ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್. ಅವರ ಡೆಬ್ಯೂ ಬಗ್ಗೆ ಕಳೆದ ಒಂದು ವರ್ಷದಿಂದಲೂ ಸಾಕಷ್ಟು ಚರ್ಚೆಯಾಗುತ್ತಿತ್ತು. ಈಗ ತ್ರಿವಿಕ್ರಮ ಮೂಲಕ ವಿಕ್ರಮ್ ಪದಾರ್ಪಣೆ ಮಾಡಿದ್ದಾಗಿದೆ. ಆದರೆ ವಿಶೇಷ ಅಂದರೆ ಅವರ ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ಹೊಸ ಸಿನಿಮಾ ಅನೌನ್ಸ್ ಆಗಿದೆ.
ಹೌದು, ವಿಕ್ರಮ್ ರವಿಚಂದ್ರನ್ ಅವರ ತ್ರಿವಿಕ್ರಮ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಸ್ಟೈಲಿಶ್ ಆಗಿ ಮಿಂಚಿದ್ದರು ವಿಕ್ರಮ್. ರೋಸ್ ಖ್ಯಾತಿಯ ಸಹನಾಮೂರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಕೊಂಚ ಮಟ್ಟಿಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ. ಲಾಕ್ಡೌನ್ ಮುಗಿದು ಥಿಯೇಟರ್ಗಳು ಮತ್ತೆ ಕಾರ್ಯಾರಂಭ ಮಾಡಿದ ಕೆಲ ದಿನಗಳಲ್ಲೇ ತ್ರಿವಿಕ್ರಮ ತೆರೆಗೆ ಬರಲಿದೆ.
ಸಾಮಾನ್ಯವಾಗಿ ಹೊಸ ನಟರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ, ಆ ಸಿನಿಮಾ ರಿಲೀಸ್ ಆಗಿ ಕಲೆಕ್ಷನ್ ಎಷ್ಟಾಗಿದೆ? ಸಿನಿಪ್ರೇಕ್ಷಕರು ಹೊಸ ನಾಯಕನನ್ನು ಒಪ್ಪಿದ್ದಾರಾ? ಅಂತೆಲ್ಲಾ ಲೆಕ್ಕಾಚಾರ ಹಾಕಿದ ಬಳಿಕವಷ್ಟೇ, ಹೊಸ ಸಿನಿಮಾಗಳಲ್ಲಿ ಅವಕಾಶ ನೀಡಲಾಗುತ್ತೆ. ಆದರೆ ವಿಕ್ರಮ್ ರವಿಚಂದ್ರನ್ ವಿಷಯದಲ್ಲಿ ಹಾಗೆಲ್ಲಾ ಲೆಕ್ಕಾಚಾರಗಳಿಲ್ಲ. ಚಿತ್ರರಂಗವೇ ಅವರನ್ನು ಒಪ್ಪಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ಎರಡನೇ ಚಿತ್ರ ಘೋಷಣೆ ಆಗಿದೆ.
ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ರಾ ಮತ್ತು ರಗಡ್ ಪಾತ್ರದಲ್ಲಿ ವಿಕ್ರಮ್ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಮಾಸ್ ಸಿನಿಮಾ ಆಗಿದ್ದು ಮನು ನಾಗ್ ಆಕ್ಷನ್ ಕಟ್ ಹೇಳಲಿದ್ದಾರೆ. ಸೆಂಟಿಮೆಂಟ್ ಸನ್ನಿವೇಶಗಳು ಹಾಗೂ ತಾಯಿ ಮತ್ತು ಮಗನ ನಡುವಿನ ಭಾಂದವ್ಯದ ದೃಶ್ಯಗಳು ಜನರ ಮನಸ್ಸಿಗೆ ಹತ್ತಿರವಾಗಲಿವೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಕನ್ನಡ ಹಾಗೂ ಮಲಯಾಳಂನ ಪ್ರಸಿದ್ಧ ನಿರ್ದೇಶಕರ ಬಳಿ ಕೆಲಸ ಮಾಡಿರುವ ಮನು ನಾಗ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ. ಈ ಹಿಂದೆ ಬಹುಭಾಷಾ ನಟಿ ಪ್ರಿಯಾಮಣಿ ಅವರ ಅಭಿನಯದಲ್ಲಿ ವೈಟ್ ಎಂಬ ಕಿರುಚಿತ್ರ ನಿರ್ದೇಶಿಸಿದ್ದರು. ವಿಶೇಷ ಅಂದರೆ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಕಿರುಚಿತ್ರವೊಂದಕ್ಕೆ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಅವರಿಂದ ಧ್ವನಿ ನೀಡಿಸಿದ್ದರು ಮನು ನಾಗ್.
ಈ ಚಿತ್ರಕ್ಕೆ ಮನು ನಾಗ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. ಚೆನ್ನೈ ಮೂಲದ ನಿರ್ಮಾಪಕರು ಈ ಸಿನಿಮಾಗೆ ಹಣ ಹೂಡುತ್ತಿದ್ದಾರೆ. ನಾಯಕನ ಹೊರತುಪಡಿಸಿ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರತಂಡ ಟೈಟಲ್ ಹಾಗೂ ಚಿತ್ರತಂಡದ ಕುರಿತು ಮಾಹಿತಿ ನೀಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ