ದಕ್ಷಿಣ ಭಾರತದ 4 ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ "ಸೈಮಾ" ಅವಾರ್ಡ್ಸ್ 2022 (SIIMA Awards 2022) ಈ ಬಾರಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ನೆನಪಿನೊಂದಿಗೆ ಸೆಪ್ಟೆಂಬರ್ 10 ಹಾಗೂ 11ರಂದು ಬೆಂಗಳೂರಿನ (Bengaluru) ಅರಮನೆ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸೈಮಾ 10ನೇ ಆವೃತ್ತಿಯಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ವಿವಿಧ ಸಿನಿಮಾಗಳು ಇಲ್ಲಿ ನಾಮನಿರ್ದೇಶನಗೊಂಡಿವೆ. ಕನ್ನಡದಿಂದ ಮೂರು ಚಿತ್ರಗಳು ನಾಮಿನೇಟ್ ಆಗಿವೆ.
ಬೆಂಗಳೂರಲ್ಲಿ ಕಾರ್ಯಕ್ರಮ ನಡೆಸಲು 2 ಕಾರಣ
"SIIMA" 2022 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲು ಖುಷಿಯಾಗುತ್ತಿದೆ. ಇದು ಹತ್ತನೇ ವರ್ಷದ ಪ್ರಶಸ್ತಿ ಸಮಾರಂಭ ಕೂಡ. ಬೆಂಗಳೂರಿನಲ್ಲಿ "ಸೈಮಾ" ಅವಾರ್ಡ್ಸ್ ನಡೆಸಲು ಎರಡು ಪ್ರಮುಖ ಕಾರಣಗಳಿದೆ. ಒಂದು ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ. ಮತ್ತೊಂದು ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾ ದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ ಹಾಗಾಗಿ ಈ ಬಾರಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ಬಂದಿರುವ ಗಣ್ಯರಿಗೆ ಹಾಗೂ ಪ್ರಾಯೋಜಕರಿಗೆ ಧನ್ಯವಾದ ಎಂದು "ಸೈಮಾ" ಅವಾರ್ಡ್ಸ್ ನ ಮುಖ್ಯಸ್ಥೆ ಬೃಂದಾ ಪ್ರಸಾದ್ ಹೇಳಿದ್ದಾರೆ
ಒಂದು ಪ್ರಶಸ್ತಿ ಸಮಾರಂಭವನ್ನು 10 ವರ್ಷಗಳ ಕಾಲ ನಡೆಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ನಾನು ಮೊದಲು ಇದರ ಉಸ್ತುವಾರಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಈ ಬಾರಿ ಹತ್ತನೇ ವರ್ಷದ "ಸೈಮಾ" ಅವಾರ್ಡ್ಸ್ ನನಗೆ ಪ್ರಿಯವಾದ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖುಷಿ ಎನ್ನುತ್ತಾರೆ ಖ್ಯಾತ ನಟ ರಾಣಾ ದಗ್ಗುಬಾಟಿ.
ನನಗೆ "ಸೈಮಾ" ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು
ನನಗೆ "ಸೈಮಾ" ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾ ಗೆ ಹೋಗಿದ್ದು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ನಿಮ್ಮೆಲ್ಲರಿಗೂ ನಮ್ಮೂರಿಗೆ ಆತ್ಮೀಯ ಸ್ವಾಗತ. ಪದೇ ಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ ಎಂದು ನಟ ಡಾಲಿ ಧನಂಜಯ ಹಾರೈಸಿದರು.
ನನಗೆ ಬೆಂಗಳೂರು ತುಂಬಾ ಇಷ್ಟ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಹಲವು ದಿನಗಳನ್ನು ಇಲ್ಲೇ ಕಳೆದಿದ್ದೇನೆ. ಈ ಬಾರಿ ಅಪ್ಪು ಅವರ ಸ್ಮರಣೆಯೊಂದಿಗೆ ಈ ಸಮಾರಂಭ ನಡೆಯುತ್ತಿದೆ ಎಂದು ನಟಿ ಶಾನ್ವಿ ಶ್ರೀವಾಸ್ತವ್ ತಿಳಿಸಿದರು. ಇದೇ ವೇಳೆ ನಟಿಯರಾದ ಫರಿಯಾ ಅಬ್ದುಲ್ಲಾ, ಶ್ರೀಲೀಲಾ ಹಾಗೂ ಕೆಲವು ಪ್ರಾಯೋಜಕರು ಸಹ "ಸೈಮಾ" ಬಗ್ಗೆ ಮಾತನಾಡಿದರು.
ಕನ್ನಡದ ಮೂರು ಚಿತ್ರಗಳು ನಾಮಿನೇಟ್
ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡದಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳ ವಿವರವನ್ನು ಸೈಮಾ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಕನ್ನಡದಲ್ಲಿ 2021ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ತರುಣ್ ನಿರ್ದೇಶನದ ರಾಬರ್ಟ್, ನಟ ದಿವಂಗತ ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’, ರಾಜ್ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’, ಚಿತ್ರಗಳು ನಾಮ ನಿರ್ದೇಶನಗೊಂಡಿದೆ.
ಇನ್ನು ಕನ್ನಡದಲ್ಲಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳ ಪೈಕಿ ರಾಬರ್ಟ್ ಮುಂಚೂಣಿಯಲ್ಲಿದೆ. 10 ವಿಭಾಗಗಳಲ್ಲಿ ಈ ಸಿನಿಮಾ ನಾಮನಿರ್ದೇಶನಗೊಂಡಿದೆ. ಗರುಡ ಗಮನ ವೃಷಭ ವಾಹನ ಸಿನಿಮಾ 8 ವಿಭಾಗಗಳಲ್ಲಿ ಹಾಗೂ ಯುವರತ್ನ ಏಳು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ