ಶ್ರುತಿ ಹರಿಹರನ್ ಆರೋಪದ ಹಿಂದೆ ಅಮೆರಿಕದಿಂದ ಫಂಡಿಂಗ್: ಪ್ರಶಾಂತ್ ಸಂಬರ್ಗಿ ಆರೋಪ

Vijayasarthy SN
Updated:October 25, 2018, 7:47 PM IST
ಶ್ರುತಿ ಹರಿಹರನ್ ಆರೋಪದ ಹಿಂದೆ ಅಮೆರಿಕದಿಂದ ಫಂಡಿಂಗ್: ಪ್ರಶಾಂತ್ ಸಂಬರ್ಗಿ ಆರೋಪ
ಪ್ರಶಾಂತ್ ಸಂಬರ್ಗಿ
  • Share this:
- ನ್ಯೂಸ್18 ಕನ್ನಡ

ಬೆಂಗಳೂರು(ಅ. 25): ಶ್ರುತಿ ಹರಿಹರನ್ #MeToo ಆರೋಪಕ್ಕೆ ಎಡಪಂಥೀಯರ ಚಿತಾವಣಿಯನ್ನು ತಳುಕು ಹಾಕಿದ್ದ ಅರ್ಜುನ್ ಸರ್ಜಾ ಸ್ನೇಹಿತ ಪ್ರಶಾಂತ್ ಸಂಬರ್ಗಿ ಅವರು ಇದೀಗ ಶ್ರುತಿ ಹರಿಹರನ್​ರ ಆರೋಪವನ್ನು ಪೇಯ್ಡ್ ಕೆಂಪೇನ್ ಎಂದು ಬಣ್ಣಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಮಧ್ಯೆ ಏರ್ಪಡಿಸಲಾಗಿದ್ದ ಸಂಧಾನ ಸಭೆಗೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅಮೆರಿಕದಿಂದ ದುಡ್ಡು ಕೊಟ್ಟು ಈ ಆಂದೋಲನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ಧಾರೆ.

ಶ್ರುತಿ ಹರಿಹರನ್ ಮಾಡಿರುವ ಆರೋಪವು ಪ್ರಾಯೋಜಿತವೆನ್ನುವುದಕ್ಕೆ ತನ್ನ ಬಳಿ ಸಾಕ್ಷ್ಯವಿದೆ ಎಂದು ಹೇಳಿಕೊಂಡಿರುವ ಪ್ರಶಾಂತ್ ಸಂಬರ್ಗಿ, ನ್ಯೂ ಯಾರ್ಕ್, ವಾಷಿಂಗ್ಟನ್ ಮತ್ತು ಬೆಂಗಳೂರಿನಲ್ಲಿ ಶ್ರುತಿ ಹರಿಹರನ್ ಅವರ ಖಾತೆಗಳನ್ನ ಅಪ್​ಡೇಟ್ ಮಾಡಲಾಗಿದೆ. ಐಪಿ ಅಡ್ರೆಸ್ ಮೊದಲಾದವನ್ನ ಹೆಕ್ಕಿ ತೆಗೆದಿದ್ದೇವೆ. ಸೈಬರ್ ಕ್ರೈಮ್​ನವರಿಗೆ 400 ಪುಟಗಳ ದೂರು ಕೊಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

ಇದೇ ವೇಳೆ, ಸ್ಯಾಂಡಲ್​ವುಡ್​ನ ಇಬ್ಬರು ಹಿರಿಯ ನಟರು ಈ ಪ್ರಕರಣದ ಹಿಂದಿದ್ದಾರೆ ಎಂದೂ ಪ್ರಶಾಂತ್ ಸಂಬರ್ಗಿ ಗಂಭೀರವಾಗಿ ಆರೋಪಿಸಿದ್ದಾರೆ. ಆದರೆ, ಆ ನಟರ ಹೆಸರನ್ನು ಅವರು ಹೇಳಲಿಲ್ಲ. ಶ್ರುತಿ ಹರಿಹರನ್ ಅವರ ಬೆನ್ನಿಗೆ ನಿಂತವರಲ್ಲಿ ಚೇತನ್ ಮತ್ತು ಪ್ರಕಾಶ್ ರೈ ಅವರಿಬ್ಬರಿದ್ದಾರೆ. ಪ್ರಶಾಂತ್ ಸಂಬರ್ಗಿ ಹೆಸರಿಸಿದ್ದು ಇವರಿಬ್ಬರನ್ನಾ ಅಥವಾ ಬೇರೆ ಇಬ್ಬರು ನಟರಾ ಎಂಬುದು ಗೊತ್ತಿಲ್ಲ.

ಪ್ರಶಾಂತ್ ಸಂಬರ್ಗಿ ಮಾತನಾಡಿರುವ ವಿಡಿಯೋ:


ಇದೇ ವೇಳೆ, ಅರ್ಜುನ್ ಸರ್ಜಾ ದೈವ ಭಕ್ತನೆಂಬ ಕಾರಣಕ್ಕೆ ಎಡಪಂಥೀಯರು ಅವರನ್ನ ಟಾರ್ಗೆಟ್ ಮಾಡಿದ್ದಾರೆಂದು ತಾನು ಮಾಡಿದ ಆರೋಪವನ್ನು ಸಂಬರ್ಗಿ ಪುನರುಚ್ಚರಿಸಿದ್ದಾರೆ. “ಆಂಜನೇಯ ಭಕ್ತರಾಗಿರುವ ಅರ್ಜುನ್ ಸರ್ಜಾ ಅವರು ಚೆನ್ನೈನಲ್ಲಿ 35 ಕೋಟಿ ರೂ ವೆಚ್ಚದಲ್ಲಿ ಹನುಮಾನ್ ಮಂದಿರವನ್ನು ಕಟ್ಟುತ್ತಿದ್ದಾರೆ. ಇದಕ್ಕೆ ಅಮೆರಿಕದಿಂದ ಚಂದ ಎತ್ತಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ತಡೆಹಾಕಲು ಇಂಥ ಪಿತೂರಿ ನಡೆಸಲಾಗುತ್ತಿದೆ.” ಎಂದು ಸಂಬರ್ಗಿ ದೂರಿದ್ದಾರೆ.ಶ್ರುತಿ ಹರಿಹರನ್ ಮೂಲಕ ಮೀ ಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವಾಗುತ್ತಿದೆ. ಮಿಷನರಿಗಳೂ ಈ ಪಿತೂರಿಯ ಹಿಂದಿದ್ದಾರೆ. ಕೆಲ ಮಾಧ್ಯಮಗಳಿಗೆ ದುಡ್ಡು ಕೊಟ್ಟು ಸುದ್ದಿ ಮಾಡಿಸಲಾಗುತ್ತಿದೆ ಎಂದು ಪ್ರಶಾಂತ್ ಸಂಬರ್ಗಿ ಆಪಾದಿಸಿದ್ದಾರೆ.

ಯಾರು ಈ ಸಂಬರ್ಗಿ?

ಕೆಲ ವರ್ಷಗಳ ಹಿಂದೆ ಫೇಸ್ಬುಕ್ ಮೊದಲಾದ ಸೋಷಿಯಲ್ ಮೀಡಿಯಾದಲ್ಲಿ ‘ನಿಜವಾದ ಕನ್ನಡಿಗ ಯಾರು?’ ಎಂಬ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕನ್ನಡ ಸಂಘಟನೆಗಳ ವಿರುದ್ಧ ಪ್ರಕಾಶ್ ಸಂಬರ್ಗಿ ವಾಗ್ದಾಳಿ ನಡೆಸಿದ್ದರು. ತಾನು ಕನ್ನಡಿಗ ಎಂದು ತೋರಿಸಿಕೊಳ್ಳಲು ಘೋಷಣೆ ಕೂಗಬೇಕಿಲ್ಲ, ಗಲಾಟೆ ಮಾಡಬೇಕಿಲ್ಲ, ಶಾಲು ಹಾಕಬೇಕಿಲ್ಲ ಎಂದು ಕನ್ನಡ ಸಂಘಟನೆಗಳನ್ನು ಅವರು ತರಾಟೆಗೆ ತೆಗೆದುಕೊಂಡ ಆ ವಿಡಿಯೋಗೆ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆಗ ರಾಜ್ಯಾದ್ಯಂತ ಪ್ರಶಾಂತ್ ಸಂಬರ್ಗಿ ಹೆಸರು ಪರಿಚಿತವಾಯಿತು.

ಇದನ್ನೂ ಓದಿ: ಶ್ರುತಿ ಹರಿಹರನ್ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ

ಆದರೆ, ಪ್ರಶಾಂತ್ ಸಂಬರ್ಗಿ ಅವರು ಚಲನಚಿತ್ರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಜೋಡಿಸಿಕೊಂಡಿದ್ದಾರೆ. ಕನ್ನಡದಲ್ಲಿ ಡಬ್ಬಂಗ್ ಪರವಾಗಿ ಪ್ರಬಲ ಹೋರಾಟ ಮಾಡಿದವರಲ್ಲಿ ಅವರೂ ಒಬ್ಬರು. ಪ್ರಶಾಂತ್ ಸಂಬರ್ಗಿ ಅವರದ್ದೇ ಸಿನಿಮಾ ಪ್ರೊಡಕ್ಷನ್ ಹೌಸ್ ಇದೆ. ಅವರು ಸಿನಿಮಾ ವಿತರಕರೂ ಆಗಿದ್ದಾರೆ. ಅರ್ಜುನ್ ಸರ್ಜಾ ಅವರ ಸಿನಿಮಾಗಳಿಗೆ ಅವರೇ ವಿತರಕರಾಗಿದ್ದಾರೆ.

ಅರ್ಜುನ್ ಸರ್ಜಾ ಅವರ ಸ್ನೇಹಿತರಾಗಿರುವ ಪ್ರಶಾಂತ್ ಸಂಬರ್ಗಿ ಅವರು ಶ್ರುತಿ ಹರಿಹರನ್​ರಿಂದ ಆರೋಪ ವ್ಯಕ್ತವಾದ ದಿನದಿಂದಲೂ ಅರ್ಜುನ್ ಪರವಾಗಿ ಪ್ರಶಾಂತ್ ಸಂಬರ್ಗಿ ನಿಂತಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ಹಿಂದೆಯೋ ಬೆಂಬಲವಾಗಿ ಸಂಬರ್ಗಿ ಇದ್ಧಾರೆ. ಶ್ರುತಿ ವಿರುದ್ಧ ಇನ್ನೂ ಎರಡು ಪ್ರಕರಣಗಳನ್ನು ದಾಖಲಿಸುವುದಾಗಿ ಸಂಬರ್ಗಿ ಹೇಳಿದ್ದಾರೆ.

ಇನ್ನು, ಶ್ರುತಿ ಹರಿಹರನ್ ಅವರಿಗೆ ಬೆಂಬಲವಾಗಿ FIRE ಸಂಸ್ಥೆ ನಿಂತಿದೆ. ಆ ದಿನಗಳು ಖ್ಯಾತಿಯ ಚೇತನ್ ಈ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಕವಿತಾ ಲಂಕೇಶ್, ರೂಪಾ ಅಯ್ಯರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಫೈರ್ ಸಂಸ್ಥೆಯಲ್ಲಿದ್ದಾರೆ. ನಟಿಯರ ಮೇಲಿನ ದೌರ್ಜನ್ಯ ಸೇರಿದಂತೆ ಕಲಾವಿದರ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಈ ಸಂಸ್ಥೆ ಹುಟ್ಟಿಕೊಂಡಿದೆ. ಎರಡು ವರ್ಷಗಳಿಂದಲೂ ಅಸ್ತಿತ್ವದಲ್ಲಿದ್ದ ಈ ಸಂಸ್ಥೆ ಈಗ ಶ್ರುತಿ ಹರಿಹರನ್ ವಿವಾದದ ನಂತರ ಲೈಮ್​ಲೈಟ್​ಗೆ ಬಂದಿದೆ. ಶ್ರುತಿ ಹರಿಹರನ್ ಅಷ್ಟೇ ಅಲ್ಲ ಚಿತ್ರರಂಗದಲ್ಲಿ ಯಾವುದೇ ಮಹಿಳೆಗೆ ದೌರ್ಜನ್ಯವಾದರೂ ಅವರ ಸಹಾಯಕ್ಕೆ ಧಾವಿಸುವುದು ಫೈರ್ ಸಂಸ್ಥೆಯ ಕರ್ತವ್ಯವಾಗಿದೆ ಎಂದು ಚೇತನ್ ಹೇಳುತ್ತಾರೆ.
First published:October 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading