ಮತ್ತೆ ಶುರುವಾಯ್ತು ಥಿಯೇಟರ್ ಸಮಸ್ಯೆ: ಪ್ರಮುಖ ಚಿತ್ರಮಂದಿರಕ್ಕಾಗಿ Salaga-Real Estate ನಡುವೆ ಹಗ್ಗಜಗ್ಗಾಟ

ಕಾರಣಾಂತರಗಳಿಂದ ಸಂತೋಷ್, ನರ್ತಕಿ ಹಾಗೂ ಸಪ್ನಾ ಥಿಯೇಟರ್​ಗಳೂ ಕಾರಣಾಂತರಗಳಿಂದ ಬಾಗಿಲು ಮುಚ್ಚಿವೆ. ಹೀಗಾಗಿಯೇ ಅಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾಗಳು ಕೆಂಪೇಗೌಡ ರಸ್ತೆಯ ಬೇರೆ ಬೇರೆ ಚಿತ್ರಮಂದಿರಗಳಿಗೆ ಶಿಫ್ಟ್ ಆಗಿವೆ. ಈಗ ಈ ಬೆಳವಣಿಗೆ ಚಿತ್ರತಂಡಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ಸಲಗ ಹಾಗೂ ರಿಯಲ್ ಎಸ್ಟೇಟ್​ ಸಿನಿಮಾದ ನಡುವೆ ಚಿತ್ರಮಂದಿರಕ್ಕಾಗಿ ನಡೆಯುತ್ತಿದೆ ಜಟಾಪಟಿ

ಸಲಗ ಹಾಗೂ ರಿಯಲ್ ಎಸ್ಟೇಟ್​ ಸಿನಿಮಾದ ನಡುವೆ ಚಿತ್ರಮಂದಿರಕ್ಕಾಗಿ ನಡೆಯುತ್ತಿದೆ ಜಟಾಪಟಿ

  • Share this:
ಸ್ಯಾಂಡಲ್‍ವುಡ್ ಸಿನಿಮಾಗಳಿಗೆ ದಶಕಗಳಿಂದ ಕೆಜಿ ರಸ್ತೆಯ ಚಿತ್ರಮಂದಿರಗಳೇ ಮುಖ್ಯ ಚಿತ್ರಮಂದಿರಗಳು (Main Theaters). ಅದೆಷ್ಟೇ ಮಲ್ಟಿಪ್ಲೆಕ್ಸ್​ಗಳು ಬರಲಿ, ಥಿಯೇಟರ್​ಗಳು ಎದ್ದೇಳಲಿ, ಆದರೆ ಕೆಂಪೇಗೌಡ ರಸ್ತೆಯ ಥಿಯೇಟರ್​ಗಳಲ್ಲಿ ರಿಲೀಸ್ ಆಗದಿದ್ದರೆ, ಆ ಸಿನಿಮಾ ತೆರೆಗೆ ಬಂದಿಲ್ಲ ಎನ್ನುವಷ್ಟು ನಂಬಿಕೆ. ಹೀಗಾಗಿಯೇ ಪ್ರತಿ ವಾರ ಕೆಜಿ ರಸ್ತೆಯ ಒಂದಲ್ಲಾ ಒಂದು ಥಿಯೇಟರ್​ನಲ್ಲಿ ಹೊಸ ಸಿನಿಮಾ ರಿಲೀಸ್ ಆಗಿ, ಸಂಭ್ರಮ ಮನೆ ಮಾಡಿರುತ್ತೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಜಿ ರಸ್ತೆಯ ಕೆಲ ಪ್ರಮುಖ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. ಗೀತಾ, ಹಿಮಾಲಯ, ಅಲಂಕಾರ್, ಕಲ್ಪನಾ, ಸಾಗರ್, ಮೆಜೆಸ್ಟಿಕ್ ಥಿಯೇಟರ್​ಗಳು ಬಂದ್ ಆಗಿವೆ. ಹೀಗಾಗಿಯೇ ಉಳಿದ ಥಿಯೇಟರ್​ಗಳಿಗೆ ಬೇಡಿಕೆ ಹೆಚ್ಚು.

ಇದರ ನಡುವೆಯೇ ಕೊರೋನಾ ಎರಡನೇ ಅಲೆಯ (Corona Second Wave) ಲಾಕ್‍ಡೌನ್ ಅನ್‍ಲಾಕ್ ಆಗಿ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅನುಮತಿ ಸಿಕ್ಕ ಬೆನ್ನಲ್ಲೇ ಕಾರಣಾಂತರಗಳಿಂದ ಸಂತೋಷ್, ನರ್ತಕಿ ಹಾಗೂ ಸಪ್ನಾ ಥಿಯೇಟರ್​ಗಳೂ ಕಾರಣಾಂತರಗಳಿಂದ ಬಾಗಿಲು ಮುಚ್ಚಿವೆ. ಹೀಗಾಗಿಯೇ ಅಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾಗಳು ಕೆಂಪೇಗೌಡ ರಸ್ತೆಯ ಬೇರೆ ಬೇರೆ ಚಿತ್ರಮಂದಿರಗಳಿಗೆ ಶಿಫ್ಟ್ ಆಗಿವೆ. ಈಗ ಈ ಬೆಳವಣಿಗೆ ಚಿತ್ರತಂಡಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

Karnataka Unlock 4 0 theaters and Colleges Open from tomorrow
ಸಾಂದರ್ಭಿಕ ಚಿತ್ರ


ಹೌದು, ನಟ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಡಾಲಿ ಧನಜಯ, ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಲಗ (Salaga Movie), ತ್ರಿವೇಣಿ ಥಿಯೇಟರ್​ನಲ್ಲಿ ರಿಲೀಸ್ ಆಗಿದೆ. ಜತೆಗೆ ನಿನ್ನ ಸನಿಹಕೆ, ಕೋಟಿಗೊಬ್ಬ 3 ಸೇರಿದಂತೆ ಇನ್ನೂ ಕೆಲ ಚಿತ್ರಗಳ ನಡುವೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಇದೇ ಚಿತ್ರಮಂದಿರಲ್ಲಿ ಇದೇ ಶುಭ ಶುಕ್ರವಾರದಂದು ಅರ್ಥಾತ್ ಅಕ್ಟೋಬರ್ 22ರಂದು ಮತ್ತೊಂದು ಸಿನಿಮಾ ರಿಯಲ್ ಎಸ್ಟೇಟ್ (Real Estate Movie) ರಿಲೀಸ್ ಆಗಬೇಕಿತ್ತು, ಸದ್ಯ ಈ ಎರಡೂ ಚಿತ್ರತಂಡಗಳ ನಡುವೆ ನೀ ಕೊಡೆ, ನಾ ಬಿಡೆ ಎಂಬಂತೆ ಜಟಾಪಟಿಗೆ ವೇದಿಕೆಯಾಗಿದೆ.

ರಿಯಲ್ ಎಸ್ಟೇಟ್, ಆರ್. ಗುರುರಾಜ ನಾಯಕನಾಗಿ ಡೆಬ್ಯೂ ಮಾಡಿರುವ ಸಿನಿಮಾ. ಅವರಿಗೆ ಸುಷ್ಮ ರಾಜ್ ನಾಯಕಿಯಾಗಿದ್ದು, ಹಾಸ್ಯನಟ ರಜಿನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ನಾಯಕ ಗುರುರಾಜ್ ತಂದೆ ಎನ್. ರಾಮಕೃಷ್ಣಪ್ಪ ಅವರೇ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಈ ಸಿನಿಮಾ ನಿರ್ಮಿಸಿದ್ದಾರೆ. ಹಾಗೇ ಚಿತ್ರದಲ್ಲಿ ನಾಯಕನ ತಂದೆಯಾಗಿ ಆರ್‍ಕೆ ಎಂಬ ಪಾತ್ರದಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ: Salaga ಸಿನಿಮಾ ಪ್ರದರ್ಶನ ನಿಲ್ಲಿಸಲು ಆಗ್ರಹ: ಸೆನ್ಸಾರ್​ ಮಂಡಳಿ ವಿರುದ್ಧ ಪ್ರತಿಭಟನೆ

ರಿಯಲ್ ಎಸ್ಟೇಟ್ ಚಿತ್ರವನ್ನು ಇದೇ ಶುಕ್ರವಾರ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡ, ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ತ್ರಿವೇಣಿಯಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಥಿಯೇಟರ್ ಮಾಲೀಕರ ಜತೆ ಒಪ್ಪಂದ ಮಾಡಿಕೊಂಡಿದ್ದು, ತ್ರಿವೇಣಿ ಥಿಯೇಟರ್​ನಲ್ಲಿ ರಿಲೀಸ್ ಮಾಡುತ್ತಿರುವುದಾಗಿ ಪ್ರಚಾರ ಮಾಡುತ್ತಿದ್ದು, ಜಾಹೀರಾತುಗಳನ್ನೂ ನೀಡಿದೆ.

ಆದರೆ, ಸಲಗ ಚಿತ್ರತಂಡ ತ್ರಿವೇಣಿ ಥಿಯೇಟರ್​ನಲ್ಲಿ ನಮ್ಮ ಸಿನಿಮಾ ರಿಲೀಸ್ ಮಾಡಲು ಬಿಡುತ್ತಿಲ್ಲ ಎನ್ನುತ್ತಿದ್ದಾರೆ ನಿರ್ಮಾಪಕ ಎನ್. ರಾಮಕೃಷ್ಣಪ್ಪ. `ಸಲಗ ಸಿನಿಮಾ ಒಂದು ವಾರದ ಹಿಂದಷ್ಟೇ ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಒಂದು ವಾರದಲ್ಲಿಯೇ ಮತ್ತೊಂದು ಥಿಯೇಟರ್​ಗೆ ಶಿಫ್ಟ್ ಮಾಡಿದರೆ ನಮಗೆ ಸಮಸ್ಯೆ ಆಗಬಹುದು. ಹೀಗಾಗಿ ನೀವು ಬೇರೆ ಥಿಯೇಟರ್​ನಲ್ಲಿ ರಿಲೀಸ್ ಮಾಡಿ ಅಂತ ಸಲಗ ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಹೇಳಿದರು. ಆದರೆ ನಾನು ಈಗಾಗಲೇ ಎಲ್ಲ ಪ್ರಮೋಷನ್ಸ್ ಮಾಡಿದ್ದು, ಅಲ್ಲೇ ರಿಲೀಸ್‍ಗೆ ಸಿದ್ಧತೆ ಮಾಡುತ್ತಿದ್ದೇನೆ. ಈಗ ಕೊನೆ ಘಳಿಗೆಯಲ್ಲಿ ನಾವು ಹೊಸಬರು ಅಂತ ಈ ರೀತಿ ಸಮಸ್ಯೆ ಮಾಡುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್. ರಾಮಕೃಷ್ಣಪ್ಪ. ಮಾತ್ರವಲ್ಲ ಯಾವುದೇ ಕಾರಣಕ್ಕೂ ನಾನು ತ್ರಿವೇಣಿ ಥಿಯೇಟರ್​ ಅನ್ನು ಬಿಡುವ ಮಾತೇ ಇಲ್ಲ ಎಂದೂ ತಿಳಿಸುತ್ತಾರೆ ಅವರು.

ಇದನ್ನೂ ಓದಿ: ವಿಘ್ನ-ವಿವಾದಗಳ ನಡುವೆಯೇ Kotigobba 3 ಸಿನಿಮಾದ ಮೊದಲ ವಾರಾಂತ್ಯದ ಗಳಿಕೆ ಜೋರಾಗಿದೆ..!

ಹೀಗೆ ಕೆಜಿ ರಸ್ತೆಯ ಒಂದೊಂದೇ ಚಿತ್ರಮಂದಿರ ಬಾಗಿಲು ಹಾಕುತ್ತಾ ಬರುತ್ತಿರುವಂತೆ, ಪ್ರತಿ ವಾರ ರಿಲೀಸ್ ಆಗುವ ಸಿನಿಮಾಗಳಿಗೆ ಸಮಸ್ಯೆ ಎದುರಾಗುತ್ತಿದೆ. ಅದೇನೇ ಇರಲಿ ಎರಡೂ ಚಿತ್ರತಂಡಗಳು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿಕೊಳ್ಳಲಿ. ಹಾಗೂ ಕೊರೋನಾ ಕಂಟಕದಿಂದ ಹೊರಬಂದು ಥಿಯೇಟರ್​ಗೆ ಎಂಟ್ರಿ ಕೊಟ್ಟಿರುವ ಸಲಗ ಹಾಗೂ ಎಂಟ್ರಿ ಕೊಡಲು ರೆಡಿಯಾಗಿರುವ ರಿಯಲ್ ಎಸ್ಟೇಟ್, ಎರಡೂ ಕನ್ನಡ ಸಿನಿಮಾಗಳಿಗೂ ಶುಭವಾಗಲಿ.
Published by:Anitha E
First published: