ಕೇಳದೆ ಬಂದೆ ನೀನು...ಹೇಳದೆ ನನ್ನ ಮನಸ್ಸಲ್ಲಿ...ಎಂಬ ಬ್ಯೂಟಿಫುಲ್ ಆಲ್ಬಂ ನೀಡಿದ್ದ ಅಧ್ವಿಕ್ ಮತ್ತು ತಂಡ ಮತ್ತೆ ಬಂದಿದೆ. ಅದು ಕೂಡ ಸೇರು ನನ್ನ ತೋಳಲ್ಲಿ ಎನ್ನುತ್ತಾ...ಹೌದು, ಕನ್ನಡದಲ್ಲಿ ಮತ್ತೊಂದು ರೊಮ್ಯಾಂಟಿಕ್ ಲವ್ ಆಲ್ಬಂ ರಿಲೀಸ್ ಆಗಿದೆ.
ಅಧ್ವಿಕ್ ಕಂಪೋಸ್ ಮಾಡಿರುವ ಈ ಮ್ಯೂಸಿಕ್ ಆಲ್ಬಂನಲ್ಲಿ 'ಲೈಫ್ 360' ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್‌ಚಂದ್ರ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಇಲ್ಲಿ ನಾಯಕಿಯಾಗಿ 'ಭಿನ್ನ' ಚಿತ್ರದ ಹಿರೋಯಿನ್ ಪಾಯಲ್ ರಾಧಾಕೃಷ್ಣ ಅಂಧೆಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ವಿಶೇಷ ಪಾತ್ರದಲ್ಲಿ ಆರ್ಜೆ ವಿನಾಯಕ್ ಜೋಷಿ ವೈದ್ಯರಾಗಿ ಎಂಟ್ರಿ ಕೊಟ್ಟಿದ್ದಾರೆ.
ಮನ ಮೋಹಕವಾಗಿ ಮೂಡಿ ಬಂದಿರುವ ಸೇರು ನನ್ನ ತೋಳಲ್ಲಿ ಗೀತೆಗೆ ಸಾಹಿತ್ಯ ನೀಡಿದ್ದು ಅರ್ಜುನ್ ಚಂದ್ರಶೇಖರ್. ಬೆಂಗಳೂರು ಮತ್ತು ಚಿಕ್ಕಮಗಳೂರಿನ ಸುತ್ತ ಮುತ್ತ ಚಿತ್ರೀಕರಿಸಲಾಗಿರುವ ಈ ಹಾಡಿಗೆ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣವಿದೆ.
ಯುವ ತಂಡವೊಂದರ ಸಂಗೀತ ಪ್ರೀತಿಗೆ ಗಗನ್.ಜೆ.ಗೌಡ- ಸುನಿಲ್‍ಕುಮಾರ್ ಕ್ರಾಂತಿ ಕ್ರಿಯೇಷನ್ಸ್ ಮೂಲಕ ಸಾಥ್ ನೀಡಿದ್ದು, ಈ ಗೀತೆಗಾಗಿ ಸುಮಾರು 7 ಲಕ್ಷ ರೂ ವೆಚ್ಚ ಮಾಡಿದ್ದಾರೆ. ಈಗಾಗಲೇ ಯೂಟ್ಯೂಬ್‍ನಲ್ಲಿ ಈ ಹಾಡಿಗೆ ವೀಕ್ಷಕರಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ನಿನ್ನ ಗುಂಗಲ್ಲೇ ಅಂತೆಯೇ ಸೇರು ನನ್ನ ತೋಳಲ್ಲಿ ಗೀತೆ ಕೂಡ ಸೂಪರ್ ಹಿಟ್ ಆಗಲಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ