ಮತ್ತೆ ಶುರುವಾಯ್ತು ಸುದೀಪ್​ 'ಫ್ಯಾಂಟಮ್' ಸಿನಿಮಾ ಶೂಟಿಂಗ್; ಹೈದರಾಬಾದ್​ ತಲುಪಿದ 250 ಜನರ ತಂಡ! 

‘ಫ್ಯಾಂಟಮ್’ ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ. ಈಗಾಗಲೇ ಕಿಚ್ಚನ ಫಸ್ಟ್ ಲುಕ್ ನೋಡಿಯೇ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಬಾದ್ಶಾ ಕೂಡ ಪೈಲ್ವಾನ್ನಂತೆ ಬಾಡಿ ಬಿಲ್ಡ್ ಮಾಡಿಕೊಂಡು ಮತ್ತಷ್ಟು ರಾ ಆಗಿದ್ದಾರೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವನ್ನು ಜ್ಯಾಕ್ ಮಂಜು ನಿರ್ಮಿಸುತ್ತಿದ್ದಾರೆ.

ಸುದೀಪ್​ ಹಾಗೂ ಚಿತ್ರತಂಡ

ಸುದೀಪ್​ ಹಾಗೂ ಚಿತ್ರತಂಡ

  • Share this:
ಕೊರೋನಾ ಅಟ್ಟಹಾಸ ಹಾಗೂ ಲಾಕ್​ಡೌನ್ ಎಫೆಕ್ಟ್​ನಿಂದಾಗಿ ಭಾರತದಾದ್ಯಂತ ಎಲ್ಲ ಸಿನಿಮಾರಂಗಗಳೂ ಸ್ಥಗಿತಗೊಂಡಿದ್ದವು. ಸಿನಿಮಾ ಪ್ರದರ್ಶನವಿರಲಿ, ಶೂಟಿಂಗ್, ಡಬ್ಬಿಂಗ್, ಹೀಗೆ ಎಲ್ಲ ಕೆಲಸಗಳೂ ಬಂದ್ ಆಗಿದ್ದವು. ಸದ್ಯ ಒಂದೊಂದೇ ಕ್ಷೇತ್ರಕ್ಕೆ ಲಾಕ್​ಡೌನ್​ನಿಂದ ರಿಲೀಫ್ ನೀಡುತ್ತಾ ಬಂದ ಸರ್ಕಾರ, ಕೆಲ ದಿನಗಳ ಹಿಂದಷ್ಟೇ ಅರ್ಧಕ್ಕೇ ಸ್ಥಗಿತಗೊಂಡಿರುವ ಸಿನಿಮಾಗಳ ಶೂಟಿಂಗ್​ಗೆ ಅನುಮತಿ ನೀಡಿತ್ತು. ಜತೆಗೆ ಪ್ರೀಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್​ಗಳಿಗೂ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ ಅದೆಲ್ಲದಕ್ಕೂ ಮಾರ್ಗಸೂಚಿಗಳನ್ನು ಪಾಲಿಸಬೇಕಿತ್ತು.

ಸರ್ಕಾರದ ಕಂಡೀಷನ್​ಗಳಿಗೆ ಒಪ್ಪಿ ಕೆಲ ಸಿನಿಮಾಗಳ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಆದರೆ ದೊಡ್ಡ ಸ್ಟಾರ್​ಗಳ, ಬಿಗ್ ಬಜೆಟ್ ಸಿನಿಮಾಗಳು ಮಾತ್ರ ಇನ್ನೂ ಗೊಂದಲದಲ್ಲಿದ್ದವು. ಆದರೆ ಈಗ ಕನ್ನಡದ ಫ್ಯಾಂಟಮ್ ತಂಡ ಆ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ಹೈದರಾಬಾದ್​ಗೆ ಹಾರಿದೆ.ಹೌದು, ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದ ಮೂರು ಮಹಡಿಗಳಲ್ಲಿ ದಟ್ಟ ಕಾಡು, ಝರಿ ಹಾಗೂ ಸಣ್ಣ ಕುಗ್ರಾಮದ ಸೆಟ್​ಗಳನ್ನು ನಿರ್ಮಿಸಲಾಗಿದೆ. ಕಲಾನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಅದ್ಧೂರಿ ಸೆಟ್​​ಗಳನ್ನು ನಿರ್ಮಿಸಿ ನಾಲ್ಕು ತಿಂಗಳೇ ಕಳೆದಿವೆ. ಈಗ ಇಲ್ಲಿ ಮತ್ತೆ  ಶೂಟಿಂಗ್​ ಪ್ರಾರಂಭವಾಗಿದೆ. ವಿಘ್ನೇಶ್ವರನಿಗೆ ಪೂಜೆ ಮಾಡುವ ಮೂಲಕ ಮುಂದೆ ಇನ್ನು ಯಾವ ರೀತಿಯ ವಿಘ್ನಗಳೂ ಬಾರದಿರಲಿ ಎಂದು ಬೇಡುತ್ತಾ ಚಿತ್ರೀಕರಣಕ್ಕೆ ಮರುಚಾಲನೆ ನೀಡಿದೆ ಫ್ಯಾಂಟಮ್ ಚಿತ್ರತಂಡ.

ವಿಶೇಷ ಅಂದರೆ ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದವರು ಬಾದ್ಶಾ ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ನಮ್ಮ ಕನ್ನಡದ ಕಾರ್ಮಿಕರಿಗೆ ಕೆಲಸ ಕೊಡಿ ಎಂದು ಮನವಿ ಮಾಡಿದ್ದರಂತೆ. ಹೀಗಾಗಿಯೇ ಹೈದರಾಬಾದ್​​ಗೆ ಇಲ್ಲಿನಿಂದಲೇ ಲೈಟ್​​ಬಾಯ್, ಸ್ಪಾಟ್​​ಬಾಯ್, ಟೆಕ್ನಿಕಲ್, ಯೂನಿಟ್, ನಿರ್ಮಾಣ ಸಹಾಯಕರು, ಸೆಟ್ ವರ್ಕರ್ಸ್ ಸೇರಿದಂತೆ ಎಲ್ಲ ಕಾರ್ಮಿಕರನ್ನೂ ಕರೆದೊಯ್ದಿದ್ದಾರೆ ಕಿಚ್ಚ. ಬರೋಬ್ಬರಿ 200ರಿಂದ 250 ಮಂದಿ ಕಾರ್ಮಿಕರನ್ನು ಹೈದರಾಬಾದ್​ಗೆ ಕರೆದೊಯ್ಯಲಾಗಿದೆ. ಈ ಮೂಲಕ ಫ್ಯಾಂಟಮ್ ಚಿತ್ರತಂಡ ಹಾಗೂ ಬಾದ್ಶಾ ಕಿಚ್ಚ ಸುದೀಪ್ ಇತರೆ ಎಲ್ಲ ಸ್ಯಾಂಡಲ್​ವುಡ್ ಟೀಮ್​ಗಳಿಗೂ ಮಾದರಿಯಾಗಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಮತ್ತೆ ಸಿನಿಮಾ ಶೂಟಿಂಗ್ ಪ್ರಾರಂಭಿಸಿರುವುದರ ಜತೆಗೆ ಕನ್ನಡದ ಕಾರ್ಮಿಕರಿಗೇ ಕೆಲಸ ನೀಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
Published by:Rajesh Duggumane
First published: