ಭಾರತದ ನೈಟಿಂಗೇಲ್, ಸಂಗೀತ ಲೋಕದ ದಂತಕಥೆ, ಬಾಲಿವುಡ್’ನ (Bollywood) ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತಿದೆ. ಕೋವಿಡ್ ಜೊತೆಗೆ ನ್ಯೂಮೋನಿಯಾದಿಂದ ಲತಾ ಮಂಗೇಶ್ಕರ್ ಬಳಲುತ್ತಿದ್ದಾರೆ. ಹೀಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ (Breach Candy) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 2 ವಾರಗಳಿಂದ ಐಸಿಯುನಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರು ಖ್ಯಾತ ಗಾಯಕಿಯ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಮತ್ತೊಂದೆಡೆ ದೀದಿ ಆರೋಗ್ಯಕ್ಕಾಗಿ ದೇಶಾದ್ಯಂತ ಪ್ರಾರ್ಥನೆ ನಡೆಯುತ್ತಿದೆ. ಅಭಿಮಾನಿಗಳು ಲತಾ ಮಂಗೇಶ್ಕರ್ ಆರೋಗ್ಯ ಸುಧಾರಣೆಗಾಗಿ ದೇಗುಲಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಬಾಲಿವುಡ್ ಸಿನಿರಂಗದ ದಿಗ್ಗಜರು, ಭಾರತೀಯ ಚಿತ್ರರಂಗದ ಪ್ರಮುಖರು, ಗಣ್ಯಾತಿಗಣ್ಯರು, ಜನಸಾಮಾನ್ಯರು “ಮತ್ತೆ ಹಾಡಲಿ ಕೋಗಿಲೆ” ಅಂತ ಆಶಿಸುತ್ತಿದ್ದಾರೆ. ಹಾಗಿದ್ರೆ ಸದ್ಯ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ (Health Condition) ಹೇಗಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈ ಮಾಹಿತಿಗಾಗಿ ಮುಂದೆ ಓದಿ...
2 ವಾರಗಳಿಂದ ಐಸಿಯುನಲ್ಲಿ ಚಿಕಿತ್ಸೆ
92 ವರ್ಷದ ಲತಾ ಮಂಗೇಶ್ಕರ್ ಅವ್ರಿಗೆ ಜನವರಿ 9ರಂದು ಕೋವಿಡ್ ಪಾಸಿಟಿವ್ ಇರೋದು ದೃಢಪಟ್ಟಿತ್ತು. ಜೊತೆಗೆ ಅವರು ನ್ಯೂಮೋನಿಯಾದಿಂದಲೂ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಪ್ರತೀತ್ ಸಮ್ದಾನಿ ನೇತೃತ್ವದ ಐವರು ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಕಳೆದ 2 ವಾರಗಳಿಂದಲೂ ಲತಾ ಮಂಗೇಶ್ಕರ್ ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಲತಾ ದೀದಿ ಆರೋಗ್ಯದ ಕುರಿತಂತೆ ಚಿಂತಿತರಾಗಿದ್ದಾರೆ. ಅವರ ಹೆಲ್ತ್ ಬುಲೆಟಿನ್ ಗಾಗಿ ಪ್ರತಿದಿನ ಕಾಯುತ್ತಾರೆ. ಆದ್ರೆ ಅವರ ಆರೋಗ್ಯದ ಕುರಿತಂತೆ ಯಾವುದೇ ಆತಂಕ ಬೇಡ ಅಂತ ವೈದ್ಯರು ಹೇಳಿದ್ದಾರೆ.
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಹಿರಿಯ ಗಾಯಕಿ
“
ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ” ಅಂತ ಬ್ರೀಚ್ ಕ್ಯಾಂಡಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇನ್ನು ಲತಾ ದೀದಿ ಆರೋಗ್ಯದ ಕುರಿತಂತೆ ಅವರದ್ದೇ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರಕಟಣೆ ಹೊರಡಿಸಲಾಗಿದೆ. “ಲತಾ ಮಂಗೇಶ್ಕರ್ ಅವರು ಮೊದಲಿನಿಂದಲೂ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಕೊಂಚ ಚೇತರಿಸಿಕೊಂಡಿದ್ದಾರೆ” ಅಂತ ಸ್ಪಷ್ಟನೆ ನೀಡಲಾಗಿದೆ.
ಲತಾ ಮಂಗೇಶ್ಕರ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ
ಬರೀ ಈಗಷ್ಟೇ ಅಲ್ಲ, ಈ ಹಿಂದೆಯೂ ಲತಾ ಮಂಗೇಶ್ಕರ್ ಆರೋಗ್ಯದ ಕುರಿತು ವದಂತಿಗಳು ಹಬ್ಬುತ್ತಲೇ ಇತ್ತು. ಈಗ ಐಸಿಯುಗೆ ಸೇರಿದಾಗಿನಿಂದಲೂ ಕಿಡಿಗೇಡಿಗಳು ಇಲ್ಲಸಲ್ಲದ ಸುದ್ದಿ ಹರಡುತ್ತಲೇ ಇದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಲತಾ ಕುಟುಂಬಸ್ಥರು ಹಾಗೂ ಆಸ್ಪತ್ರೆ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಲತಾ ಮಂಗೇಶ್ಕರ್ ಆರೋಗ್ಯದ ಕುರಿತಂತೆ ದಯವಿಟ್ಟು ಸುಳ್ಳು ಸುದ್ದಿ ಹರಡಬೇಡಿ. ಆಸ್ಪತ್ರೆಯಿಂದ ಹೊರಡಿಸೋ ಹೆಲ್ತ್ ಬುಲೆಟಿನ್ ಮಾತ್ರ ಅಭಿಮಾನಿಗಳು ಪರಿಶೀಲನೆ ಮಾಡಿ” ಎಂದಿದ್ದಾರೆ. ಅಲ್ಲದೇ ಲತಾ ದೀದಿ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳಲ್ಲಿ ಡಾ. ಪ್ರತೀತ್ ಸಮ್ದಾನಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗಾಯಕಿ ಲತಾ ಮಂಗೇಶ್ಕರ್ ಹುಟ್ಟು ಹಬ್ಬದ ಅಪರೂಪದ ಕ್ಷಣಗಳು
ಇನ್ನು ಅನುಪಮ್ ಖೇರ್ ಸೇರಿದಂತೆ ಬಾಲಿವುಡ್ ದಿಗ್ಗಜರು ಲತಾ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. “ಲತಾ ದೀದಿ ಗುಣಮುಖರಾಗಿ, ಬೇಗ ಮನೆಗೆ ಮರಳಲಿ” ಅಂತ ಪ್ರಾರ್ಥಿಸಿದ್ದಾರೆ.
(ಬರಹ: ಅಣ್ಣಪ್ಪ ಆಚಾರ್ಯ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ