ಕೊರೋನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಹೇರಲಾಗಿದೆ. ಸೋಂಕು ಹರಡದಂತೆ ಸರ್ಕಾರ ತೆಗೆದುಕೊಂಡ ಈ ಕಠಿಣ ಕ್ರಮದಿಂದ ಹಲವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅಂತವರಿಗೆ ಸಿನಿಮಾ ನಟರು, ಸಾಮಾಜಿಕ ಕಾರ್ಯಕರ್ತರು, ಸಂಘ-ಸಂಸ್ಥೆಗಳು ನೆರವಿಗೆ ನಿಂತು ಮಾನವೀಯತೆ ಮೆರೆಯುತ್ತಿದ್ದಾರೆ.
ಈಗಾಗಲೇ ಚಿತ್ರರಂಗದ ದಿನಗೂಲಿ ಕಾರ್ಮಿಕರ ನೆರವಿಗಾಗಿ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ 37 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹಾಗೆಯೇ ಮೈಸೂರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಳೆದ ಎರಡು ದಿನಗಳಿಂದ ನಿರ್ಗತಿಕರಿಗೆ, ಬಡವರಿಗೆ ಅನ್ನದಾನ ಮಾಡುತ್ತಿದ್ದಾರೆ. ಇನ್ನು ಕಿಚ್ಚ ಸುದೀಪ್ ಫ್ಯಾನ್ಸ್, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೂ ಕೂಡ ಬಡವರ ಮತ್ತು ಹಸಿದವರ ನೆರವಿಗೆ ನಿಂತಿದ್ದಾರೆ.
ಎಲ್ಲರೂ ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಡುವ ಮಧ್ಯೆ ಮರೆತು ಹೋಗಿದ್ದು, ಕೋವಿಡ್-19 ಹರಡದಂತೆ ಸಾರ್ವಜನಿಕರನ್ನು ನಿಯಂತ್ರಿಸುತ್ತಿರುವ ಪೊಲೀಸರನ್ನು. ಹೌದು, ಲಾಕ್ಡೌನ್ ಹೇರಲಾಗಿದ್ದರೂ, ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಇದರಿಂದ ಕೊರೋನಾ ವೈರಾಣು ಮತ್ತಷ್ಟು ಜನರಿಗೆ ಹರಡುವ ಆತಂಕ ಒಂದೆಡೆ.
ಆದರೆ ಇಂತಹ ಬೇಜವಾಬ್ದಾರಿಯಿಂದ ವರ್ತಿಸುವ ಜನರನ್ನು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಿಯಂತ್ರಿಸುವಲ್ಲಿ ನಿರತರಾಗಿದ್ದಾರೆ ಪೊಲೀಸ್ ಇಲಾಖೆ ಸಿಬ್ಬಂದಿಗಳು. ಇವರ ಸಹಾಯಕ್ಕೆ ಯಾರಾದರೂ ಬಂದಿದ್ದಾರಾ ಎಂದು ಹುಡುಕಿದ್ರೆ ಸಿಗುವ ಉತ್ತರ ಬಿಗ್ ಬಾಸ್ ವಿನ್ನರ್ ಧಾವಿಸಿದ್ದಾರೆ ಎಂದು.
ಹೌದು, ಬಿಗ್ ಬಾಸ್ ಸೀಸನ್ 7 ವಿನ್ನರ್ ಶೈನ್ ಶೆಟ್ಟಿ ನಗರ ಪೊಲೀಸರಿಗೆ ದಿನಸಿ ವಸ್ತುಗಳನ್ನು ಪೂರೈಸಿ ನೆರವಿಗೆ ನಿಂತಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು,ಸುಬ್ರಮಣ್ಯಪುರ ಪೊಲೀಸರಿಗೆ ಶೈನ್ ಅಕ್ಕಿ, ಬೇಳೆ, ಎಣ್ಣೆ, ಉಪ್ಪು ಹೀಗೆ ಅಗತ್ಯ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಈ ಮೂಲಕ ಹಗಲಿರಲು ಸಾಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುತ್ತಿರುವ ಖಾಕಿ ಪಡೆಗೂ ನೆರವಿನ ಹಸ್ತ ಚಾಚಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ