ಮುಂಬೈ: ನಟಿ, ಮಾಡೆಲ್ ಶರ್ಲಿನ್ ಚೋಪ್ರಾ (Sherlyn Chopra) ಗಂಭೀರ ಆರೋಪಗಳನ್ನ ಮಾಡಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಉದ್ಯಮಿ ರಾಜ್ ಕುಂದ್ರಾ (Raj Kundra) ವಿರುದ್ಧ ದೂರು ದಾಖಲಿಸಿದ್ದಾರೆ. ಅಶ್ಲೀಲ ಚಿತ್ರಗಳ ನಿರ್ಮಾಣದ ಆರೋಪದಡಿಯಲ್ಲಿ ಬಂಧಿಯಾಗಿದ್ದ ರಾಜ್ ಕುಂದ್ರಾ ಕಳೆದ ಕೆಲ ದಿನಗಳ ಹಿಂದೆಯೇ ಜಾಮೀನಿನ ಮೇಲೆ ಹೊರ ಬಂದಿದ್ದರು. ಇದೀಗ ಶರ್ಲಿನ್, ಮೋಸ ಮತ್ತು ಮಾನಸಿಕ ಕಿರುಕುಳ ಆರೋಪಗಳನ್ನ ಮಾಡಿದ್ದಾರೆ. ಜಾಮೀನಿನ ಮೇಲೆ ಹೊರ ಬಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ರಾಜ್ ಕುಂದ್ರಾ ಕುಟುಂಬಕ್ಕೆ ಶಾಕ್ ಸಿಕ್ಕಿದೆ. ರಾಜ್ ಕುಂದ್ರಾ ಒಡೆತನದ 'ಜೆಎಲ್ ಸ್ಟ್ರೀಮ್' ಕಂಪನಿಗೆ ಮೂರು ವಿಡಿಯೋಗಳನ್ನು ಶೂಟ್ ಮಾಡಿಸಿಕೊಳ್ಳಲಾಗಿದೆ. ಆದ್ರೆ ಶೂಟ್ ಬಳಿಕ ಯಾವುದೇ ಹಣ ನೀಡಿಲ್ಲ. ಇದೇ ದೂರಿನಲ್ಲಿ ದೇಹವ್ಯಾಪಾರದ ಬಳಿಕ ರಾಜ್ ಕುಂದ್ರಾ ಆ ನಟಿಯರಿಗೂ ಸಂಭಾವನೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಶರ್ಲಿನ್ ಚೋಪ್ರಾ, ಇದರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಕ್ಯಾಪ್ಷನ್ ನಲ್ಲಿ, ಇಂದು ನಮ್ಮ ಕಾನೂನು ಸಲಹೆಗಾರರ ಜೊತೆ ಜುಹೂ ಪೊಲೀಸ್ ಠಾಣೆಗೆ ತೆರಳಿದ್ದೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ವಿರುದ್ಧ ದೂರು ಸಲ್ಲಿಸಿದ್ದೇನೆ. ರಾಜ್ ಕುಂದ್ರಾ ಕಿರುಕುಳ ನೀಡೋದರ ಜೊತೆಗೆ ಅಂಡರ್ವರ್ಲ್ಡ್ನವರು ಬೆದರಿಕೆ ಸಹ ಹಾಕಿದ್ದಾರೆ. ಕಣ್ಣೀರು ಹಾಕುತ್ತಾ ವಿಡಿಯೋದಲ್ಲಿ ಮಾತನಾಡಿರುವ ಶರ್ಲಿನ್ ಚೋಪ್ರಾ, ಇನ್ಮುಂದೆ ಭಯದಿಂದ ಜೀವನ ನಡೆಸಲು ನನ್ನಿಂದ ಆಗಲ್ಲ ಎಂದು ಹೇಳಿಕೊಂಡಿದ್ದಾರೆ.
ಶರ್ಲಿನ್ ನೀಡಿದ ದೂರಿನಲ್ಲಿರುವ ಪ್ರಮುಖ ಅಂಶಗಳು ಹೀಗಿವೆ:
* ಹುಡುಗಿರ ದೇಹ ಪ್ರದರ್ಶಿಸುವ ನೀವು ಕೆಲಸ ಮುಗಿದ್ಮೇಲೆ ವೇತನ ಏಕೆ ನೀಡಲ್ಲ? ಅವರಿಗೆ ಮೋಸ ಏಕೆ ಮಾಡುತ್ತೀರಿ? ಕೆಲಸ ಮುಗಿದ ಬಳಿಕ ನಟಿಯರಿಗೆ ಟೋಪಿ ಹಾಕೋದು ಏಕೆ? ಇದೇನಾ ನಿಮ್ಮ ವ್ಯವಹಾರದ ನೈತಿಕತೆ?
* ನೀವು ಉದ್ಯಮಿ ಆಗಬೇಕಿದ್ರೆ, ಟಾಟಾ ಹೇಗೆ ವ್ಯವಹಾರ ಮಾಡುತ್ತೆ ಅನ್ನೋದನ್ನ ಅವರಿಂದ ಕಲಿತುಕೊಳ್ಳಿ. ಅವರೆಲ್ಲರದ್ದೂ ನೈತಿಕತೆ ವ್ಯವಹಾರ. ಅವರುಗಳು ನೀಡಿದ ಮಾತನ್ನು ಪೂರ್ಣ ಮಾಡುತ್ತಾರೆ. ನೀವೇನು ಮಾಡಿದೀರಿ?
* ನೀವು ಕಲಾವಿದರ ಮನೆಗೆ ತೆರಳಿ ಕಿರುಕುಳ ನೀಡುತ್ತೀರಿ. ಜೊತೆಗೆ ಭೂಗತ ಲೋಕದ ಬೆದರಿಕೆ ಹಾಕುವ ಮೂಲಕ ದೂರು ಹಿಂಪಡೆದುಕೊಳ್ಳಲು ಒತ್ತಡ ಹಾಕೋದು ಏಕೆ?
* ರಾಜ್ ಕುಂದ್ರಾ ತಮಗೆ ರಂಜಿತ್ ಬಿಂದ್ರಾ ನಂಬರ್ ತೋರಿಸುತ್ತಾ, ಇವನು ಡಿ ಕಂಪನಿಯ ವ್ಯಕ್ತಿ. ಇದೇ ರೀತಿ ಹೇಳಿಕೆ ನೀಡುತ್ತಿದ್ರೆ ಸದ್ಯ ನಿಮ್ಮ ಬಳಿಯಲ್ಲಿರೋ ಎರಡ್ಮೂರು ಚಿತ್ರಗಳು ಕೈ ತಪ್ಪಬಹುದು ಎಂದು ಹೇಳಿದರು. ಆದ್ರೆ ಇಂದು ನಿಮಗೆ ನಾನು ಹೆದರಲ್ಲ. ನಾನು ದುರ್ಗಾ ದೇವಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ.
* ನೀವು ಹೇಳಿದ ಎಲ್ಲ ಮಾತುಗಳು ನೆನಪಿನಲ್ಲಿವೆ. ಇದು ಕೇವಲ ಹಣದ ವಿಷಯವಲ್ಲ. ಮನೆಯಲ್ಲಿ ಭಯದಿಂದ ಕಣ್ಣೀರು ಹಾಕಿ ಜೀವನ ನಡೆಸಿದ್ದೇನೆ. ಇನ್ಮುಂದೆ ಆ ರೀತಿ ಬದುಕಲಾರೆ. ಈ ವಿಷಯವನ್ನು ಪೊಲೀಸರಿಗೂ ಹೇಳಿದ್ದೇನೆ ಅಂತ ಶರ್ಲಿನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kerala flood- ಕೇರಳದಲ್ಲಿ ಭೀಕರ ಪ್ರವಾಹ; ಮುಳುಗಿದ ಬಸ್, ಜನರ ಸಾವು-ಬದುಕಿನ ಹೋರಾಟದ ವಿಡಿಯೋ
2019ರಲ್ಲಿಯೂ ಲೈಂಗಿಕ ಕಿರುಕುಳದ ಆರೋಪ:
ಶರ್ಲಿನ್ ಚೋಪ್ರಾ 2019ರಲ್ಲಿಯೂ ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದ್ದಕ್ಕಿದಂತೆ ತಮ್ಮ ನಿವಾಸಕ್ಕೆ ಬಂದಿದ್ದ ಕುಂದ್ರಾ ತಮಗೆ ಕಿರುಕುಳ ನೀಡಿದ್ದರು. ರಾಜ್ ಕುಂದ್ರಾರನ್ನ ಹಿಂದಕ್ಕೆ ತಳ್ಳಲು ಪ್ರಯತ್ನಿಸಿದರೂ ಬಲವಂತವಾಗಿ ಕಿಸ್ ಮಾಡಿದ್ದರು ಎಂದು ಶರ್ಲಿನ್ ಆರೋಪಿಸಿದ್ದರು. ಸದ್ಯ ನೀಡಿರುವ ದೂರಿನಲ್ಲಿ ಶಿಲ್ಪಾ ಶೆಟ್ಟಿ ಹೆಸರನ್ನ ಸಹ ಉಲ್ಲೇಖಿಸಲಾಗಿದೆ. ಗುರುವಾರ ಸುದ್ದಿಗೋಷ್ಠಿ ಕರೆದಿರುವ ಶರ್ಲಿನ್ ಚೋಪ್ರಾ ಮತ್ತಷ್ಟು ಸತ್ಯಗಳನ್ನು ಹೇಳೋದಾಗಿ ಬಾಂಬ್ ಸಿಡಿಸಿದ್ದಾರೆ.
- ಮಹಮ್ಮದ್ ರಫೀಕ್ ಕೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ