ಸುಳ್ಳು ಹೆಚ್ಚು ದಿನ ನಡೆಯೊಲ್ಲ: ಶ್ರುತಿಗೆ ಅರ್ಜುನ್ ಸರ್ಜಾ ವಕೀಲರ ತಿರುಗೇಟು

ಶ್ರುತಿ ಹರಿಹರನ್ ಮಾಡಿರುವ ಆರೋಪದ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದು ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮಸುಂದರ್ ಶಂಕಿಸಿದ್ದಾರೆ.

Vijayasarthy SN
Updated:October 28, 2018, 7:09 PM IST
ಸುಳ್ಳು ಹೆಚ್ಚು ದಿನ ನಡೆಯೊಲ್ಲ: ಶ್ರುತಿಗೆ ಅರ್ಜುನ್ ಸರ್ಜಾ ವಕೀಲರ ತಿರುಗೇಟು
ಶ್ಯಾಮ್​ಸುಂದರ್
  • Share this:
- ಶಾಲಿನಿ ಈಶ್ವರ್, ನ್ಯೂಸ್18 ಕನ್ನಡ

ಬೆಂಗಳೂರು(ಅ. 28): ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಮೀ ಟೂ ಆರೋಪದ ಹಿಂದೆ ವ್ಯವಸ್ಥಿತ ಸಂಚು ಕೆಲಸ ಮಾಡಿದೆ ಎಂದು ಅರ್ಜುನ್ ಪರ ವಕೀಲ ಶ್ಯಾಮಸುಂದರ್ ಶಂಕಿಸಿದ್ದಾರೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಅವರು, ಶ್ರುತಿ ಹರಿಹರನ್ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಪುನರುಚ್ಚರಿಸಿದರು.

“ಶ್ರುತಿ ಹರಿಹರನ್ ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ಆಗಲೇ ಹೇಳಿದ್ದೇವೆ. ಈಗ ಅವರು ಪೊಲೀಸ್ ಠಾಣೆಗೆ ಹೋಗಿರುವುದರಿಂದ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಸಾಕ್ಷ್ಯಗಳನ್ನ ಒದಗಿಸಬೇಕು. ಅವರು ಸುಳ್ಳು ಹೇಳುತ್ತಿರುವುದರಿಂದ ಸುಳ್ಳು ಸಾಕ್ಷ್ಯಗಳನ್ನಷ್ಟೇ ಸೃಷ್ಟಿಸಬೇಕಾಗುತ್ತದೆ. ನೋಡೋಣ. ಈ ರೀತಿಯ ಸುಳ್ಳು ಮತ್ತು ಕುತಂತ್ರಗಾರಿಕೆ ಹೆಚ್ಚು ದಿನ ನಡೆಯೊಲ್ಲ,” ಎಂದು ನಲಪಾಡ್ ಪ್ರಕರಣದಲ್ಲಿ ವಿದ್ವತ್ ಪರ ವಕಾಲತ್ತು ವಹಿಸಿಕೊಂಡಿದ್ದ ಶ್ಯಾಮಸುಂದರ್ ಟೀಕಿಸಿದರು.

“ಅರ್ಜುನ್ ಸರ್ಜಾ ಯಾವ ಮಟ್ಟದ ಸಜ್ಜನ ವ್ಯಕ್ತಿ ಎಂಬುದಕ್ಕೆ ಯಾರೂ ಪ್ರಮಾಣಪತ್ರ ಕೊಡುವ ಅಗತ್ಯವಿಲ್ಲ. ರಾಜ್ಯದ ಜನತೆಗೆ ಮತ್ತು ದೇಶದ ಜನತೆಗೆ ಅವರು ಎಂಥವರು ಎಂದು ಗೊತ್ತು. ಇಂಥ ವ್ಯಕ್ತಿಯ ವಿರುದ್ಧ ವಿನಾಕಾರಣ ಹಠಾತ್ತಾಗಿ ನ್ಯೂಸ್ ಎಕ್ಸ್​ಪ್ಲೋಷನ್ ಆಗುತ್ತೆ. ಇದು ವ್ಯವಸ್ಥಿತವಾದ ಸಂಚು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಯಾರು ಯೇಕೆ ಮಾಡ್ತಿದ್ದಾರೆ? ಹೆಸರು ಮತ್ತು ಖ್ಯಾತಿಗೊಸ್ಕರ ಮಾಡುತ್ತಿರಬಹುದೆಂದುಕೊಂಡಿದ್ದೆವು. ಆದರೆ ಇನ್ನೂ ಮೀರಿ ಬೇರೆಯೇ ಪಿತೂರಿ ನಡೆಯುತ್ತಿರುವಂತಿದೆ. ಪೊಲೀಸರು ನಾವು ಕೊಟ್ಟಿರುವ ದೂರಿನ ಮೇಲೂ ತನಿಖೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸತ್ಯ ಏನು, ಸಂಚು ಏನು ಎಂಬುದು ಗೊತ್ತಾಗಲಿದೆ” ಎಂದು ಶ್ಯಾಮಸುಂದರ್ ವಿಶ್ವಾಸ ವ್ಯಕ್ತಪಡಿಸಿದರು.

ಅರ್ಜುನ್ ಸರ್ಜಾ ತಮ್ಮ ಮೇಲೆ ಲೈಂಗಿಕ ಕಿರುಕುಳ ಕೊಟ್ಟರೆಂದು ಕೆಲ ದಿನಗಳ ಹಿಂದೆ ಶ್ರುತಿ ಹರಿಹರನ್ ಅವರು #MeToo ಅಭಿಯಾನದ ಭಾಗವಾಗಿ ಆರೋಪ ಮಾಡಿದ್ದರು. ಅರ್ಜುನ್ ಸರ್ಜಾ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿ ಶ್ರುತಿ ವಿರುದ್ಧವೇ ಪ್ರಕರಣ ದಾಖಲಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿಯು ಇವರಿಬ್ಬರ ನಡುವೆ ಸಂಧಾನ ನಡೆಸಲು ಯತ್ನಿಸಿ ವಿಫಲವಾಯಿತು. ಅದಾದ ನಂತರ ಶ್ರುತಿ ಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದರು. ‘ವಿಸ್ಮಯ’ ಸಿನಿಮಾ ಚಿತ್ರೀಕರಣದ ದಿನಗಳಲ್ಲಿ ಅರ್ಜುನ್ ಸರ್ಜಾ ಲೈಂಗಿಕ ಸಂಪರ್ಕದ ಅಪೇಕ್ಷೆಯಿಟ್ಟುಕೊಂಡು ತಮಗೆ ಕಿರುಕುಳ ನೀಡಿದ್ದರು. ಚಿತ್ರೀಕರಣ ಹಾಗೂ ರಿಹರ್ಸಲ್ ವೇಳೆಯೂ ಅನಗತ್ಯವಾಗಿ ತಮ್ಮ ದೇಹದ ಅಂಗಾಂಗಗಳನ್ನ ಅಸಭ್ಯವಾಗಿ ಮುಟ್ಟುತ್ತಿದ್ದರು. ಬಾರಿ ಬಾರಿ ಡಿನ್ನರ್​ಗೆ ಕರೆದು ಪೀಡಿಸುತ್ತಿದ್ದರು ಎಂದೆಲ್ಲಾ ಶ್ರುತಿ ಹರಿಹರನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣ ಸಂಬಂಧ ಶ್ರುತಿ ಹರಿಹರನ್ ಪರ ಸಾಕ್ಷ್ಯದಾರರಾಗಿರುವ ಆಕೆಯ ಇಬ್ಬರು ಸಹಾಯಕರಾದ ಕಿರಣ್ ಮತ್ತು ಬೋರೇಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಪೊಲೀಸರು ನೋಟೀಸ್ ನೀಡಿದ್ದಾರೆ. ಸೋಮವಾರ ಇವರಿಬ್ಬರು ಪೊಲೀಸ್ ಠಾಣೆಯಲ್ಲಿ ತಮ್ಮ ಹೇಳಿಕೆ ದಾಖಲಿಸಲಿದ್ದಾರೆ. ಮಂಗಳವಾರದಂದು ನ್ಯಾಯಾಧೀಶರ ಮುಂದೆ ಶ್ರುತಿ ಹರಿಹರನ್ ಸಿಆರ್​ಪಿಸಿ 164ರ ಅಡಿಯಲ್ಲಿ ಹೇಳಿಕೆ ದಾಖಲಿಸುವ ನಿರೀಕ್ಷೆ ಇದೆ.
First published:October 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading