HOME » NEWS » Entertainment » SANDALWOOD HERO SHIVA RAJKUMAR ADOPTED ELEPHANT FROM MYSURU ZOO RMD

ಗಣೇಶ ಚತುರ್ಥಿಯಂದು ವಿಶೇಷ ಕೆಲಸ ಮಾಡಿದ ಶಿವರಾಜ್​ಕುಮಾರ್​!; ಏನದು? ಇಲ್ಲಿದೆ ಮಾಹಿತಿ

ಹ್ಯಾಟ್ರಿಕ್ ಹೀರೋ, ಸ್ಯಾಂಡಲ್ವುಡ್ ಕಿಂಗ್, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಮಾಸ್ ಲೀಡರ್, ಕನ್ನಡ ಚಿತ್ರರಂಗದ ದೊಡ್ಮನೆಯ ದೊಡ್ಮಗ ಡಾ. ಶಿವರಾಜ್​​ಕುಮಾರ್, ಥೇಟ್ ಅಪ್ಪಾಜಿಯಂತೆಯೇ ಸರಳ ವ್ಯಕ್ತಿ, ಸ್ನೇಹಜೀವಿ, ಅದ್ಭುತ ವ್ಯಕ್ತಿತ್ವ. ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್​ನ ಪ್ರಮುಖರೆಲ್ಲರೂ ಸೇರಿ ನೀವೇ ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ಳಬೇಕು, ನಿಮ್ಮ ನಾಯಕತ್ವದಲ್ಲೇ ನಾವೆಲ್ಲ ಹೆಜ್ಜೆ ಇಡಬೇಕು ಅಂತ ಶಿವಣ್ಣನ ಮನವೊಲಿಸಿದ್ದು, ಈ ಮಾಸ್ ಲೀಡರ್ ಈಗ ಸ್ಯಾಂಡಲ್ವುಡ್​ನ ಲೀಡರ್ ಕೂಡ ಆಗಿದ್ದಾರೆ.

news18-kannada
Updated:August 23, 2020, 8:15 AM IST
ಗಣೇಶ ಚತುರ್ಥಿಯಂದು ವಿಶೇಷ ಕೆಲಸ ಮಾಡಿದ ಶಿವರಾಜ್​ಕುಮಾರ್​!; ಏನದು? ಇಲ್ಲಿದೆ ಮಾಹಿತಿ
ಶಿವರಾಜ್​ಕುಮಾರ್​
  • Share this:
ಶಿವಣ್ಣ ಸದ್ಯ ಭಜರಂಗಿ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅದರ ನಡುವೆಯೇ ಒಂದು ಮಾದರಿ ಕೆಲಸ ಮಾಡಿದ್ದಾರೆ. ಹೌದು, ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮರಿ ಆನೆಯೊಂದನ್ನು ಒಂದು ವರ್ಷಕ್ಕಾಗಿ ದತ್ತು ಪಡೆದಿದ್ದಾರೆ. ಈ ಮರಿಆನೆಯ ಹೆಸರೂ ಪಾರ್ವತಿ. ಶಿವಣ್ಣನವರ ತಾಯಿಯ ಹೆಸರು ಪಾರ್ವತಮ್ಮ ರಾಜ್​ಕುಮಾರ್ ಅನ್ನೋದು ವಿಶೇಷ ​.

ಗೌರಿ ಗಣೇಶ ಹಬ್ಬದ ಸಂಭ್ರಮ , ಸಡಗರ ದೇಶದೆಲ್ಲೆಡೆ ಮನೆ ಮಾಡಿದೆ. ಲಾಕ್​ಡೌನ್ ನಡುವೆಯೂ ಮನೆ, ಮನಗಳಲ್ಲಿ ಗೌರಿ ಹಾಗೂ ಗಣಪನ ಆರಾಧನೆ ನಡೀತಿದೆ. ಹೀಗೆ ಅಮ್ಮನ ನೆನಪು, ಹಬ್ಬದ ಸಂಭ್ರಮ ಅಂತ ತಾಯಿಯ ಹೆಸರಿನ ಆನೆಯನ್ನೇ ದತ್ತು ಪಡೆದಿದ್ದಾರೆ ಶಿವಣ್ಣ.

ಇದೇ ಆಗಸ್ಟ್ 20ರಿಂದ ಹಿಡಿದು 2021ರ ಆಗಸ್ಟ್ 19ರವರೆಗಿನ ಒಂದು  ವರ್ಷದ ಅವಧಿವರೆಗೆ ಪಾರ್ವತಿ ಎಂಬ ಮರಿಆನೆಯ ದತ್ತು ಪಡೆದಿರುವ ಶಿವಣ್ಣ ಅದಕ್ಕಾಗಿ ಮೃಗಾಲಯಕ್ಕೆ 75 ಸಾವಿರ ರೂಪಾಯಿ ಹಣ ನೀಡಿದ್ದಾರೆ. ಈ ಕುರಿತು ಶಿವಣ್ಣ ಯಾರಿಗೂ ಮಾಹಿತಿ ನೀಡಿಲ್ಲವಾದರೂ, ಖುದ್ದು ಮೈಸೂರು ಮೃಗಾಲಯ ಹಾಗೂ ರಾಜ್ಯ ಮೃಗಾಲಯ ಪ್ರಾಧಿಕಾರದವರು ಶಿವಣ್ಣನಿಗೆ ಧನ್ಯವಾದ ಹೇಳಿದ್ದಾರೆ.

ಈ ಹಿಂದೆಯೂ ಡಿಬಾಸ್ ದರ್ಶನ್, ಹಾಸ್ಯನಟ ಚಿಕ್ಕಣ್ಣ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಡೈನಾಮಿಕ್ ಕಿಂಗ್ ದೇವರಾಜ್ ಸೇರಿದಂತೆ ಹಲವಾರು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ರಾಜ್ಯದ ವಿವಿಧ ಜೂಗಳಲ್ಲಿ ವನ್ಯಪ್ರಾಣಿಗಳನ್ನು ದತ್ತು ಪಡೆದಿರುವ ಉದಾಹರಣೆಗಳಿವೆ. ಈಗ ಈ ಸಾಲಿಗೆ ದೊಡ್ಮನೆ ದೊಡ್ಡಮಗ ಶಿವಣ್ಣ ಕೂಡ ಸೇರಿದ್ದಾರೆ. ಆ ಮೂಲಕ ಬೇರೆ ತಾರೆಯರು ಹಾಗೂ ಜನಸಾಮಾನ್ಯರಿಗೂ ಮಾದರಿಯಾಗಿದ್ದಾರೆ.

ಸಿನಿಮಾ ವಿಚಾರದ ಬಗ್ಗೆ ಹೇಳುವುದುದಾದರೆ, ಎ.ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅಭಿನಯಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಶೂಟಿಂಗ್​ ಪೂರ್ಣಗೊಳಿಸಿ ಮೇ ತಿಂಗಳಲ್ಲೇ ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾದಿಂದಾಗಿ ಸಿನಿಮಾ ಶೂಟಿಂಗ್​ ನಿಂತಿತ್ತು. ಈಗ ಮತ್ತೆ ಸಿನಿಮಾ ಶೂಟಿಂಗ್​ ಆರಂಭವಾಗಿದೆ.
Published by: Rajesh Duggumane
First published: August 23, 2020, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories