ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಕೋಟ್ಯಂತರ ಭಾರತೀಯರ ಮನಸ್ಸು ಗೆದ್ದವರು. ತಮ್ಮ ಅಭಿನಯ ಮತ್ತು ಮ್ಯಾನರಿಸಂನಿಂದಾಗಿ ವಿಶ್ವ ಪ್ರಸಿದ್ಧಿ ಪಡೆದ ಸೂಪರ್ಸ್ಟಾರ್. ಆದರೆ ಕಾಲ ಸರಿದಂತೆ ಎಲ್ಲವೂ ಬದಲಾಗುತ್ತದೆ ಅನ್ನೋ ಹಾಗೆ ಶಾರುಖ್ ಖಾನ್ ಸಿನಿ ಜೀವನವು ಈಗ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಎಸ್ಆರ್ಕೆ ಈಗ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಹಾಗೆ ನೋಡುವುದಾದರೆ ಅವರ ಇತ್ತೀಚಿನ ಯಾವ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಈ ಕಾರಣದಿಂದಲೇ ಮತ್ತೊಮ್ಮೆ ತಮ್ಮ ಯಶಸ್ಸನ್ನು ನೋಡುವ ಕಾತುರದಲ್ಲಿದ್ದಾರೆ.
ಇದೆಲ್ಲದರ ನಡುವೆ ಶಾರುಖ್ ತಮ್ಮ ಅಭಿಮಾನಿಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಭಾಷಣೆ ನಡೆಸಿದ್ದಾರೆ. #AskSRK ಎನ್ನುವ ಸೆಷನ್ ನಡೆಸುವ ಮೂಲಕ ಟ್ವಿಟ್ಟರ್ನಲ್ಲಿ ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಶಾರುಖ್ ಅವರ ಸಿನಿಮಾವನ್ನು ಮಿಸ್ ಮಾಡುತ್ತಿದ್ದ ಅಭಿಮಾನಿಗಳು ನೇರವಾಗಿ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕೆ ಸಖತ್ ಥ್ರಿಲ್ ಆಗಿದ್ದಾರೆ. ಇನ್ನು, ಈ ಸೆಷನ್ನಲ್ಲಿ ಪ್ರಶ್ನೆಗಳ ಸುರಿಮಳೆ ಇದ್ದು ಎಲ್ಲದ್ದಕ್ಕೂ ಬೆಸ್ಟ್ ಆನ್ಸರ್ ಕೊಟ್ಟು ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ ಕಿಂಗ್ ಖಾನ್.
ಸಲ್ಮಾನ್ ಖಾನ್ ಕುರಿತು ಶಾರುಖ್ ಖಾನ್ ಮಾತು
ಈ ಸೆಷನ್ನಲ್ಲಿ ಅಭಿಮಾನಿಯೊಬ್ಬರು ಸಲ್ಮಾನ್ ಖಾನ್ ಅವರ ಬಗ್ಗೆ ಕೆಲವು ಮಾತುಗಳನ್ನು ಹಂಚಿಕೊಳ್ಳಬಹುದೇ? ಎಂದು ಪ್ರಶ್ನಿಸಿದಾಗ 'ಭಾಯ್ ತೋ ಭಾಯೀ ಹೇ ಹೈ' ( ಅಣ್ಣಾ ಯಾವಾಗಲೂ ಅಣ್ಣನಾಗಿಯೇ ಇರುತ್ತಾರೆ) ಎಂದು ಉತ್ತರಿಸಿದ್ದಾರೆ. ಈ ಇಬ್ಬರು ಸೂಪರ್ ಸ್ಟಾರ್ಸ್ ಇತ್ತೀಚೆಗೆ ಪಟಾನ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು.
ಬಾಲಿವುಡ್ನಲ್ಲಿ ಶಾರುಖ್ ಖಾನ್ ಸ್ನೇಹಿತರು ಯಾರು?
ಬಾಲಿವುಡ್ನಲ್ಲಿ ಎಸ್ಆರ್ಕೆ ಅವರ ಸ್ನೇಹಿತರು ಯಾರು? ಎನ್ನುವ ಅಭಿಮಾನಿಯ ಪ್ರಶ್ನೆಗೆ ಕೊಟ್ಟ ಉತ್ತರ ಬಹಳ ಕುತೂಹಲಕಾರಿಯಾಗಿತ್ತು. 'ಸರ್ ನೀವು ಒಮ್ಮೆ ನಿಮಗೆ ಸ್ನೇಹವನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಿಲ್ಲ, ಆದ್ದರಿಂದ ನಿಮಗೆ ಯಾರು ಸ್ನೇಹಿತರಿಲ್ಲ ಎಂದು ಕಾಫಿ ವಿತ್ ಕರಣ್ ಶೋನಲ್ಲಿ ಹೇಳಿದ್ರಿ! ನೀವು ಈಗಲೂ ಹಾಗೆಯೇ ಇದ್ದೀರಾ?' ಎನ್ನುವ ಅಭಿಮಾನಿಯೊಬ್ಬರ ಪ್ರಶ್ನೆಗೆ ಎಸ್ಆರ್ಕೆ 'ಇಲ್ಲ ಈಗ ನನ್ನ ಮಕ್ಕಳೇ ನನ್ನ ಸ್ನೇಹಿತರು' ಎಂದು ಉತ್ತರಿಸಿದ್ದಾರೆ.
ಅಮೀರ್ ಖಾನ್ ಅವರ ಅತ್ಯುತ್ತಮ ಚಿತ್ರಗಳ ಬಗ್ಗೆ ಮಾತನಾಡಿದ ಶಾರುಖ್
ಖಯಾಮತ್ ಸೇ ಖಯಾಮತ್ ತಕ್, ದಂಗಲ್, ಲಗಾನ್ ಮತ್ತು 3 ಈಡಿಯಟ್ಸ್ ಇವು ಅಮೀರ್ಖಾನ್ ಅಭಿನಯದ ಶಾರುಖ್ ಅವರ ಮೆಚ್ಚಿನ ಸಿನಿಮಾಗಳು ಎನ್ನುವುದನ್ನು ಸಹ ಈ ಸೆಷನ್ನಲ್ಲಿ ತಿಳಿಸಿದ್ದಾರೆ.
ಕರಿಯರ್ ಬಗ್ಗೆ ಸಲಹೆ ನೀಡಿದ ಶಾರುಖ್
23 ವರ್ಷದ ಅಭಿಮಾನಿಯೊಬ್ಬರು ಈ ವಯಸ್ಸಿನಲ್ಲಿ ಕರಿಯರ್ ಆರಂಭಿಸುವ ಬಗ್ಗೆ ಗೊಂದಲವುಂಟಾಗಿದೆ ಏನು ಮಾಡುವುದು ಎಂದು ಕೇಳಿದ್ದಾರೆ. ಇದಕ್ಕೆ ಎಸ್ಆರ್ಕೆ 'ವಯಸ್ಸು ಅನ್ನುವುದು ಒಂದು ಸಂಖ್ಯೆಯಷ್ಟೇ... ಶ್ರಮವಹಿಸಿ ದುಡಿಯಿರಿ, ಎಲ್ಲವೂ ನಿಮ್ಮ ಕೈ ಸೇರುತ್ತದೆ. ನಾನು 26 ನೇ ವರ್ಷಕ್ಕೆ ನನ್ನ ಫಿಲಂ ಕರಿಯರ್ ಆರಂಭಿಸಿದೆ. ಅದು ನನ್ನ ಕೈ ಹಿಡಿಯಿತು. ಅಂದ ಮೇಲೆ ನೀವು ನಿಮ್ಮ ಉಳಿದ ವರ್ಷಗಳನ್ನು ವ್ಯರ್ಥ ಮಾಡಬೇಡಿ' ಎಂದು ಸಲಹೆ ನೀಡಿದ್ದಾರೆ.
ತಮ್ಮ ಸರಣಿ ಬಾಕ್ಸ್ ಆಫೀಸ್ ಸೋಲಿನ ಬಗ್ಗೆ ಮಾತನಾಡಿದ ಎಸ್ಆರ್ಕೆ
ಅಭಿಮಾನಿಯೊಬ್ಬರು 'ಜಬ್ ಹ್ಯಾರಿ ಮೆಟ್ ಸೇಜಲ್' ಸಿನಿಮಾದ ಸೀಕ್ವೇಲ್ ಯಾಕೆ ಮಾಡಬಾರದು ಎಂದು ಕೇಳಿದ್ದಾರೆ. ಅದಕ್ಕೆ ಎಸ್ಆರ್ಕೆ ನಗುತ್ತಲೇ ತಮಾಷೆಯಾಗಿ ಉತ್ತರಿಸಿದ್ದಾರೆ. ' ಹ್ಹ..ಹ್ಹ... ಇಲ್ಲಿ ಟ್ವಿಟ್ಟರ್ನಲ್ಲಿ ಎಲ್ಲರೂ ಏಕೆ ಬಾಕ್ಸ್ ಆಫೀಸ್ನಲ್ಲಿ ಸೋತ ಚಿತ್ರಗಳ ಸೀಕ್ವೇಲ್ ಅನ್ನೇ ಸಿನಿಮಾ ಮಾಡಲು ಕೇಳುತ್ತಿದ್ದಾರೆ ' ಎಂದಿರುವುದು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ. ಅಲ್ಲದೇ ಶಾರುಖ್ ತಮ್ಮ ಕರಿಯರ್ನ ಏರಿಳಿತಗಳನ್ನು ಎಷ್ಟು ಸುಲಭವಾಗಿ ತೆರೆದಿಟ್ಟಿದ್ದಾರೆ ಎನ್ನುವುದು ಈ ಉತ್ತರದಲ್ಲಿ ಕಾಣುತ್ತದೆ.
ಶಾರುಖ್ ಖಾನ್ ತೆರೆ ಮೇಲೆ ಕಾಣಿಸಿಕೊಂಡು 3 ವರ್ಷಗಳೇ ಕಳೆದಿವೆ. ಅವರ ಮುಂದಿನ ಸಿನಿಮಾ ಪಟಾನ್ 2022 ಕ್ಕೆ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ