ವಿಮರ್ಶೆ: ಮಂತ್ರಮುಗ್ಧವಾಗಿಸುವ 3 ಪಾತ್ರಗಳು: ನಿರೀಕ್ಷೆ ಮೂಡಿಸುತ್ತವೆ ಸಂಜು ಸಿನಿಮಾದ  ತಿರುವುಗಳು!

news18
Updated:June 29, 2018, 5:03 PM IST
ವಿಮರ್ಶೆ: ಮಂತ್ರಮುಗ್ಧವಾಗಿಸುವ 3 ಪಾತ್ರಗಳು: ನಿರೀಕ್ಷೆ ಮೂಡಿಸುತ್ತವೆ ಸಂಜು ಸಿನಿಮಾದ  ತಿರುವುಗಳು!
news18
Updated: June 29, 2018, 5:03 PM IST
ನ್ಯೂಸ್ 18 ಕನ್ನಡ 

ಬಾಲಿವುಡ್‍ನ ಬಹು ನಿರೀಕ್ಷಿತ ಸಿನಿಮಾ 'ಸಂಜು' ಬಿಡುಗಡೆಯಾಗಿದೆ. ಒಂದೊಮ್ಮೆ ಜೈಲು ಹಕ್ಕಿಯಾಗಿದ್ದ ಸಂಜಯ್ ದತ್ ಅವರ ಜೀವನಾಧರಿತ ಚಿತ್ರವನ್ನ ಕಣ್ಣುತುಂಬಿಕೊಳ್ಳೋಕೆ  ಇಡೀ ಚಿತ್ರಸಮೂಹ ಕಾಯುತ್ತಿತ್ತು. ಅಷ್ಟೇ ಅಲ್ಲ ಸಂಜಯ್‍ನ ಅಳಿದುಳಿದ ಅಭಿಮಾನಿಗಳು, ಪ್ರತಿನಿತ್ಯ ಟೀವಿ, ಪೇಪರ್​ ನೋಡೋರಿಗರಲ್ಲಿ ಈ ಸಿನಿಮಾ ಆಸಕ್ತಿ ಮೂಡಿಸಿತ್ತು. ನಮಗೂ ಈ ಚಿತ್ರ ಹೇಗಿದೆ ಅನ್ನೊ ಕುತೂಹಲ ಇತ್ತು. ಹಾಗಾಗಿ ಒಬ್ಬ ಪ್ರೇಕ್ಷಕನಾಗಿ ಈ ಚಿತ್ರವನ್ನ ನೋಡಿ, ವಿಮರ್ಶಕರಾಗಿ ನಿಮ್ಮ ಮುಂದಿಡುತ್ತಿದ್ದೇವೆ.

ಇವತ್ತು ದೊಡ್ಡ ನಿರೀಕ್ಷೆಯೊಂದಿಗೆ ರಿಲೀಸಾಗಿರೊ 'ಸಂಜು' ಸಿನಿಮಾ ಹೀಗೆ ಮಾಡಬೇಕು ಅಂತಂದುಕೊಂಡ ಸಿನಿಮಾ. ಹಾಗಾಗಿ ಈ ಸಿನಿಮಾ ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಅಂದುಕೊಂಡಂತೆಯೇ ಮೂಡಿಬಂದಿದೆ.

ಈ ಸಿನಿಮಾದ ಕಥೆ ಈಗಾಗಲೆ ಎಲ್ಲರಿಗೂ ಗೊತ್ತಿದೆ. ಹಾಗಾದರೆ ಸಂಜಯ್ ದತ್ ಜೀವನಾಧರಿತ ಈ ಸಿನಿಮಾದಲ್ಲಿ ಏನಿದೆ ಅನ್ನೋದೆ ಎಲ್ಲರಿಗೂ ಥಿಯೇಟರ್​ನಲ್ಲಿ ಕೂತಾಗ ಮೂಡುವ ಮೊದಲ ಪ್ರಶ್ನೆ. ಆ ಪ್ರಶ್ನೆಗೆ ಉತ್ತರವಾಗಿ ಖಂಡಿತವಾಗಿಯೂ ಈ ಸಿನಿಮಾ ಮೂಡಿಬಂದಿದೆ. ಮಾಧ್ಯಮಗಳಲ್ಲಿ ಬಂದ ಸತ್ಯಕ್ಕೂ, ಸಂಜಯ್ ದತ್ ಜೀವನದಲ್ಲಿ ನಡೆದಿರೊ ನೈಜ ಘಟನೆಗಳಿಗೂ ಅದೆಷ್ಟು ಅಂತರವಿದೆ ಅನ್ನೋದು ಈ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ.

ಒಬ್ಬ ವ್ಯಕ್ತಿಯ ಜೀವನಾಧರಿತ ಸಿನಿಮಾಗಳನ್ನು ಮಾಡಬೇಕಾದರೆ ಸಾಕ್ಷ್ಯಚಿತ್ರ ಆಗಿಬಿಡುವ ಅಪಶಯವೇ ಹೆಚ್ಚಿರುತ್ತದೆ. ಆದರೆ ರಾಜ್‍ಕುಮಾರ್ ಹಿರಾನಿ ಈ ಚಿತ್ರವನ್ನ ಒಂದು ಭಾವನಾತ್ಮಕ, ಮನರಂಜನಾತ್ಮಕ ಮತ್ತು ಸಾಮಾಜಿಕ ಬದ್ಧತೆಯುಳ್ಳ ಚಿತ್ರವನ್ನಾಗಿ ಮಾಡಿದ್ದಾರೆ. ನಿಮಗೆ ಇದು ಸಂಜಯ್ ದತ್ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಒಂದು ಎಂಜಾಯ್​ ಮಾಡುವ ಕಮರ್ಷಿಯಲ್ ಸಿನಿಮಾದಂತಿರುವುದು ಸಹ ಈ ಸಿನಿಮಾದ ಒಂದು ಪ್ಲಸ್​ ಪಾಯಿಂಟ್​.

ನೀವು ರಣಬೀರ್ ಕಪೂರ್​ ಅವರನ್ನು ರಣಬೀರ್ ಕಪೂರ್ ಆಗಿ ನೋಡದೆ ಆತನಲ್ಲಿ ಸಂಜಯ್ ದತ್‍ರನ್ನ ನೋಡುತ್ತೀರಿ. ಅಷ್ಟು ಚೆನ್ನಾಗಿ ರಣಬೀರ್ ಈ ಪಾತ್ರಕ್ಕಾಗಿ ಹೋಮ್‍ವರ್ಕ್ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ. ಎಲ್ಲಿಯೂ ಕ್ಯಾಮೆರಾ ನಮ್ಮನ್ನ ಸಿನಿಮಾದಿಂದ ಹಾಗೂ ಕಥೆಯಿಂದ ಹೊರಗೆ ಕರೆದುಕೊಂಡು ಹೋಗೋದಿಲ್ಲ, ಒಬ್ಬ ನುರಿತ ಕಥೆಗಾರ ಒಂದು ಚಿತ್ರವನ್ನ ನಮ್ಮ ಮುಂದೆ ಯಾವುದೇ ಅಡೆತಡೆ ಇಲ್ಲದೆ ಕಥೆ ಹೇಳಿದಂತೆ 'ಸಂಜು' ಸಂಪೂರ್ಣವಾಗಿ ಸಾಗುತ್ತದೆ. ಇದಕ್ಕೆ ಕಾರಣ ಈ ಚಿತ್ರದ ರಾಜ್‍ಕುಮಾರ್ ಹಿರಾನಿ. ಅವರೇ ಖುದ್ದು ಕುಳಿತು ಈ ಚಿತ್ರದ ಎಡಿಟಿಂಗ್ ಮಾಡಿದ್ದಾರಂತೆ.

ತಾರೆಯರ ಮನೆ ಮೇಲೆ ಊಹಾಪೋಹದ ಬೇಕಾಬಿಟ್ಟಿ ಸುದ್ದಿಗಳ ಕಲ್ಲು ಹೊಡೆಯೊ ಮಾಧ್ಯಮಗಳಿಗೆ ಜೋರಾಗಿಯೇ ಈ ಸಿನಿಮಾದಲ್ಲಿ ಚಾಟಿ ಬೀಸಲಾಗಿದೆ. ನ್ಯಾಯಾಲಯಕ್ಕಿಂತ ಮುಂಚೆಯೇ ತೀರ್ಪು ಕೊಟ್ಟು ಸತ್ಯವನ್ನ ದೂರವಿಟ್ಟು ಅತಿರಂಜನೀಯವಾಗಿ ಸುದ್ದಿಗಳನ್ನ ಬರೆದು ಪೇಪರ್ ಸೇಲ್ಸ್ ಮತ್ತು ಟಿಆರ್​ಪಿಗಾಗಿ ನಡೆಯೊ ಸುದ್ದಿಮನೆಯ ಕೆಟ್ಟಬುದ್ಧಿಯನ್ನೂ ಹಿರಾನಿ ಸೊಗಸಾಗಿ ತೋರಿಸಿದ್ದಾರೆ. ಈ ದೃಶ್ಯಗಳಲ್ಲಿ ಕೆಲವೊಮ್ಮೆ ಕೋಪ, ಕೆಲವೊಮ್ಮೆ ಅನುಕಂಪ ಮತ್ತೆ ಕೆಲವೊಮ್ಮೆ ಸುದ್ದಿ ಮಾಡುವವರ ಬಗ್ಗೆ ಅಯ್ಯೋ ಪಾಪ ಎಂದೆನಿಸುತ್ತದೆ.
Loading...

ಹಾಗಾದರೆ ಸಂಜಯ್ ದತ್ ತಪ್ಪೇ ಮಾಡಿಲ್ಲವಾ? ಆತ ಹಾಗಾದರೆ ಜೈಲಲ್ಲಿ ಇದ್ದದ್ದನ್ನೆ ತಪ್ಪು ಅಂತ ತೋರಿಸಲಾಗಿದೆಯಾ ? ಅಲ್ಲ, ಬದಲಿಗೆ ಆತ ಯಾಕೆ ಭಯೋತ್ಪಾದಕ ಅಲ್ಲ, ಅವನ ಮನೆಯಲ್ಲಿ ಎಕೆ 47 ಗನ್ ಇಟ್ಟುಕೊಳ್ಳಲು ಏನೆಲ್ಲ ಪರಿಸ್ಥಿತಿಗಳು ನಿರ್ಮಾಣವಾಗಿದ್ದವು ಅನ್ನೋದರ ಸ್ಥೂಲ ಪರಿಚಯ ಈ ಚಿತ್ರದಲ್ಲಿದೆ.

ಸಂಜಯ್ ದತ್ ಜೈಲಲ್ಲಿ ಏನೇನೂ ಅನುಭವಿಸಬೇಕಾಯಿತು ? ಮನೆಯವರ ಪರಿಸ್ಥಿತಿ ಹೇಗಿತ್ತು? ಸಂಜಯ್ ದತ್ ಅಮ್ಮನ ಕ್ಯಾನ್ಸರ್​, ಅಪ್ಪ ಸುನಿಲ್ ದತ್ ಮಮತೆ. ಅವರಿಗೆ ಅದೆಷ್ಟೇ ಪೊಲಿಟಿಕಲ್ ಪವರ್ ಇದ್ದರೂ ಮಗನಿಗೆ ಬೇಲ್ ಕೊಡಿಸಲಾಗದೆ ಒದ್ದಾಡಿದ್ದು. ಹೀಗೆ ಹೇಳುತ್ತಾ ಹೋದರೆ ಈ ಸಿನಿಮಾದಲ್ಲಿ ದೊಡ್ಡ ಸರಕಿದೆ. ಅದನ್ನ ಎರಡು ಗಂಟೆ 40 ನಿಮಿಷದಲ್ಲಿ ಒಂಚೂರು ಬೋರಾಗದಂತೆ ನಗಿಸಿ, ಅಳಿಸಿ, ಕುಣಿಸಿ, ಕಸಿವಿಸಿಗೊಳಿಸಿ ದೊಡ್ಡ ಪರದೆಯ ಮೇಲೆ ತಮ್ಮ ಜಾದೂ ಮೂಡಿಸಿದ್ದಾರೆ ನಿರ್ದೇಶಕ ರಾಜ್‍ಕುಮಾರ್ ಹಿರಾನಿ.

ಈ ಸಿನಿಮಾದಲ್ಲಿ ರಣಬೀರ್ ಕಪೂರ್ ತಂದೆಯಾಗಿ ಪರೇಶ್​ ರಾವಲ್​, ತಾಯಿಯಾಗಿ ಮನಿಷಾ ಕೊಯಿರಾಲ, ಗರ್ಲ್‍ಫ್ರೆಂಡ್ ಆಗಿ ಸೋನಮ್ ಕಪೂರ್, ಮಡದಿಯಾಗಿ ದಿಯಾ ಮಿರ್ಜಾ, ಲೇಖಕಿಯಾಗಿ ಅನುಷ್ಕಾ ಶರ್ಮಾ ಮತ್ತು ಬಹುಮುಖ್ಯವಾಗಿ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಆಗಿ ಸಂಜಯ್ ದತ್‍ರ ಜೀವದ ಗೆಳೆಯನ ಪಾತ್ರವನ್ನ ವಿಕ್ಕಿ ಕೌಶಲ್ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಬಹುಮುಖ್ಯವಾಗಿ ಕಥೆ ನಡೆಯೋದು ಮೂರು ಪಾತ್ರಗಳ ಸುತ್ತ. ಈ ಮೂರೂ ಪಾತ್ರಗಳನ್ನ ಮಾಡಿರುವ ನಟರಿಗೆ ಪ್ರಶಸ್ತಿ ಬಂದರೆ ಅಚ್ಚರಿಯೇನಲ್ಲ.
ಮೊದಲನೆಯದು ಸಂಜಯ್‍ದತ್, ಎಡರನೇಯದು ಸಂಜಯ್ ತಂದೆ ಸುನಿಲ್ ದತ್ ಮತ್ತು ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಸಂಜಯ್ ದತ್ ಗೆಳೆಯ ತ್ರಿಪಾಠಿ. ಈ ಮೂರು ಪಾತ್ರಗಳು  ಸಿನಿಮಾದ ಆರಂಭದಿಂದ ಅಂತ್ಯದವರೆಗೂ ಇರುತ್ತವೆ.

ಜೀವನದಲ್ಲಿ ಸೋತಾಗ ಧೃತಿಗೆಡೆದೆ ಹೇಗೆ ಮುಂದುವರೆಯಬೇಕು, ಬಿದ್ದ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಅಂತ 'ಸಂಜು' ಸಿನಿಮಾದಲ್ಲಿ ತುಂಬಾ ಚೆನ್ನಾಗಿ ತೋರಿಸಲಾಗಿದೆ. ಈ ಮಾತಿಗೆ ಮತ್ತು ಸಂದರ್ಭಕ್ಕೆ ತಕ್ಕಂತೆ ಈ ಚಿತ್ರದಲ್ಲಿ ಒಂದು ಹಾಡೂ ಇದೆ.

ಆಗಲೇ ಹೇಳಿದಂತೆ ಈ ಸಿನಿಮಾದ ನಿಜವಾದ ನಾಯಕ ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಮತ್ತು ಸಂಜಯ್ ದತ್ ಸ್ನೇಹಿತ ತ್ರಿಪಾಠಿಯ ಪಾತ್ರ ಮಾಡಿರುವ ವಿಕ್ಕಿ ಕೌಶಲ್. ಸಿನಿಮಾದಲ್ಲಿ ಎಲ್ಲೆಲ್ಲಿ ಸಂಜಯ್ ದತ್ ಮತ್ತು ಮತ್ತು ತ್ರಿಪಾಠಿಯ ದೃಶ್ಯಗಳು ಬರುತ್ತವೆಯೋ ಅಲ್ಲೆಲ್ಲ ನೀವು ನಗುತ್ತೀರಿ, ಎಂಜಾಯ್ ಮಾಡುತ್ತೀರಿ ಮತ್ತು ನಿಮಗೇ ಗೊತ್ತಿಲ್ಲದಂತೆ ನಿಮ್ಮ ಸ್ನೇಹಿತನನ್ನು ನೆನೆಸಿಕೊಂಡು ಕಣ್ಣೀರಿಡುತ್ತೀರಿ. ಇಂಥ ಒಬ್ಬ ಒಳ್ಳೆ ಗೆಳೆಯ ಹೇಗೆ ದೂರಾಗಬಲ್ಲ ಅನ್ನೋದರ ಜೊತೆಗೆ ಕೆಟ್ಟ ಸ್ನೇಹಿತ ಇದ್ದರೆ ಜೀವನ ಹೇಗೆ ಹಾಳಾಗುತ್ತೆ ಅನ್ನೋದನ್ನೂ 'ಸಂಜು' ತೋರಿಸಿದ್ದಾನೆ.

ನಮ್ಮ ನಮ್ಮ ವೃತ್ತಿಗಳಲ್ಲಿ ಬ್ಯುಸಿಯಾಗಿಬಿಟ್ಟರೆ, ಮಕ್ಕಳ ಕಡೆ ಲಕ್ಷ್ಯ ವಹಿಸದಿದ್ದರೆ, ಅವರು ಹೇಗೆ ದಾರಿ ತಪ್ಪುತ್ತಾರೆ. ದುಶ್ಚಟಗಳಿಗೆ ಹೇಗೆ ದಾಸರಾಗುತ್ತಾರೆ ಎನ್ನುವುದರಿಂದ ಹಿಡಿದು  ಪೋಷಕರು ಅವರನ್ನ ಹೇಗೆ ತಿದ್ದಬಹುದು ಅನ್ನೋದನ್ನ ಸಹ ಈ ಸಿನಿಮಾದಲ್ಲಿ ಸುಂದರವಾಗಿ ಹಾಗೂ ಭಾವನಾತ್ಮಮಕವಾಗಿ ಚಿತ್ರಿಸಲಾಗಿದೆ.

ಇಡೀ ಜಗತ್ತು ತಮ್ಮ ಕಣ್ಣ ಮುಂದೆ ಪರದೆಗಳನ್ನ ತಂದಿಟ್ಟುಕೊಂಡಿದೆ. ಪರದೆಗಳಲ್ಲಿ ಕಾಣೋದೆ ಸತ್ಯ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಏನೇ ಬಂದರೂ ಅದೇ ಫೈನಲ್ ಅಂದುಕೊಂಡಿದ್ದಾರೆ. ಏಷ್ಟೇ ತಿಪ್ಪರಲಾಗ ಹಾಕಿ ಬಚ್ಚಿಟ್ಟರೂ, ಏನೆ ಮಾರ್ಪಾಟು ಮಾಡೋಕೆ ಪ್ರಯತ್ನಪಟ್ಟರೂ ಕಡೆಗೂ ಸತ್ಯ ಒಂದಲ್ಲ ಒಂದು ದಿನ ಗೊತ್ತಾಗಲೇಬೇಕು ಅನ್ನೊ ಸತ್ಯವನ್ನ ನಿರ್ದೇಶಕರು ಒತ್ತಿ ಹೇಳಿದ್ದಾರೆ.

ಒಟ್ಟಾರೆ ಈ ಚಿತ್ರವನ್ನ ಯಾರೂ ಮಿಸ್ ಮಾಡದೆ ನೋಡಿ ಬಿಡಿ. ತೀರಾ ಚಿಕ್ಕ ಮಕ್ಕಳಿದ್ದರೆ ಕೆಲವು ದೃಶ್ಯ, ಹಾಸ್ಯ ಮತ್ತು ಅದರ ಅರ್ಥ ಬಿಡಿಸಿ ಹೇಳೋದು ಕಷ್ಟ ಅನ್ನೋದು ಬಿಟ್ಟರೆ, ಈ ಸಿನಿಮಾ ನೋಡೋಕೆ ಭಾಷೆ ಅರ್ಥವಾಗಬೇಕಿಲ್ಲ. ನಮ್ಮ ಎಡ ಎದೆಯಲ್ಲಿ ಭಾವನೆಗಳಿಗೆ ಸ್ಪಂದಿಸೊ ಹೃದಯವಿದ್ದರೆ ಸಾಕು.

 

 

 

 

 

 

 

 

 

 

 

 

 

 
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...