನ್ನನ್ನು ವಿಚಿತ್ರವಾಗಿ ನೋಡುತ್ತಾರೆ. ಆದರೆ ನಾನು ಜೀವನದ ಪ್ರತಿಕ್ಷಣದ ಬಗ್ಗೆ ಗಮನ ಹರಿಸುತ್ತಿದ್ದೇನೆ. ಖುಷಿಯನ್ನು ಹುಡುಕಲು ಮತ್ತು ಸದಾ ಸಂತಸದಿಂದ ಇರಲು ಸಿಗುವ ಪ್ರತಿಯೊಂದು ಅವಕಾಶಕ್ಕಾಗಿ ಕಾಯುತ್ತಿದ್ದೇನೆ," ಎಂದು ಕ್ಯಾಪ್ಶನ್ ಬರೆಯುವ ಮೂಲಕ ಪೋಟೋವನ್ನು ಹಾಕಿಕೊಂಡಿದ್ದಾರೆ.
"ನಾನು ನೋವು ಅನುಭವಿಸುತ್ತಿದ್ದ ಮತ್ತು ನಿಶ್ಯಕ್ತಳಾಗಿದ್ದ ಕ್ಷಣಗಳಿವೆ. ಆದರೆ ನನಗೆ ಇಷ್ಟವಾಗುವುದನ್ನೇ ನಾನು ಮಾಡುತ್ತಿದ್ದೇನೆ. ನನ್ನನ್ನು ಪ್ರೀತಿಸುವ ಜನರೊಂದಿಗೆ ನಾನು ಸಮಯ ಕಳೆಯುತ್ತಿದ್ದೇನೆ. ನನ್ನ ಸ್ನೇಹಿತರು, ನನ್ನ ಪರಿಸ್ಥಿತಿ ತಿಳಿದ ಮೇಲೆ ನನಗೆ ಧೈರ್ಯ ತುಂಬಿದವರಿಗೆ, ನನ್ನೊಂದಿಗೆ ಇರಲು ಇಚ್ಛಿಸಿದವರಿಗೆ ಹಾಗೂ ನನಗೆ ಸಹಾಯ ಮಾಡಿದವರಿಗೆ ನಾನು ತುಂಬಾ ಧನ್ಯವಾದ ತಿಳಿಸುತ್ತೇನೆ. ಅವರ ಬಿಡುವಿಲ್ಲದ ಕೆಲಸದ ನಡುವೆಯೂ, ನನ್ನನ್ನು ಒಂಟಿಯಾಗಿರಲು ಬಿಡದೆ ಭೇಟಿ ಮಾಡಿ, ಫೋನ್, ಮೆಸೇಜ್ ಮಾಡಿ ನನ್ನ ಜೊತೆ ಖುಷಿಯಿಂದ ಮಾತನಾಡಿದ್ದಾರೆ. ನೀವು ನನಗೆ ತೋರಿದ ಪ್ರೀತಿ, ವಿಶ್ವಾಸ ಮತ್ತು ಗೆಳೆತನಕ್ಕೆ ನಾನು ಅಭಾರಿಯಾಗಿದ್ದೇನೆ, ಎಲ್ಲರಿಗೂ ಸ್ನೇಹಿತರ ದಿನದ ಶುಭಾಷಯಗಳು," ಎಂದು ಶುಭಕೋರಿದ್ದಾರೆ.
ಹೈ-ಗ್ರೇಡ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 43 ವರ್ಷದ ಸೋನಾಲಿ ಬೇಂದ್ರೆ, ಈಗ ಅಲಂಕಾರ ಮಾಡಿಕೊಳ್ಳಲು ಕಡಿಮೆ ಸಮಯ ತೆಗೆದುಕೊಳ್ಳುತ್ತಾರಂತೆ. ಏಕೆಂದರೆ "ನನಗೆ ಈಗ ತಲೆಕೂದಲೆ ಇಲ್ಲ. ಬೋಳು ತಲೆಯೇ ಸುಂದರವಾಗಿ ಕಾಣುತ್ತದೆ. ನಾನು ಇದರಲ್ಲಿ ಸಕಾರಾತ್ಮಕತೆಯನ್ನು ಹುಡುಕಿಕೊಂಡಿದ್ದೇನೆ," ಎಂದು ಹೇಳಿದ್ದಾರೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ