HOME » NEWS » Entertainment » SANDALWOOD VIRUPAAKSHA TELEFILM RECEIVED DADASAHEB PHALKE FILM FESTIVAL HONORABLE JURY AWARD HTV AE

ಕನ್ನಡದ ವಿರೂಪಾಕ್ಷನಿಗೆ ಸಿಕ್ತು ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ 

ಕನ್ನಡದ ವಿರೂಪಾಕ್ಷ  ಟೆಲಿಫಿಲ್ಮ್ ಪ್ರತಿಷ್ಟಿತ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಪಡೆದಿದೆ. 42 ನಿಮಿಷಗಳ ಟೆಲಿಫಿಲ್ಮ್​ಗಾಗಿ ಬೆಂಗಳೂರಿನ ಸುತ್ತಮುತ್ತ 15-17 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು.

news18-kannada
Updated:June 9, 2021, 10:12 AM IST
ಕನ್ನಡದ ವಿರೂಪಾಕ್ಷನಿಗೆ ಸಿಕ್ತು ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ 
ವಿರೂಪಾಕ್ಷ ಟೆಲಿಫಿಲ್ಮ್​ನ ಸಿನಿಮಾಟೋಗರಾಫರ್​ ಕಾರ್ತಿಕ್​ ಮಳ್ಳೂರ್ ಹಾಗೂ ನಿರ್ದೇಶಕ ರಂಗನಾಥ್​
  • Share this:
ಲಾಕ್‌ಡೌನ್ ನಡುವೆಯೂ ಆಗೊಮ್ಮೆ ಈಗೊಮ್ಮೆ ಸಿನಿಮಾಗಳು ಸದ್ದು ಮಾಡುತ್ತಲೇ ಇವೆ. ಸಿನಿಮಾಗಳು ಮಾತ್ರವಲ್ಲ ಕಿರುಚಿತ್ರಗಳು, ಆಲ್ಬಂ ಸಾಂಗ್‌ಗಳೂ ಬಿಡುಗಡೆ ಆಗುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ವಿರೂಪಾಕ್ಷ. ಹೌದು, ಸದ್ಯ ಕನ್ನಡದ ಈ ಟೆಲಿಫಿಲ್ಮ್ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು, ವಿರೂಪಾಕ್ಷ  ಟೆಲಿಫಿಲ್ಮ್ ಪ್ರತಿಷ್ಟಿತ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಪಡೆದಿದೆ. ವಿರೂಪಾಕ್ಷ... ಅಜ್ಜಿ ಮತ್ತು ಮೊಮ್ಮಗನ ಕಥೆ. ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಹುಡುಗನನ್ನು ಆತನ ಅಜ್ಜಿಯೇ ಸಾಕಿ ಸಲಹುತ್ತಾರೆ. ಆದರೆ ಆತ ವಿಶೇಷ ಚೇತನ ಬಾಲಕ ಅನ್ನೋ ಒಂದೇ ಒಂದು ನೋವು ಅಜ್ಜಿಯನ್ನು ಕಾಡುತ್ತಿರುತ್ತದೆ. ಆತನಿಗೆ ಹೇಗಾದರೂ ಮಾಡಿ ಕಣ್ಣು ಕಾಣಿಸುವಂತೆ ಮಾಡಬೇಕು ಅನ್ನೋ ಛಲ ಆ ಅಜ್ಜಿಯದು. ಕೊನೆಗೆ ಆ ಬಾಲಕನಿಗೆ ಕಣ್ಣು ಕಾಣುವಂತಾಗುತ್ತಾ? ಎಂಬುದೇ ವಿರೂಪಾಕ್ಷ ಎಂಬ ಈ ಟೆಲಿಫಿಲ್ಮ್​ನ ಕಥೆ. ರಂಗನಾಥ್ ನಿರ್ದೇಶನದ ಈ ಟೆಲಿಫಿಲ್ಮ್ನಲ್ಲಿ ಹಿರಿಯ ನಟಿ, ಪ್ರಸಿದ್ಧ ಗಾಯಕಿ ಬಿ. ಜಯಶ್ರೀ ಅಜ್ಜಿಯ ಪಾತ್ರದಲ್ಲಿ ನಟಿಸಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ತರಬೇತಿ ಪಡೆದಿರುವ ಕುಶಾಲ್ ಮೊಮ್ಮಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿರೂಪಾಕ್ಷ ಟೆಲಿಫಿಲ್ಮ್​ಗೆ ರಂಗನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಕೋಮಾ ಸಿನಿಮಾದಲ್ಲಿ ಕೆಲಸ ಮಾಡಿದ್ದ ರಂಗನಾಥ್, ಬಳಿಕ ನಿರ್ದೇಶಕ ಸಿಂಪಲ್ ಸುನಿ ತಂಡದಲ್ಲೂ ಅನುಭವ ಪಡೆದಿದ್ದಾರೆ. ದೀಕ್ಷಾ ಎಂಬ ಮೂರು ನಿಮಿಷಗಳ ಕಿರುಚಿತ್ರ ಸೇರಿದಂತೆ ಇನ್ನೂ ಕೆಲ ಶಾರ್ಟ್ ಫಿಲ್ಮ್​​ಗಳನ್ನು ಮಾಡಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ನಾಯಕನಾಗಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲೂ ಸಹ ನಿರ್ದೇಶಕನಾಗಿ ದುಡಿದು ಗುರುತಿಸಿಕೊಂಡಿದ್ದಾರೆ. ಸದ್ಯ ಅವರ ಸಹ ನಿರ್ದೇಶನವಿರುವ ಸಕುಟುಂಬ ಸಮೇತ ಎಂಬ ಚಿತ್ರ ರಿಲೀಸ್‌ಗೆ ರೆಡಿಯಿದೆ.

Virupaaksha Telefilm, dadasaheb Phalke, sandalwood, ವಿರೂಪಾಕ್ಷ ಟೆಲಿಫಿಲ್ಮ್​, ದಾದಾ ಸಾಹೇಬ್​ ಫಾಲ್ಮೆ ಪ್ರಶಸ್ತಿ, ಕನ್ನಡದ ವಿರೂಪಾಕ್ಷ ಟೆಲಿಫಿಲ್ಮ್​, Sandalwood Virupaaksha Telefilm received dadasaheb Phalke film festival honorable jury award ae
ವಿರೂಪಾಕ್ಷ ಟೆಲಿಫಿಲ್ಮ್​ನ ಪೋಸ್ಟರ್


30ನಿಮಿಷಗಳ ಕಾಲ ಕಿರುಚಿತ್ರ ಮಾಡಬೇಕು ಅಂತ ವಿರೂಪಾಕ್ಷ ಚಿತ್ರೀಕರಣ ಪ್ರಾರಂಭಿಸಿದೆವು. ಆದರೆ 42 ನಿಮಿಷಗಳ ಟೆಲಿಫಿಲ್ಮ್ ಆಯಿತು. ಎಲ್ಲೂ ಎಡಿಟ್ ಮಾಡಲು ಮನಸ್ಸು ಬರಲಿಲ್ಲ, ಅಷ್ಟು ಸುಂದರವಾಗಿ ಮೂಡಿಬಂದಿದೆ. ಹೆಸರಘಟ್ಟ, ಮಾರತ್ತ‌ಹಳ್ಳಿಯ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಹಾಗೂ ಸುತ್ತಮುತ್ತ, ಸುಮಾರು 15 ರಿಂದ 17 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ' ಎಂದು ವಿರೂಪಾಕ್ಷ ಟೆಲಿಫಿಲ್ಮ್ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತಾರೆ ರಂಗನಾಥ್.

ಇದನ್ನೂ ಓದಿ: Kareena Kapoor: ಸೀತೆಯ ಪಾತ್ರದಲ್ಲಿ ನಟಿಸೋಕೆ 12 ಕೋಟಿ ಕೇಳಿದ್ರಂತೆ ಕರೀನಾ ಕಪೂರ್​..!

ಇನ್ನು ವಿರೂಪಾಕ್ಷ ಟೆಲಿಫಿಲ್ಮ್ ಗೆ ಕ್ಯಾಮರಾ ಕಣ್ಣಾಗಿರುವುದು ಕಾರ್ತಿಕ್ ಮಳ್ಳೂರ್. 'ದೃಷ್ಟಿಹೀನತೆ ಕುರಿತಾದ ಕಥೆಯಾದ ಕಾರಣ ತಾಂತ್ರಿಕವಾಗಿ ಹಲವು ಸವಾಲುಗಳಿದ್ದವು. ಆದರೆ ಸಿನಿಮಾ ಔಟ್ ಪುಟ್ ನೋಡಿದಾಗ ಖುಷಿಯಾಯಿತು' ಎನ್ನುತ್ತಾರೆ ಕಾರ್ತಿಕ್. ಚಿರವಾದ ನೆನಪು, ಕೋಮಾ, *123# ಮತ್ತು ಧಂಡ್ ಸಿನಿಮಾಗಳಲ್ಲಿ ಕ್ಯಾಮರಾ ಕೈಚಳಕ ತೋರಿಸಿದ್ದ ಕಾರ್ತಿಕ್, ಹಲವು ಕಿರುಚಿತ್ರಗಳಲ್ಲೂ ಕೆಲಸ ಮಾಡಿ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಸದ್ಯ ವೈ ಎಂಬ ಸಿನಿಮಾ ಮೂಲಕ ಬಾಲಿವುಡ್‌ಗೂ ಡೆಬ್ಯೂ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಉಳಿದಂತೆ ವಿರೂಪಾಕ್ಷ ಟೆಲಿಫಿಲ್ಮ್​ ಅನ್ನು ಅರುಣ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಜಾನಪದ ಶೈಲಿಯ ಹಾಗೂ ಮೆಲೋಡಿ ಹೀಗೆ ಎರಡು ಹಾಡುಗಳಿದ್ದು, ಅನನ್ಯಾ ಭಟ್ ಮತ್ತು ಗಣೇಶ್ ತಲಾ ಒಂದೊಂದು ಹಾಡಿಗೆ ಕಂಠದಾನ ಮಾಡಿದ್ದಾರೆ. ಅವನೇ ಶ್ರೀಮನ್ನಾರಾಯಣ, ಕವಲುದಾರಿ, ಸಲಗ ಚಿತ್ರಗಳ ಖ್ಯಾತಿಯ ನಾಗಾರ್ಜುನ ಶರ್ಮಾ ಎರಡೂ ಹಾಡುಗಳಿಗೂ ಸಾಹಿತ್ಯ ಬರೆದಿದ್ದಾರೆ. ಮಂಗಳವಾರ ರಜಾದಿನ, ಸಂಕಷ್ಟಹರ ಗಣಪತಿ ಖ್ಯಾತಿಯ ರಿತ್ವಿಕ್ ಮುರಳೀಧರ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು, ನವಪ್ರತಿಭೆ ವಿಜಯ್ ರಾಜ್ ಸಂಗೀತ ನೀಡಿದ್ದಾರೆ.ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕಂಚಿನ ಕಂಠದ ಗಾಯಕಿ-ನಟಿ ಬಿ ಜಯಶ್ರೀ

11ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ಹಾನರಬಲ್ ಜ್ಯೂರಿ ಅವಾರ್ಡ್ ಪಡೆದಿರುವ ವಿರೂಪಾಕ್ಷ ಚಿತ್ರವನ್ನು ಸದ್ಯ ಲಾಕ್‌ಡೌನ್ ಬಳಿಕ ಆನ್‌ಲೈನ್‌ನಲ್ಲಿ ಅಥವಾ ಓಟಿಟಿಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ ಚಿತ್ರತಂಡ. ಒಟ್ಟಾರೆ ಲಾಕ್‌ಡೌನ್ ನಡುವೆಯೂ ಕನ್ನಡದ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ವಿಶೇಷವೇ ಸರಿ.
Published by: Anitha E
First published: June 9, 2021, 10:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories