ಬಿಗ್‌ಬಾಸ್ ರನ್ನರ್ ಅಪ್, ಸಂಗೀತ ನಿರ್ದೇಶಕ, ಗಾಯಕ ನವೀನ್ ಸಜ್ಜು ಈಗ ಎಲ್ಲಿದ್ದಾರಪ್ಪ?. ಅದು ಕೂಡ ಕೊರೋನಾ ಕಾಲದಲ್ಲಿ ಅವರೇನು ಮಾಡುತ್ತಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈ ಕುತೂಹಲಕಾರಿ ಪ್ರಶ್ನೆಗೆ ಹೀರೋ ಆಗಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಸಜ್ಜು ಎಂಬ ಉತ್ತರವೊಂದು ಸಿಕ್ಕಿದೆ.
ಹೌದು, ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟರಲ್ಲಾಗಲೇ ನವೀನ್ ಸಜ್ಜು ನಾಯಕನಾಗಿ ಪದಾರ್ಪಣೆ ಮಾಡಬೇಕಿತ್ತು. ಬಿಗ್ ಬಾಸ್ನಿಂದ ಬಂದ ಬೆನ್ನಲ್ಲೇ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಕೇಳಿ ಬಂದಿತ್ತು. ಆದರೆ ಆ ಸಿನಿಮಾ ಕಾರಣಾಂತರಗಳಿಂದ ಮುಂದಕ್ಕೆ ಹೋಗಲೇ ಇಲ್ಲ. ಇದಾಗ್ಯೂ ನವೀನ್ ಸಜ್ಜು ಒಂದಷ್ಟು ಕಥೆಗಳನ್ನು ಕೇಳಿದ್ದರು. ಅದರಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್ ಹೇಳಿದ ಕಥೆಗೆ ಓಕೆ ಕೂಡ ಹೇಳಿದ್ದರು.
ಇನ್ನೇನು ಸಿನಿಮಾ ಶುರುವಾಗಲಿದೆ. ಸಜ್ಜು ಸಕಲ ಸಿದ್ದತೆಗಳೊಂದಿಗೆ ಎಂಟ್ರಿ ಕೊಡಲಿದ್ದಾರೆ ಎನ್ನುವಾಗಲೇ ಕೊರೋನಾ ಎಂಬ ಮಹಾಮಾರಿ ಅಪ್ಪಳಿಸಿತು. ಇದಾಗ್ಯೂ ಈ ಚಿತ್ರತಂಡ ತಮ್ಮ ಕೆಲಸಗಳನ್ನು ಅಲ್ಲಿಗೆ ಬಿಡಲಿಲ್ಲ. ಲಾಕ್ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಚಿತ್ರಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಇನ್ನೂ ಹೆಸರಿಡದ ಈ ಚಿತ್ರದ ಸ್ಕ್ರೀಪ್ಟ್ ಪೂಜೆಯನ್ನು ಸಹ ಮುಗಿಸಿದ್ದಾರೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಡೈರೆಕ್ಟರ್ ಕುಮಾರ್, ನವೀನ್ ಸಜ್ಜು ಅವರನ್ನು ನಾಯಕರಾಗಿ ಪರಿಚಯಿಸುವ ಸಂಪೂರ್ಣ ಜವಾಬ್ದಾರಿ ಹೆಗಲೇರಿಸಿಕೊಂಡಿದ್ದಾರೆ.
ಕುಮಾರ್ ಅವರಿಗೆ ಇದು 2ನೇ ಚಿತ್ರವಾಗಿದ್ದು, ಈ ಬಾರಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯೊಂದಿಗೆ ಅತ್ಯುತ್ತಮ ಸಂದೇಶ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರದ ಟೈಟಲ್ ಹಾಗೂ ತಾರಾಬಳಗದ ಕುರಿತಾದ ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ