news18-kannada Updated:January 6, 2021, 7:59 PM IST
Shivanna
ಚಂದನವನ ಚಿರಯುವಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಗ್ ಬಜೆಟ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಅದು ಕೂಡ ಕಾಲಿವುಡ್ನ ಸ್ಟಾರ್ ನಟನ ಜೊತೆ? ಇಂತಹದೊಂದು ಕುತೂಹಲಕಾರಿ ಪ್ರಶ್ನೆ ಕಳೆದ ಕೆಲ ದಿನಗಳಿಂದ ತುಸು ಜೋರಾಗಿಯೇ ಕೇಳಿ ಬರುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಸಿಗುತ್ತಿರುವ ಉತ್ತರ 'ಹೌದು'.
ಹೌದು, ಭಜರಂಗಿ-2 ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ಮೇಲೆ ಕಣ್ಣಿಟ್ಟಿರುವ ಶಿವಣ್ಣ, ಮತ್ತೊಂದು ಬಹುಭಾಷಾ ಚಿತ್ರದಲ್ಲಿ ನಟಿಸಲಿದ್ದಾರಂತೆ. ಅದು ಸಹ ಕಾಲಿವುಡ್ ಸ್ಟಾರ್ ನಟ ಚಿಯಾನ್ ವಿಕ್ರಮ್ ಜೊತೆ ಎಂಬುದು ವಿಶೇಷ. ಚಿಯಾನ್ ವಿಕ್ರಮ್ ತಮ್ಮ 60ನೇ ಚಿತ್ರಕ್ಕಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರ ಧ್ರುವ ವಿಕ್ರಮ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಜೆಟ್ನಲ್ಲಿ ತಯಾರಾಗಲಿರುವ ಈ ಚಿತ್ರತಂಡದಿಂದ ಇದೀಗ ಕರುನಾಡ ಕಿಂಗ್ ಶಿವಣ್ಣನಿಗೆ ಬಿಗ್ ಆಫರ್ ಬಂದಿದೆ.
ತಮಿಳಿನಲ್ಲಿ 'ಜಿಗರ್ಥಂಡ', 'ಪಿಜ್ಜಾ', 'ಇರೈವಿ', 'ಪೆಟ್ಟಾ'ದಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜ್ ವಿಕ್ರಮ್ ಅವರ ಬಹುನಿರೀಕ್ಷೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ವೊಂದನ್ನು ಸಹ ಬಿಡುಗಡೆ ಮಾಡಿದೆ.
ಗ್ಯಾಂಗ್ಸ್ಟರ್ ಚಿತ್ರಕಥೆ ಹೊಂದಿರುವ ಈ ಸಿನಿಮಾದಲ್ಲಿ ಪವರ್ಫುಲ್ ಪಾತ್ರವೊಂದಿದೆ. ಈ ಪಾತ್ರದಲ್ಲಿ ನಟಿಸಲು ಶಿವಣ್ಣ ಅವರನ್ನು ಕೇಳಿಕೊಳ್ಳಲಾಗಿದೆ. ಈ ಸಂಬಂಧ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್, ಬೆಂಗಳೂರಿಗೆ ಬಂದು ಶಿವಣ್ಣನಿಗೆ ಕಥೆ ಕೂಡ ಹೇಳಿ ಹೋಗಿದ್ದಾರಂತೆ. ಆದರೆ ಈಗಾಗಲೇ ಸ್ಯಾಂಡಲ್ವುಡ್ ಕಿಂಗ್ ಈಗಾಗಲೇ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾಲಿವುಡ್ ಚಿತ್ರಕ್ಕಾಗಿ ಸಮಯ ಹೊಂದಿಸುವುದು ಕೂಡ ಅಷ್ಟು ಸುಲಭವಲ್ಲ.
ಹೀಗಾಗಿ ಶಿವಣ್ಣ ಸ್ವಲ್ಪ ಸಮಯ ಕೇಳಿದ್ದಾರೆ ಎನ್ನಲಾಗಿದೆ. ಅತ್ತ ಆ ಪಾತ್ರವನ್ನು ಶಿವಣ್ಣ ಅವರಿಂದಲೇ ಮಾಡಿಸಬೇಕೆಂಬ ಹಂಬದಲ್ಲಿದೆ ಚಿತ್ರತಂಡ. ಇನ್ನು ವಿಕ್ರಮ್ ಚಿತ್ರಗಳು ಮಲಯಾಳಂ ಹಾಗೂ ತೆಲುಗಿನಲ್ಲಿ ಡಬ್ ಆಗುತ್ತವೆ. ಇತ್ತ ಹ್ಯಾಟ್ರಿಕ್ ಹೀರೋ ಎಂಟ್ರಿಯೊಂದಿಗೆ ಕರ್ನಾಟಕದಲ್ಲೂ ಚಿತ್ರದ ತೂಕ ಹೆಚ್ಚಳಿದೆ. ಸದ್ಯ ಭಜರಂಗಿ-2 ಹಾಗೂ ಶಿವಪ್ಪ ಚಿತ್ರದಲ್ಲಿ ಬಿಝಿಯಾಗಿರುವ ಶಿವಣ್ಣ ಕಾರ್ತಿಕ್ ಸುಬ್ಬರಾಜ್ ಅವರ ಪ್ಯಾನ್ ಇಂಡಿಯಾ ಸಿನಿಮಾಗಾಗಿ ಸಮಯ ಹೊಂದಿಸಲಿದ್ದಾರಾ ಕಾದು ನೋಡಬೇಕಿದೆ.
Published by:
zahir
First published:
January 6, 2021, 7:59 PM IST