news18-kannada Updated:October 15, 2020, 7:20 PM IST
ನಟ ಜಗ್ಗೇಶ್
ಸಿನಿಮಾ ಇಂಡಸ್ಟ್ರೀಗೆ ಬಂದು ಬದುಕು ಹಾಳು ಮಾಡಿಕೊಳ್ಳಬೇಡಿ. ಸಿನಿಮಾ ಇಂಡಸ್ಟ್ರೀ ನೀವಂದುಕೊಂಡತೆ ಇಲ್ಲ ಎಂದು ಸಿನಿರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಆಸೆ ಇಟ್ಟುಕೊಂಡಿರುವರಿಗೆ ನವರಸ ನಾಯಕ ನಟ ಜಗ್ಗೇಶ್ ಸಲಹೆ ನೀಡಿದ್ದಾರೆ. ನಾನು ಈಗ ಡಿಪ್ಲೋಮೊ ಮುಗಿಸಿರುವೆ, ಆದರೆ, ಈಗ ನಿರ್ದೇಶಕ ಆಗಬೇಕೆಂಬ ಆಸೆ ಇದೆ. ಇಂಜಿನಿಯರಿಂಗ್ ಗೆ ಹೋಗಲಾ ಅಥವಾ ನಿರ್ದೇಶಕ ಆಗಲಾ ಎಂದು ಯುವಕನೊಬ್ಬ ನಟ ಜಗ್ಗೇಶ್ ಬಳಿ ಟ್ವೀಟರ್ ನಲ್ಲಿ ಸಲಹೆ ಕೇಳಿದ್ದಾನೆ. ಅದಕ್ಕೆ ಸಿನಿಮಾ ರಂಗಕ್ಕೆ ಬರುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಇಂದು ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ, ಆದರೆ ಅವುಗಳಲ್ಲಿ ಗೆಲ್ಲುವ ಸಿನಿಮಾಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಇದರ ಜೊತೆಗೆ ಎಲ್ಲರಿಗೂ ಒಳ್ಳೆಯ ಪಾತ್ರಗಳು, ಬ್ರೇಕ್ ಸಿಗುವಂತಹ ಕಥೆ ಸಿಗುತ್ತದೆ ಎಂದು ಹೇಳಲಾಗದು.
300 ಸಿನಿಮಾದಲ್ಲಿ ಪೋಷಕ ನಟ-ನಟಿಯಾಗಿರುವವರಿಗೆ ಇಂದು ಸ್ವಂತ ಮನೆ ಕೂಡ ಇಲ್ಲದಿರುವ ಉದಾಹರಣೆ ಇದೆ. ಒಂದು ಸಿನಿಮಾ ಚೆನ್ನಾಗಿದ್ದರೂ ಕೂಡ ಅದನ್ನು ರಿಲೀಸ್ ಮಾಡೋದು, ಪ್ರೇಕ್ಷಕರನ್ನು ಥಿಯೇಟರ್ನತ್ತ ಕರೆದುಕೊಂಡು ಬರುವುದು ಸುಲಭದ ಮಾತಲ್ಲ. ಇದರ ನಡುವೆ ಅನೇಕ ಸಮಸ್ಯೆಗಳಿವೆ. ಅದರಲ್ಲೂ ಕೊರೋನಾ ವೈರಸ್ನಿಂದಾಗಿ ಚಿತ್ರರಂಗವೂ ಆರ್ಥಿಕ ಸಂಕಷ್ಟದಲ್ಲಿದೆ.
ದಯಮಾಡಿ ಓದಿ ದಡ ಸೇರಿ. ಇಂದಿನ ಸಿನಿಮಾ ನಂಬಿ ತಂದೆ-ತಾಯಿ ಕನಸು ಮತ್ತು ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ. ನೀವೆಲ್ಲಾ ಅಂದುಕೊಂಡಷ್ಟು ಸುಲಭವಿಲ್ಲಾ ಇಂದಿನ ಸಿನಿಮಾ. ಬೇಕಾದರೆ ಸಂತೋಷಕ್ಕೆ ಹವ್ಯಾಸವಾಗಿ ಬಳಸಿ ವೃತ್ತಿಯಾಗಿ ಅಲ್ಲ. ಬೆರಳೆಣಿಸುವ ಕೆಲವರ ಬಿಟ್ಟು ಶೇ. 98ರಷ್ಟು ಸಿನಿಮಾ ಜನ ಸಂಕಷ್ಟದಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನವರಸ ನಾಯಕ ಜಗ್ಗೇಶ್ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುತ್ತಿರುತ್ತಾರೆ, ನೆಟ್ಟಿಗರ ಜೊತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಸಮಾಜದಲ್ಲಿ ಏನೇ ಮಹತ್ವದ ಘಟನೆಗಳು ನಡೆದರೂ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ.
ಇದನ್ನೂ ಓದಿ
: HBD Raanna: ಹುಟ್ಟುಹಬ್ಬದ ಸಂಭ್ರಮದಲ್ಲಿ ಏಕ್ ಲವ್ ಯಾ ಸಿನಿಮಾದ ನಾಯಕ ರಾಣಾ: ಹೊಸ ಪೋಸ್ಟರ್ ರಿಲೀಸ್ ಮಾಡಿದ ಪ್ರೇಮ್..!
ಕೊರೋನಾ ವೈರಸ್ ಮತ್ತು ಲಾಕ್ಡೌನ್ ನಿಂದಾಗಿ ಚಿತ್ರರಂಗ ಸಂಕಷ್ಟದಲ್ಲಿದೆ. ಸುಮಾರು ಎರಡರಿಂದ ಮೂರು ತಿಂಗಳು ಬಣ್ಣದ ಲೋಕ ಸ್ತಬ್ಧವಾಗಿತ್ತು. ಈ ಹಿನ್ನೆಲೆ ಸಿನಿಮಾ ನಿರ್ಮಾಪಕರು, ಚಿತ್ರಮಂದಿರ ಮಾಲೀಕರು, ನಟರು ಸೇರಿದಂತೆ ಬಹುತೇಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಇಂದಿನಿಂದ ಚಿತ್ರಮಂದಿರಗಳು ಆರಂಭಗೊಳ್ಳುತ್ತಿವೆ. ಇತ್ತೀಚೆಗೆ ಖ್ಯಾತ ಸಂಗೀತ ಸಂಯೋಜಕ, ಗಾಯಕ ರಘು ದೀಕ್ಷಿತ್ ಸಹ ಆರ್ಥಿಕ ಸಂಕಷ್ಟದಲ್ಲಿರುವ ಬಗ್ಗೆ ಹೇಳಿದ್ದರು
Published by:
G Hareeshkumar
First published:
October 15, 2020, 6:50 PM IST