ನಾನಿ ಮತ್ತು ಸಾಯಿ ಪಲ್ಲವಿ (Sai Pallavi) ಅಭಿನಯದ ‘ಮಿಡಲ್ ಕ್ಲಾಸ್ ಅಬ್ಬಾಯಿ’ ತೆಲುಗು ಸಿನಿಮಾ (Telugu Cinema) ಈ ಹಿಂದೆ ಹಿಟ್ ಆಗಿದ್ದು ನಿಮಗೆ ನೆನಪಿರಬಹುದು. ಅದರ ಹಿಂದಿ ರೀಮೇಕ್ ‘ನಿಕಮ್ಮ’ (Nikamma) ಈಗ ತೆರೆ ಕಂಡಿದ್ದು, ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸೋತಿದೆ. ಅಷ್ಟೇ ಅಲ್ಲ, ‘ನಿಕಮ್ಮ’ ನೋಡಿದ ಪ್ರೇಕ್ಷಕರು, ಅಬ್ಬಾ, ಈ ಸಿನಿಮಾ ಎರಡೂವರೇ ಗಂಟೆಯ ತಲೆ ನೋವಲ್ಲದೇ ಮತ್ತೇನೂ ಅಲ್ಲ ಎನ್ನುತ್ತಿದ್ದಾರೆ. ‘ನಿಕಮ್ಮ’ದ ಹೀರೋ ಹೊಸೊಬ್ಬ ಎನ್ನುವುದು ನಿಜವಾದರೂ, ನೀಳಕಾಯದ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಇದ್ದು ಕೂಡ ಈ ಸಿನಿಮಾ ಮೋಡಿ ಮಾಡುವಲ್ಲಿ ವಿಫಲವಾಗಿದೆ.
ಸಿನಿಮಾದ ಕಥೆ ಹೀಗಿದೆ
ನಿರುದ್ಯೋಗಿ ಆದಿ ( ಅಭಿಮನ್ಯು ದಸ್ಸಾನಿ) ಸಿನಿಮಾದ ನಾಯಕ. ಈ ಪಾತ್ರ ಸಾಮಾನ್ಯ ಬಾಲಿವುಡ್ ಸಿನಿಮಾಗಳ ಹೀರೋಗಳಿಗಿಂತ ಭಿನ್ನವೇನಿಲ್ಲ. ಅಣ್ಣ ಮತ್ತು ಕಟ್ಟು ನಿಟ್ಟಿನ (ತೋರಿಕೆಗೆ ಮಾತ್ರ) ಅತ್ತಿಗೆ ಇಷ್ಟೇ ಆದಿಯ ಕುಟುಂಬ. ಅಣ್ಣನಾಗಿ ಸಮೀರ್ ಸೋನಿ, ಅತ್ತಿಗೆಯಾಗಿ ಶಿಲ್ಪಾ ಶೆಟ್ಟಿ ಅಭಿನಯಿಸಿದ್ದಾರೆ. ಆದಿ ಆರಂಭದಲ್ಲಿ ಮಾತ್ರ ಯಾವುದೇ ಜವಾಬ್ದಾರಿ ಇಲ್ಲದ ಯುವಕನಂತೆ ಕಂಡರೂ, ತನ್ನ ನಿಜವಾದ ಬಣ್ಣವನ್ನು ತೋರಿಸಲು ಸಮಯ ಕಾಯುತ್ತಿರುವ ವ್ಯಕ್ತಿ ಎಂಬುವುದು ವೀಕ್ಷಕರಿಗೂ ತಿಳಿದಿರುತ್ತದೆ.
ಇದನ್ನೂ ಓದಿ: Salaar Film: ಸಲಾರ್ ಸಿನಿಮಾದಲ್ಲಿ ಡಬಲ್ ರೋಲ್ ಮಾಡ್ತಾರಂತೆ ಪ್ರಭಾಸ್, ಹೊಸ ಲುಕ್ನಲ್ಲಿ ಬಾಹುಬಲಿ ನೋಡಲು ಫ್ಯಾನ್ಸ್ ವೇಯ್ಟಿಂಗ್ !
ಇನ್ನು ಸಿನಿಮಾದ ನಾಯಕಿ ಒಬ್ಬ ಕಾಲೇಜ್ ಹುಡುಗಿ ( ಶೆರ್ಲಿ ಸೆಟಿಯಾ). ಆದರೆ ವೀಕ್ಷಕರು ಮಾತ್ರ ಅವಳನ್ನು ತರಗತಿ ಕೋಣೆಯೊಳಗೆ ನೋಡುವುದಿಲ್ಲ ಎಂಬುವುದು ಬೇರೆ ಮಾತು. ಹಿಂದಿನ ಕಾಲದ ಸಿನಿಮಾಗಳಲ್ಲಿ ಕಾಲೇಜು ವಿದ್ಯಾರ್ಥಿನಿಯ ಪಾತ್ರ ವಹಿಸುತ್ತಿದ್ದ ನಾಯಕಿಯರು ತೋರಿಕೆಗಾದರೂ ಒಂದೇ ಒಂದು ಪುಸ್ತಕವನ್ನಾದರು ಕೈಯಲ್ಲಿ ಹಿಡಿದು ನಡೆಯುತ್ತಿದ್ದರು. ಇಲ್ಲಿ ಆದಿಯ ನಾಯಕಿ ಮಾತ್ರ ಕೇಶ ವಿನ್ಯಾಸ ಮತ್ತು ಮೇಕಪ್ನ ಗೊಂಬೆಯಲ್ಲದೆ ಮತ್ತೇನೂ ಅಲ್ಲ ಎಂದರೆ ತಪ್ಪಾಗುವುದಿಲ್ಲ.
ಶಿಲ್ಪಾ, ಸಣ್ಣ ಪಟ್ಟಣವೊಂದರಲ್ಲಿ ಸರಕಾರಿ ಅಧಿಕಾರಿ. ಸ್ಥಳೀಯ ಗೂಂಡಾನೊಬ್ಬ ಆಕೆಯ ವಿರೋಧಿ. ಜೊತೆಗೆ ಆತನಿಗೊಂದಿಷ್ಟು ಜನ ಹಿಂಬಾಲಕರು. ಒಂದೇ ಸಾಲಿನಲ್ಲಿ ಹೇಳುವುದಾದರೆ, ಸಿನಿಮಾದ ಕಥೆ ಇಷ್ಟೆ : ಆದಿ ಮತ್ತು ಆತನ ‘ಮಾತೃ ಸಮಾನ’ ಅತ್ತಿಗೆ ಜೊತೆ ಸೇರಿ ಖಳನ ವಿರುದ್ಧ ಹೋರಾಡುತ್ತಾರೆ.
ಸಾಮಾನ್ಯ ಸಿನೆಮಾಗಲ್ಲಿರುವಂತೆಯೇ ಪಾತ್ರಗಳು
ಇನ್ನೂ ಸಾಮಾನ್ಯ ಸಿನಿಮಾಗಳಲ್ಲಿ ಇರುವಂತೆ; ಬೈಕ್ ಚೇಸಿಂಗ್, ಹೊಡೆದಾಟ, ಕೈಕಾಲು ಮುರಿಯುವುದು ಮತ್ತು ಒಬ್ಬನೇ ನಾಯಕ ಹತ್ತಾರು ಗೂಂಡಾಗಳನ್ನು ಹೊಡೆದು ಹಾಕುವುದು ಮುಂತಾದ ಮಸಾಲೆಗಳಿಗೆ ‘ನಿಕಮ್ಮ’ದಲ್ಲೂ ಕೊರತೆ ಇಲ್ಲ. ಇನ್ನೂ ಪ್ರಣಯವೂ ಬೇಕಲ್ಲವೇ, ಅದಕ್ಕೆಂದೇ ನಾಯಕ ನಾಯಕಿಯ ಹಾಡು, ನೃತ್ಯ ಇದ್ದೇ ಇದೆ. ನಿಜ ಹೇಳುವುದಾದರೆ, ಈ ಸಿನಿಮಾದಲ್ಲಿ ನಾವು ಹಿಂದೆಂದೂ ನೋಡಿಯೇ ಇಲ್ಲದ ಒಂದೇ ಒಂದು ಅಂಶವಿಲ್ಲ. ಈ ಸಿನಿಮಾವನ್ನು ಶಬ್ಬೀರ್ ಖಾನ್ ನಿರ್ದೇಶಿಸಿದ್ದಾರೆ. ಮತ್ತು ಶಬ್ಬೀರ್ ಖಾನ್ ಫಿಲ್ಮ್ಸ್ ಮತ್ತು ಸೋನಿ ಪಿಕ್ಚರ್ಸ್ ಇಂಡಿಯಾ ನಿರ್ಮಿಸಿದ್ದಾರೆ.
ಬಾಲಿವುಡ್ನ ಮುಂದಿನ ಕಥೆ ಏನು ?
ಅಭಿಮನ್ಯು ದಸ್ಸಾನಿ, 1989 ರಲ್ಲಿ ತೆರೆ ಕಂಡ ತನ್ನ ತಾಯಿಯ ಚೊಚ್ಚಲ ಚಿತ್ರ ಮೈನೇ ಪ್ಯಾರ್ ಕಿಯಾದಲ್ಲಿ ನಾಯಕನಾಗಿದ್ದ ಸಲ್ಮಾನ್ ಖಾನ್ ಅವರ ಇನ್ನೊಂದು ಆವೃತ್ತಿಯಂತೆ ಕಾಣುತ್ತಾರೆ. ಇದರಲ್ಲಿ ಶರ್ಟ್ಲೆಸ್ ದೃಶ್ಯ ಮಾತ್ರ ಇಲ್ಲ ಎನ್ನುವುದೊಂದೇ ವ್ಯತ್ಯಾಸ.
ಇದನ್ನೂ ಓದಿ: Srinidhi Shetty: ಶ್ರೀನಿಧಿ ಶೆಟ್ಟಿ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ವೈರಲ್, ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಕೆಜಿಎಫ್ ಬೆಡಗಿ
ವೀಕ್ಷಕರು ಎರಡೂವರೆ ಗಂಟೆಗಳ ಕಾಲ ಈ ಸಿನಿಮಾ ನೋಡುತ್ತಾ, ಅಯ್ಯೋ ಹೀಗಾದರೆ ಮುಂದೆ ಬಾಲಿವುಡ್ನ ಭವಿಷ್ಯ ಹೇಗಪ್ಪಾ ಎಂದು ಚಿಂತಿಸುತ್ತಾರೆ ಎಂಬುವುದನ್ನು ಖಚಿತವಾಗಿ ಹೇಳಬಹುದು. ಹೊಸ ನಾಯಕನಿರುವ ಹೊಸ ಸಿನಿಮಾದ ಹೆಸರಿನಲ್ಲಿ, ನಮಗೆ ಇಂತಹ ಸಿನಿಮಾ ನೋಡಲು ಸಿಗುವುದಾದರೆ, ಬಾಲಿವುಡ್ನ ಕಥೆ ಏನು? ಒಂದೊಂದೇ ಸಿನಿಮಾ ಹೀಗೆ ಫ್ಲಾಪ್ ಆಗುತ್ತಿದ್ದರೆ ಹಿಂದಿ ಚಿತ್ರರಂಗ ಎತ್ತ ಸಾಗುತ್ತಿದೆ ಎಂಬ ಯಕ್ಷ ಪ್ರಶ್ನೆ ಮೂಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ