ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಸ್ಯಾಂಡಲ್​ವುಡ್​ ಸ್ಟಾರ್ಸ್​

news18
Updated:August 20, 2018, 4:18 PM IST
ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಸ್ಯಾಂಡಲ್​ವುಡ್​ ಸ್ಟಾರ್ಸ್​
news18
Updated: August 20, 2018, 4:18 PM IST
-ನ್ಯೂಸ್ 18 ಕನ್ನಡ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಅತಿ ವೃಷ್ಟಿಯಿಂದ ನಲುಗಿ ಹೋಗಿರುವ ಕೊಡಗಿನವರಿಗೆ ನೆರವಾಗಲು ಸ್ಯಾಂಡಲ್​ವುಡ್ ಸ್ಟಾರ್ ನಟ-ನಟಿಯರು ಸಹಾಯ ಹಸ್ತ ಚಾಚಿದ್ದಾರೆ. ಜಿಲ್ಲೆಯ ಸಂತ್ರಸ್ತರಿಗೆ ಸಹಾಯಧನ ನೀಡುವುದಾಗಿ ತಿಳಿಸಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ 10 ಲಕ್ಷದ ಚೆಕ್​ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದಾರೆ. ಅಲ್ಲದೆ ಈ ಹಿಂದೆ ಶಿವಣ್ಣ ನೆರೆಪೀಡಿತ ಪ್ರದೇಶಗಳ ನೆರವಿಗಾಗಿ ಸಹಾಯ ಹಸ್ತ ಚಾಚುವಂತೆ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು. ಇದಕ್ಕೆ ಹ್ಯಾಟ್ರಿಕ್ ಹೀರೋ ಫ್ಯಾನ್ಸ್ ಸ್ಪಂದಿಸಿ ಬಟ್ಟೆ, ಆಹಾರ ಸಾಮಗ್ರಿಗಳನ್ನು ಕಳುಹಿಸಿದ್ದರು.
ಬಹುಭಾಷಾ ನಟ ಪ್ರಕಾಶ್ ರೈ ಕೂಡ ಕೊಡಗಿನ ಸಂತ್ರಸ್ತರಿಗೆ ಕಂಬನಿ ಮಿಡಿದು 5 ಲಕ್ಷ ರೂ ಪರಿಹಾರ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ 'ಜಸ್ಟ್​ ಆಸ್ಕಿಂಗ್ ಫೌಂಡೇಷನ್' ಮತ್ತು 'ಪ್ರಕಾಶ್ ರಾಜ್ ಫೌಂಡೇಷನ್' ಮೂಲಕ ಕೊಡಗಿನ ಏಳಿಗೆಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.


Loading...

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಕೂಡ ಸಂತ್ರಸ್ತ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದರು. ಸ್ಯಾಂಡಲ್​ವುಡ್​ ನಟ ಭುವನ್ ಬೋಪಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ತಮ್ಮ ಜಿಲ್ಲೆಯ ಜನರ ನೆರವಿನಲ್ಲಿ ತೊಡಗಿಸಿಕೊಂಡಿದ್ದು, ಸಂತ್ರಸ್ತರ ಕೇಂದ್ರಗಳಿಗೆ ತೆರಳಿ ಜನರಲ್ಲಿ ದೈರ್ಯ ತುಂಬುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ನವರಸ ನಾಯಕ ಜಗ್ಗೇಶ್ ಮತ್ತು ಪತ್ನಿ ಪರಿಮಳ ಅವರು ನಿತ್ಯ ಉಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಕೊಡಗಿಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋ ಮಾರ್ಗ ಫೌಂಡೇಷನ್ ಮೂಲಕ ಕೊಡಗಿನ ಜನರಿಗೆ ಬೇಕಾಗಿರುವ ಅವಶ್ಯಕ ವಸ್ತುಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಡಗಿನ ನೆರವಿಗೆ ಮುಂದಾಗುವಂತೆ ಅಭಿಮಾನಿಗಳಿಗೆ ಟ್ವಿಟ್ಟರ್​ನಲ್ಲಿ ಕರೆ ನೀಡಿದ್ದರು. ಅಲ್ಲದೆ ನೆರವಿನ ಹಸ್ತ ಚಾಚಿದ್ದ ಅಭಿಮಾನಿಗಳಿಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದವನ್ನು ತಿಳಿಸಿದ್ದಾರೆ.



ಕಿಚ್ಚ ಸುದೀಪ್ ಕೂಡ ಮಂಜಿನ ನಗರಿಯ ಜನರಿಗೆ ನೆರವಾಗುವಂತೆ ತಿಳಿಸಿದ್ದರು. ಇದರಂತೆ ಕಿಚ್ಚ ಫ್ಯಾನ್ಸ್​ ಕೇರಳ-ಕೊಡಗಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಟ್ಟಿದ್ದರು.



ನಟಿ ಸಂಯುಕ್ತ ಹೊರನಾಡು ಸಹ ಸಂತ್ರಸ್ತರಿಗೆ ಬೇಕಾಗಿರುವ ವಸ್ತುಗಳನ್ನು ಕಳುಹಿಸಿ ಸಹಾಯ ಮಾಡಿದ್ದರು. ನಟ ಆ ದಿನಗಳು ಚೇತನ್ ನೆರೆಪೀಡಿತ ಪ್ರದೇಶಗಳ ಜನರಿಗಾಗಿ ನಿಧಿ ಮತ್ತು ವಸ್ತುಗಳನ್ನು ಸಂಗ್ರಹಿಸಿ ಮಾನವೀಯತೆ ಮೆರೆದಿದ್ದರು.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಕೊಡಗಿನ ಜನರ ನೆರವಿಗೆ ಧಾವಿಸಿದ್ದು, ಎಲ್ಲರೂ ಸಹಾಯಹಸ್ತ ಚಾಚುವಂತೆ ಮನವಿ ಮಾಡಿ ಕೊಂಡಿದ್ದಾರೆ.


ಈಗಾಗಲೇ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ಅಗತ್ಯವಾದ ಆಹಾರ ಸಾಮಗ್ರಿಗಳು ತಲುಪಿದೆ ಎಂದು ತಿಳಿಸಿರುವ ನಟ ಉಪೇಂದ್ರ ಮುಂದಿನ ಜವಾಬ್ದಾರಿಯನ್ನು ಸರ್ಕಾರ ಸರಿಯಾಗಿ ನಿಭಾಯಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಅಲ್ಲಿನ ಜನರ ಜೀವನ ಕಟ್ಟಲು ನೆರವಾಗುವುದಾಗಿ ಉಪ್ಪಿ ತಿಳಿಸಿದ್ದಾರೆ.

ಪರಿಹಾರವೆಂದರೆ ಆಹಾರ ಕಳುಹಿಸುವುದು ಮಾತ್ರವಲ್ಲ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ತಿಳಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಹೊಸ ಜೀವನ ಒದಗಿಸುವುದು ಮತ್ತು ಕೊಡಗನ್ನು ಮತ್ತೆ ಕಟ್ಟುವ ಕೆಲಸ ನಮ್ಮಿಂದಾಗ ಬೇಕಿದೆ ಎಂದು ರವಿಚಂದ್ರನ್ ಹೇಳಿದ್ದಾರೆ.

ಒಟ್ಟಾರೆ ಸ್ಯಾಂಡಲ್​ವುಡ್​ ನಟ-ನಟಿಯರಲ್ಲದೇ ರಾಜ್ಯದ ಮೂಲೆ ಮೂಲೆಗಳಿಂದ ಕೊಡಗಿನ ಜನರಿಗೆ  ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ