news18-kannada Updated:September 12, 2020, 9:53 AM IST
ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಬಂಧಿತನಾಗಿರುವ ಆರೋಪಿ ವೈಭವ್ ಜೈನ್
ಬೆಂಗಳೂರು (ಸೆ. 12): ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಈಗಾಗಲೇ ಹಲವರು ಜೈಲು ಸೇರಿದ್ದಾರೆ. ಇದೀಗ ಆ ಸಾಲಿಗೆ ಇನ್ನೋರ್ವ ಆರೋಪಿಯ ಸೇರ್ಪಡೆಯಾಗಿದೆ. ಸ್ಯಾಂಡಲ್ವುಡ್ ಡ್ರಗ್ ಕೇಸ್ಗೆ ಸಂಬಂಧಿಸಿದಂತೆ ಐದನೇ ಆರೋಪಿ ವೈಭವ್ ಜೈನ್ನನ್ನು ಬಂಧಿಸಲಾಗಿದೆ. ಡ್ರಗ್ ಪ್ರಕರಣದ ಐದನೇ ಆರೋಪಿಯಾಗಿರುವ ಬೆಂಗಳೂರಿನ ಚಿನ್ನದ ವ್ಯಾಪಾರಿಯ ಮಗ ವೈಭವ್ ಜೈನ್ ಬಂಡವಾಳ ಬಿಚ್ಚಿಟ್ಟಿದ್ದ ರವಿಶಂಕರ್ ಹೇಳಿಕೆಯನ್ನು ಆಧರಿಸಿ ಇಂದು ವೈಭವ್ ಜೈನ್ನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊರೋನಾ ಇದೆ, ನಾನು ಕ್ವಾರಂಟೈನ್ನಲ್ಲಿದ್ದೇನೆ ಎಂದು ಹೇಳುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ವೈಭವ್ ಕ್ವಾರಂಟೈನ್ ಮುಗಿಯುತ್ತಿದ್ದಂತೆ ನಾಪತ್ತೆಯಾಗಿದ್ದ.
ಬೆಂಗಳೂರಿನ ಚಿನ್ನದ ವ್ಯಾಪಾರಿಯ ಮಗನಾಗಿರುವ ವೈಭವ್ ಜೈನ್ ಈಗ ಖುದ್ದು ತಾನೇ ಚಿನ್ನದ ಬ್ಯುಸಿನೆಸ್ ಮಾಡುತ್ತಿದ್ದಾನೆ. 2018ರಲ್ಲಿ ರವಿಶಂಕರ್ ಹಾಗೂ ರಾಗಿಣಿ ಪ್ರತಿಷ್ಟಿತ ಹೋಟೆಲ್ನಲ್ಲಿ ಪಾರ್ಟಿಗೆ ಹೋಗಿದ್ದರು. ಈ ವೇಳೆ ರವಿಶಂಕರ್ಗೆ ವೈಭವ್ ಜೈನ್ ಪರಿಚಯವಾಗಿದ್ದ. ಸ್ನೇಹ ಸಲುಗೆ ಜಾಸ್ತಿ ಆಗುತ್ತಾ ಹೋದಂತೆ ಅವನ ವ್ಯವಹಾರ ರವಿಶಂಕರ್ಗೆ ಗೊತ್ತಾಗಿತ್ತು. ವೈಭವ್ ಜೈನ್ ಸ್ನೇಹಿತರಾದ ಅರುಣ್, ವಿನಯ್, ಪ್ರಶಾಂತ್ ರಾಂಕ ಮೂಲಕ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: Ragini Dwivedi: ನಟಿ ರಾಗಿಣಿ ದ್ವಿವೇದಿ ಸೇರಿದಂತೆ 6 ಜನ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಪ್ರತಿಷ್ಠಿತ ಹೊಟೇಲ್ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ಸ್ ದಂಧೆ ಮಾಡುತ್ತಿದ್ದ ವೈಭವ್ ಜೈನ್ ಪಾರ್ಟಿಗೆ ನಗರದ ದೊಡ್ಡ ಶ್ರೀಮಂತರು ಬರುತ್ತಿದ್ದರು. ಬಂದವರಿಗೆ ವೈಭವ್ ಡ್ರಗ್ ಸಪ್ಲೈ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಿಸಿಬಿ ಪೊಲೀಸರ ಮುಂದೆ ಆರೋಪಿ ರವಿಶಂಕರ್ ಹೇಳಿಕೆ ನೀಡಿದ್ದ. ಡ್ರಗ್ ಕೇಸ್ನಲ್ಲಿ ರಾಗಿಣಿ ದ್ವಿವೇದಿ, ರವಿಶಂಕರ್, ಸಂಜನಾ ಬಂಧನವಾಗುತ್ತಿದ್ದಂತೆ ವೈಭವ್ ಜೈನ್ ತನಗೆ ಕೊರೋನಾ ಪಾಸಿಟಿವ್ ಎಂದು ಹೇಳಿ ಕ್ವಾರಂಟೈನ್ನಲ್ಲಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದ ಆತನಿಗಾಗಿ ಸಿಸಿಬಿ ಪೊಲೀಸರು ಸಾಕಷ್ಟು ಶೋಧ ನಡೆಸಿದ್ದರು.
ಐದನೇ ಆರೋಪಿ ವೈಭವ್ ಜೈನ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಈ ಮೊದಲೇ ನೋಟಿಸ್ ನೀಡಿದ್ದಾರೆ. ಆದರೆ, ಆತ ಕೊರೋನಾ ಇದೆ, ನಾನು ಕ್ವಾರಂಟೈನ್ನಲ್ಲಿದ್ದೇನೆ ಎಂದು ಹೇಳುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ. ಕ್ವಾರಂಟೈನ್ ಮುಗಿಯುತ್ತಿದ್ದಂತೆ ನಾಪತ್ತೆಯಾಗಿದ್ದ. ಇಂದು ಬೆಳ್ಳಂಬೆಳಗ್ಗೆ ವೈಯಾಲಿಕಾವಲ್ನಲ್ಲಿರುವ ವೈಭವ್ ಜೈನ್ ಮನೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಾಲ್ಕು ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ವೈಭವ್ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Published by:
Sushma Chakre
First published:
September 12, 2020, 9:51 AM IST