ಕೊರೋನಾದಿಂದಾಗಿ ಅತಿಹೆಚ್ಚು ಹೊಡೆತಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಚಿತ್ರರಂಗ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅದಕ್ಕೆ ಕಾರಣ ಕಳೆದ ವರ್ಷದ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಿಸುವ ಹಲವು ದಿನ ಮೊದಲೇ ಥಿಯೇಟರ್‌ಗಳನ್ನು ಬಂದ್ ಮಾಡಿದ್ದು ಗೊತ್ತೇ ಇದೆ. ಆ ಬಳಿಕ ಸಿನಿಮಾ, ಸೀರಿಯಲ್ ಶೂಟಿಂಗ್ ಕೂಡ ಸ್ಥಗಿತಗೊಂಡವು. ಇನ್ನು ಲಾಕ್‌ಡೌನ್ ಅನ್‌ಲಾಕ್ ಆಗಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಕೆಲಸಗಳು ನಡೆಯುತ್ತಿದ್ದರೂ, ಚಿತ್ರರಂಗಕ್ಕೆ ಅನುಮತಿ ದೊರೆತಿರಲಿಲ್ಲ. ಅರ್ಥಾತ್ ಥಿಯೇಟರ್‌ಗಳಲ್ಲಿ ಶೇಕಡಾ 50ರಷ್ಟು ನಿರ್ಬಂಧ ಹೇರಲಾಗಿತ್ತು. ಇನ್ನು ಎಲ್ಲರೂ ಸರಿಯಾಯಿತು, ವರ್ಷವಾದ ಬಳಿಕವಾದರೂ ಸಮಸ್ಯೆ ಬಗೆಹರಿಯಿತು ಅಂತ ಅಂದುಕೊಂಡರೆ, ಅಷ್ಟರಲ್ಲಾಗಲೇ ಎರಡನೇ ಅಲೆ ಆಟ ಶುರುವಾಯಿತು. ಇನ್ನೇನೆ ಚೇತರಿಸಿಕೊಳ್ಳುತ್ತಿದೆ ಎನ್ನುತ್ತಿರುವಾಗಲೇ ಚಿತ್ರರಂಗಕ್ಕೆ ಮತ್ತೊಂದು ಹೊಡೆತ ಬಿತ್ತು.
ಈಗ ಮತ್ತೆ ಥಿಯೇಟರ್‌ಗಳ ಬಂದ್ ಆಗಿವೆ. ಸಿನಿಮಾ, ಸೀರಿಯಲ್‌ಗಳ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿದೆ. ಹಾಗೂ ಹೀಗೂ ಶೂಟಿಂಗ್ ಮುಗಿಸಿ ಸದ್ಯ ರಿಲೀಸ್‌ಗೆ ರೆಡಿಯಾಗಿರುವ ನೂರಾರು ಸಿನಿಮಾಗಳು ಮುಂದೇನು ಅನ್ನೋ ಪ್ರಶ್ನೆಗೆ ಉತ್ತರ ಸಿಗದೇ ಪರದಾಡುತ್ತಿವೆ. ಅದರ ಬೆನ್ನಲ್ಲೇ ಥಿಯೇಟರ್‌ಗಳಲ್ಲಿ ರಿಲೀಸ್ ಆಗದಿದ್ದರೇನಂತೆ, ಓಟಿಟಿಯಲ್ಲಿ ಬಿಡುಗಡೆ ಮಾಡೋಣ ಅಂತ ಅಂದುಕೊಂಡರೆ ಅಲ್ಲೂ ನೂರೆಂಟು ಸಮಸ್ಯೆ. ಹೀಗೆ ಸಿನಿಮಾ ಮಂದಿ ಸಾಲು ಸಾಲು ಸಮಸ್ಯೆಗಳನ್ನೇ ಹೊದ್ದು ಮಲಗಿದ್ದಾರೆ.
ಇದನ್ನೂ ಓದಿ:Lockdown Effect: ಸಂಕಷ್ಟದಲ್ಲಿ ಜರ್ಬೇರಾ ಹೂ ಬೆಳೆಗಾರರು; ನೆರವಿಗಾಗಿ ಸರ್ಕಾರಕ್ಕೆ ಆಗ್ರಹ
ಅದರ ನಡುವೆಯೇ ಕನ್ನಡ ಚಿತ್ರ ತಂಡವೊಂದ ಥಿಯೇಟರ್‌ಗೂ ಹೋಗದೇ, ಓಟಿಟಿಯತ್ತ ಕೂಡ ಮುಖ ಮಾಡದೇ ಹಾಗೇ ಜನರಿಗೆ ಸಿನಿಮಾ ತೋರಿಸುವ ವಿಶಿಷ್ಠ ಹಾಗೂ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಚಿತ್ರದ ಹೆಸರು ಸೈಡ್‌ವಿಂಗ್. ರಂಗಭೂಮಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ, ಧಾರಾವಾಹಿಗಳ ಮೂಲಕವೂ ಮನೆ ಮಾತಾಗಿರುವ, ಕನ್ನಡಕ್ಕಾಗಿ ಒಂದನ್ನು ಒತ್ತಿ ಹಾಗೂ ದಯವಿಟ್ಟು ಗಮನಿಸಿ ಚಿತ್ರಗಳಲ್ಲೂ ನಾಯಕನಾಗಿ ಮಿಂಚಿರುವ ಪ್ರತಿಭಾನ್ವಿತ ನಟ ಅವಿನಾಶ್ ಶಠಮರ್ಶನ್. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚೊಚ್ಚಲ ಸಿನಿಮಾ ಸೈಡ್ ವಿಂಗ್.
ಸೈಡ್‌ವಿಂಗ್‌ನಲ್ಲಿ ಖುದ್ದು ಅವಿನಾಶ್ ಅವರೇ ನಾಯಕನಾಗಿದ್ದು ಅವರ ಜೊತೆ ಪ್ರಿಯಾ, ಆತ್ಮಾನಂದ್ ವಾಸನ್, ವಂದಿತ, ಅನ್ವಯ ಹಾಗೂ ಪ್ರಣಯ ಮೂರ್ತಿ ಪ್ರಮುಖ ತಾರಾಗಣದಲ್ಲಿದ್ದಾರೆ. ರಂಗಭೂಮಿ ಹಾಗೂ ಸಿನಿಮಾ, ಎರಡರ ನಡುವೆ ಸಿಲುಕಿ ತೊಳಲಾಡುವ ಕಲಾವಿದನ ಸುತ್ತ ಹೆಣೆಯಲ್ಪಟ್ಟ ಸಿನಿಮಾ ಸೈಡ್‌ವಿಂಗ್. ಎಲ್ಲವೂ ಅಂದುಕೊಂಡಂತಾಗಿದ್ದರೆ ಕಳೆದ ವರ್ಷವೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿದೆ. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕಾದು ಸಾಕಾಗಿ ಈಗ ಅವಿನಾಶ್ ಮತ್ತು ತಂಡ ವಿಶೇಷ ರೀತಿಯಲ್ಲಿ ಸೈಡ್‌ವಿಂಗ್ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ:Bellary Couple: ಬಳ್ಳಾರಿಯಲ್ಲಿ ಮಾದರಿ ಜೋಡಿ; ಬದುಕು ಗೆದ್ದವರಿಗೆ ಕೊರೋನಾ ಯಾವ ಲೆಕ್ಕ?
ಹೌದು, ಸೈಡ್‌ವಿಂಗ್ ಚಿತ್ರತಂಡ ಥಿಯೇಟರ್ ಹಾಗೂ ಓಟಿಟಿಯ ಹೊರತಾಗಿಯೂ ಸಿನಿಮಾಗಳನ್ನು ನೇರವಾಗಿ ಪ್ರೇಕ್ಷಕರಿಗೆ ತಲುಪಿಸುವ ವಿನೂತನ ಪ್ರಯತ್ನದಲ್ಲಿದೆ. ಸೈಡ್‌ವಿಂಗ್ ಸಿನಿಮಾ ನೋಡಲು ಇಚ್ಛಿಸುವವರು ಖುದ್ದು ಅವಿನಾಶ್ ಅವರನ್ನೇ ಈ ದೂರವಾಣಿ ಸಂಖ್ಯೆ ಮೂಲಕ 98454 - 68545 ಅಥವಾ ಅವಿನಾಶ್ ಅವರ ಫೇಸ್‌ಬುಕ್, ಇನ್ಸ್ಟಾ ಮೂಲಕವೂ ಸಂಪರ್ಕ ಮಾಡಬಹುದು. ಆಗ ಅವರಿಗೆ ಎಲ್ಲಿ, ಹೇಗೆ ಸಿನಿಮಾ ನೋಡಬಹುದು ಎಂಬುದನ್ನು ಸ್ಪಷ್ಟವಾಗಿ ಹೇಳಲಾಗುತ್ತೆ. ಹಾಗೇನಾದರೂ ಈ ವಿನೂತನ ಆಲೋಚನೆ ಯಶಸ್ವಿಯಾದರೆ ಹೊಸ ಹೊಸ ಚಿತ್ರತಂಡಗಳಿಗೆ ಜೀವ ನೀಡುವುದರಲ್ಲಿ ಹಾಗೂ ಚಿತ್ರರಂಗಕ್ಕೆ ಮರುಜೀವ ನೀಡುವುದರಲ್ಲಿ ಆಶ್ಚರ್ಯವೇ ಇಲ್ಲ ಎನ್ನಲಾಗುತ್ತಿದೆ.....
ಈ ಪ್ರಯತ್ನದ ಬಗ್ಗೆ ನ್ಯೂಸ್ ೧೮ ಕನ್ನಡ ಜೊತೆ ಮಾತನಾಡಿರುವ ನಾಯಕ, ನಿರ್ದೇಶಕ ಅವಿನಾಶ್, ಚಿತ್ರರಂಗ ಇವತ್ತು ಸಾಕಷ್ಟು ಕಷ್ಟದಲ್ಲಿದೆ. ಹಲವು ಸವಾಲುಗಳನ್ನು ಎದುರಿಸಿ ಉತ್ತಮ ಸಿನಿಮಾ ಮಾಡಿದರೂ, ನಾನಾ ಸಮಸ್ಯೆಗಳಿಂದ ರಿಲೀಸ್ ಮಾಡುವುದೇ ಕಷ್ಟ. ಹೀಗಾಗಿಯೇ ಆನ್‌ಲೈನ್ ಮೂಲಕ ಸಿನಿಮಾ ರಿಲೀಸ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆನ್‌ಲೈನ್‌ನಲ್ಲಿ ನಮ್ಮ ಸಿನಿಮಾ ಅಪ್‌ಲೋಡ್ ಮಾಡಿ, ಸಿನಿಮಾ ಆಸಕ್ತರು ನಮ್ಮನ್ನು ಸಂಪರ್ಕಿಸಿದಾಗ ಇಂತಿಷ್ಟು ಹಣ ಅಂತ ಪಡೆದು ಅದರ ವೆಬ್‌ಲಿಂಕ್ ಮತ್ತು ಪಾಸ್‌ವರ್ಡ್ಅನ್ನು ನೀಡುತ್ತೇವೆ.
https://youtu.be/im-qBnWgwN0
ಇಷ್ಟು ತಾಸುಗಳ ಕಾಲ ಸಮಯದಲ್ಲಿ ಅವರು ಸಿನಿಮಾ ನೋಡಬೇಕು, ಆ ಬಳಿಕ ಪಾಸ್‌ವರ್ಡ್ ಬದಲಿಸುತ್ತೇವೆ. ನಮ್ಮ ಬಳಿ ಕೆಲವರು ಪಾಸ್‌ವರ್ಡ್ ಪಡೆದು ಪೈರಸಿ ಮಾಡುವ ಕೆಲಸಗಳೂ ನಡೆಯಬಹುದು. ಹೀಗಾಗಿಯೇ ಸಾಕಷ್ಟು ರೀಸರ್ಚ್ ಮಾಡಿ, ಪೈರಸಿಯನ್ನು ತಡೆಗಟ್ಟುವ ನಿಟ್ಟಿನಲ್ಲೂ ಪ್ಲ್ಯಾನ್ ಮಾಡುತ್ತಿದ್ದೇವೆ. ಆದರೆ ಸದ್ಯ ನಮ್ಮ ಸಿನಿಮಾವನ್ನು ಈ ವಿನೂತನ ಪ್ರಯತ್ನದ ಮೂಲಕ ಜನರಿಗೆ ತಲುಪಿಸುವುದು ಒಂದೇ ಗುರಿ' ಎಂದು ಹೇಳಿಕೊಳ್ಳುತ್ತಾರೆ. ಅದೇನೇ ಇರಲಿ, ಇಂತಹ ಕಷ್ಟದ ಸಮಯದಲ್ಲಿ ವಿನೂತನ ಪ್ರಯತ್ನದ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿರುವ ಅವಿನಾಶ್ ಮತ್ತು ತಂಡಕ್ಕೆ ಯಶಸ್ಸು ಸಿಗಲಿ. ಅವರ ಈ ಸಕ್ಸಸ್ ಸ್ಟೋರಿ ಮುಂದೆ ಹಲವು ಚಿತ್ರತಂಡಗಳಿಗೆ ಮಾದರಿಯಾಗಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ