news18-kannada Updated:July 15, 2020, 10:52 AM IST
ಸಲ್ಮಾನ್-ಸುಶಾಂತ್
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ನಿನ್ನೆಗೆ ಒಂದು ತಿಂಗಳು ಕಳೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 35ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ವಿಚಾರಣೆ ಮಾಡುವುದಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ತಿಂಗಳು ಕಳೆದಿವೆ. ಅವರ ಆತ್ಮಹತ್ಯೆಗೆ ಬಾಲಿವುಡ್ ದಿಗ್ಗಜರು ನೇರ ಕಾರಣ ಎಂದು ಕೆಲವರು ದೂರಿದ್ದರು. ಇನ್ನೂ ಕೆಲವರು ಇದು ಕೊಲೆ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಸುಶಾಂತ್ ಕುಟುಂಬ ಸದಸ್ಯರು, ಸುಶಾಂತ್ ಗೆಳತಿ ರಿಯಾ ಸೇರಿ ಅನೇಕರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನೂ ವಿಚಾರಣೆ ನಡೆಸಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು.
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್, ಸಲ್ಮಾನ್ ಖಾನ್, ಏಕ್ತಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಕೋರಿ ಮುಜಾಫರ್ಪುರ್ ಕೋರ್ಟ್ನಲ್ಲಿ ಬಿಹಾರದ ವಕೀಲರಾದ ಸುಧೀರ್ ಕುಮಾರ್ ಓಝಾ ಕೋರಿದ್ದರು. ಆದರೆ, ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಅಲ್ಲದೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು.
ಕಳೆದ ವಾರ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಮ್ಯಾನೇಜರ್ ಆಗಿದ್ದ ರೇಶ್ಮಾ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಸಲ್ಮಾನ್ ಖಾನ್ ಅವರನ್ನು ಕೂಡ ವಿಚಾರಣೆ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಈ ವರದಿಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.
ನಡೆದಿದ್ದೇನು?:
ಜೂ.14ರ ಮುಂಜಾನೆ 1:47 ಗಂಟೆಗೆ ಸುಶಾಂತ್ ಆಪ್ತ ಗೆಳತಿ ರಿಯಾ ಚಕ್ರವರ್ತಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ, ಅವರು ಕರೆ ಎತ್ತಿರಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಗೆಳೆಯ ಹಾಗೂ ನಟ ಮಹೇಶ್ ಶೆಟ್ಟಿಗೆ ಸುಶಾಂತ್ ಕರೆ ಮಾಡಿದ್ದರು. ಆದರೆ, ಅವರು ಕೂಡ ಕರೆ ಸ್ವೀಕರಿಸರಲಿಲ್ಲ.ಸುಶಾಂತ್ ಸಾಯುವುದಕ್ಕೂ ಕೆಲವೇ ಗಂಟೆ ಮೊದಲು ಮಹೇಶ್ ಮೊಬೈಲ್ ನೋಡಿದ್ದರು. ಸುಶಾಂತ್ ಮಿಸ್ಕಾ ಲ್ ನೋಡಿ ಕಾಲ್ ಬ್ಯಾಕ್ ಮಾಡಿದ್ದರು. ಈ ವೇಳೆ ಸುಶಾಂತ್ ಕರೆ ಸ್ವೀಕರಿಸಿರಲಿಲ್ಲ. 9:30ಸುಮಾರಿಗೆ ಮಹೇಶ್ಗೆ ಕರೆ ಮಾಡಲು ಸುಶಾಂತ್ ಪ್ರಯತ್ನ ಪಟ್ಟಿದ್ದರು. ಆದರೆ, ಕರೆ ಕನೆಕ್ಟ್ ಆಗಿರಲಿಲ್ಲ.
ಇದನ್ನೂ ಓದಿ:
ತೆರೆಮೇಲೆ ನಗಿಸಿದ್ದ ಸ್ಯಾಂಡಲ್ವುಡ್ ನಟನಿಗೂ ಕಾಡಿತ್ತು ಖಿನ್ನತೆ: ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ಬಹಿರಂಗ!
ಸುಶಾಂತ್ ತಿಂಡಿ ತಿನ್ನುವುದಕ್ಕೂ ಮೊದಲು ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದಿದ್ದರು. ಊಟದ ಮೆನು ಬಗ್ಗೆ ಕೇಳಲು 10:25ಕ್ಕೆ ಸುಶಾಂತ್ ಉಳಿದಿದ್ದ ರೂಮಿನ ಬಾಗಿಲನ್ನು ಬಾಣಸಿಗ ನೀರಜ್ ತಟ್ಟಿದ್ದರು. ಆದರೆ, ಯಾವುದೇ ಉತ್ತರ ಬಂದಿಲ್ಲ. ಈ ವೇಳೆ ಅದೇ ಮನೆಯಲ್ಲಿದ್ದ ಸುಶಾಂತ್ ಗೆಳೆಯ 11 ಗಂಟೆಗೆ ಎದ್ದು ಸುಶಾಂತ್ ಬಗ್ಗೆ ವಿಚಾರಿಸಿದ್ದರು. ಅವರು ಕೂಡ ಬಾಗಿಲು ತಟ್ಟಿದ್ದರೂ ಯಾವುದೇ ಉತ್ತರ ಬಂದಿರಲಿಲ್ಲ.
ಈ ವೇಳೆ ಸುಶಾಂತ್ ಮೊಬೈಲ್ ರಿಂಗ್ ಆಗುವ ಶಬ್ದ ಕೇಳುತ್ತಿತ್ತು. ಆದರೆ, ಸುಶಾಂತ್ ಅದಕ್ಕೆ ಉತ್ತರಿಸಿರುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಗೆಳೆಯ ಸುಶಾಂತ್ ಸಹೋದರಿ ರೀತುಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಕೀ ಮೇಕರ್ಗಳು ಕೂಡ ಆಗಮಿಸಿದ್ದರು. ಮಧ್ಯಾಹ್ನ 12:25ಕ್ಕೆ ಬೆಡ್ರೂಂ ತೆಗೆದಾಗ ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ನಂತರ ವೈದ್ಯರು ಬಂದು ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಖಚಿತವಾಗಿತ್ತು.
Published by:
Rajesh Duggumane
First published:
July 15, 2020, 10:52 AM IST