'ಮೈ ಡಾರ್ಲಿಂಗ್ ಸಂಜನಾ...' ಅಂತಾವ್ರೆ ನವೀನ್ ಸಜ್ಜು..!

ದುನಿಯಾ ವಿಜಯ್​ ಅವರ ಚೊಚ್ಚಲ ಆ್ಯಕ್ಷನ್ ಕಟ್​ಗೆ ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಇನ್ನು ಟಗರು ಚಿತ್ರಕ್ಕಾಗಿ ದುಡಿದ ತಂಡವೇ ಇಲ್ಲೂ ಜೊತೆಗೂಡಿದ್ದು, ಈ ಮೂಲಕ ಮತ್ತೊಂದು ಭರ್ಜರಿ ಹಿಟ್​ ಹುಡಕಾಟದಲ್ಲಿ ಚಿತ್ರತಂಡ.

salaga song

salaga song

  • Share this:


ಸ್ಯಾಂಡಲ್​ವುಡ್​ನಲ್ಲಿ ಸೆಟ್ಟೇರಿದಾಗಿಂದಲೇ ಸಖತ್ ಸೌಂಡ್​ ಮಾಡುತ್ತಿರುವ 'ಸಲಗ' ಚಿತ್ರದ  ಮತ್ತೊಂದು ಸಾಂಗ್ ಬಿಡುಗಡೆಯಾಗಿದೆ. ತಿಂಗಳ ಹಿಂದೆಯಷ್ಟೇ ಸೂರಿಯಣ್ಣಾ... ಸಾಂಗ್ ಮೂಲಕ ಕಮಾಲ್ ಮಾಡಿದ್ದ ಚಿತ್ರತಂಡ ಈ ಬಾರಿ 'ಸಂಜನಾ...' ರನ್ನು ಕರೆ ತಂದಿದ್ದಾರೆ. ಅಂದರೆ ಸ್ಯಾಂಡಲ್​ವುಡ್​ನ ಮಸ್ತ್ ಗಾಯಕ ನವೀನ್ ಸಜ್ಜು ಹಾಡಿರುವ ಸಂಜನಾ ಐ ಲವ್ ಯೂ ಸಂಜನಾ.. ಗೀತೆಯ​ ಲಿರಿಕಲ್ ವಿಡಿಯೋವನ್ನು ಸಲಗ ತಂಡ ರಿಲೀಸ್ ಮಾಡಿದೆ.

ಸಖತ್ ಫನ್ನಿಯಾಗಿರುವ ಸಾಹಿತ್ಯದಿಂದ ಕೂಡಿರುವ ಈ ಗೀತೆಗೆ ಮತ್ತೊಮ್ಮೆ ಕಿಕ್ಕೇರಿಸುವ ಕಂಠ ನೀಡಿದ್ದಾರೆ ನವೀನ್ ಸಜ್ಜು.  ಎಣ್ಣೆ ಬುಟ್​ಬುಡ್ತೀನಿ..., ಎಣ್ಣೆ ನಂದು ಊಟ ನಿಂದು..., ಏನ್ ಚಂದನಾ ತಕೋ...ದಂತಹ ವಿಭಿನ್ನ ಗೀತೆಗಳನ್ನು ಹಾಡಿರುವ ನವೀನ್ ಅವರ ಈ ಗೀತೆ ಕೂಡ ಸೂಪರ್ ಹಿಟ್ ಲೀಸ್ಟ್​ಗೆ ಸೇರ್ಪಡೆಯಾಗುವುದರಲ್ಲಿ ಡೌಟೇ ಇಲ್ಲ.

ಆ್ಯಂಟೊನಿ ದಾಸ್ ಹಾಡಿದ್ದ ಸೂರಿಯಣ್ಣ... ಸಾಂಗ್ ಸೂಪರ್ ಡೂಪರ್ ಹಿಟ್ ಆಗಿದ್ದೆ ತಡ,  ದುನಿಯಾ ವಿಜಿ ಅಭಿಮಾನಿಗಳು ಮುಂದಿನ ಹಾಡಿಗಾಗಿ ಕಾತುರದಿಂದ ಕಾಯುತ್ತಿದ್ದರು. ಇದೀಗ ಬಿಡುಗಡೆಯಾಗಿರುವ ಸಂಜನಾ ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು ಮತ್ತಷ್ಟು ಕಿಕ್ಕೇರಿಸುವಂತಿದೆ.

ಅದರಲ್ಲೂ ಬಹದ್ದೂರ್ ಚೇತನ್ ಅವರು ಬರೆದಿರುವ ನಿಮ್ ಅಮ್ಮನ್ ಕೈಯಲಿ ತಲೆ ಬಾಚಿಸಿಕೊಂಡು, ನಿಮ್ ಅಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು, ಬರ್​ಬರ್ತಾ ದಾರೀಲಿ ನಿನ್ ಫ್ರೆಂಡ್ ಕರ್ಕೊಂಡು, ನೀ ನಡ್ಕೊಂಡ್ ಬರ್ತಿದ್ರೆ ಅದೇ ಕಣೇ ಟ್ರೆಂಡು...8.30 ಕ್ಕೆ ನೀನು ಬಂದ್ರೆ ಹಿಂಗೆ..ಶೆಟ್ರ ಅಂಗಡಿ ಮುಂದೆ ಕಾಯ್ತಿರ್ತೀನಿ ನಿಂಗೆ..ಪಿಚ್ಚರಲ್ಲಿ ಅವರಿಗೂ ಇವರಿಗೂ ಲವ್ ಆದಂಗೆ...ಎಂಬ ಸಾಹಿತ್ಯವಂತೂ ಬಿಸಿ ದೋಸೆ ಮೇಲೆ ತುಪ್ಪ ಬಿದ್ದಂತೆ ಸಲೀಸಾಗಿ ಬಾಯಲ್ಲಿ ಗುನುಗುವಂತೆ ಮಾಡುತ್ತದೆ.

ಇಂತಹದೊಂದು ಸಖತ್ ಕ್ಯಾಚಿ ಸಾಂಗ್​ಗೆ  ರಾಗ ಸಂಯೋಜಿಸಿರುವುದು ನವೀನ್ ಸಜ್ಜು ಎಂಬುದೇ ಮತ್ತೊಂದು ವಿಶೇಷ. ಇದಲ್ಲದೆ ಇನ್ನೊಂದು ಗೀತೆಗೂ ನವೀನ್ ಮ್ಯೂಸಿಕ್ ನೀಡಿದ್ದು, ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ಇನ್ನು ಈಗಾಗಲೇ ಮೋಡಿ ಮಾಡಿರುವ  ಸೂರಿ ಅಣ್ಣಾ...ಸಾಂಗ್​ ಮ್ಯೂಸಿಕ್​ನಲ್ಲೂ ಚರಣ್ ರಾಜ್ ಜೊತೆ ಸಜ್ಜು ಕೈಜೋಡಿಸಿದ್ದರು.

ಇನ್ನು ಈಗಾಗಲೇ ಬಿಡುಗಡೆಯಾಗಿರುವ ಸಲಗ ಟೀಸರ್​ ಈಗಾಗಲೇ ಸಿನಿಪ್ರಿಯರನ್ನು ಸೆಳೆದಿದ್ದು, ಅದರಲ್ಲೂ ವರ್ಲ್ಡ್​ ಯಾವುದೇ ಕಲರಲ್ಲಿದ್ದರೂ...ಈ ಅಂಡರ್​ವರ್ಲ್ಡ್​ ಮಾತ್ರ ಕೆಂಪು ಕಲರಲ್ಲಿರುತ್ತೆ...ಎಂಬ ರಕ್ತಪಾತದ ಮುನ್ಸೂಚೆನೆಯ ಖಡಕ್ ಡೈಲಾಗ್​ಗೆ​ ವಿಜಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಈ ಚಿತ್ರದಲ್ಲಿ ದುನಿಯಾ ವಿಜಿ ಆನೆ ನಡೆದಿದ್ದೇ ದಾರಿ ಎಂಬಂತಹ ಖತರ್ನಾಕ್ ರೌಡಿ ಪಾತ್ರದಲ್ಲಿ  ಅಭಿನಯಿಸಿದರೆ, ಬ್ಲ್ಯಾಕ್ ಕೋಬ್ರಾಗೆ ಟಕ್ಕರ್ ಕೊಡುವ ಅವತಾರದಲ್ಲಿ ಡಾಲಿ ಧನಂಜಯ್ ಕಾಣಿಸುತ್ತಿದ್ದಾರೆ. 'ಟಗರು', 'ಯಜಮಾನ' ಸಿನಿಮಾದಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ 'ಮಿಠಾಯಿ ಸೂರಿ' ಧನಂಜಯ್ ಈ ಬಾರಿ ಮಾತ್ರ ಖಾಕಿಧಾರಿಯಾಗಿ ಕಾಣಿಕೊಳ್ಳಲಿದ್ದಾರೆ.

ದುನಿಯಾ ವಿಜಯ್​ ಅವರ ಚೊಚ್ಚಲ ಆ್ಯಕ್ಷನ್ ಕಟ್​ಗೆ ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಇನ್ನು ಟಗರು ಚಿತ್ರಕ್ಕಾಗಿ ದುಡಿದ ತಂಡವೇ ಇಲ್ಲೂ ಜೊತೆಗೂಡಿದ್ದು, ಈ ಮೂಲಕ ಮತ್ತೊಂದು ಭರ್ಜರಿ ಹಿಟ್​ ಹುಡಕಾಟದಲ್ಲಿ ಚಿತ್ರತಂಡ.

ಹಾಗೆಯೇ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ಬಣ್ಣ ಹಚ್ಚಿದ್ದಾರೆ. ಅಲ್ಲದೆ  ಕೊಕ್ರೋಚ್ ಸುಧಿ, ಅಚ್ಯುತ್ ಕುಮಾರ್ ಅವರಂತಹ ಪ್ರತಿಭಾವಂತ ನಟರ ದಂಡೇ ಚಿತ್ರದಲ್ಲಿದೆ.  ಟೀಸರ್ ಮೂಲಕವೇ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಸಲಗದ ಅಸಲಿ ಘರ್ಜನೆ ವೀಕ್ಷಿಸಲು ಈ ತಿಂಗಳಾಂತ್ಯದವರೆಗೂ ಕಾಯಬೇಕಿದೆ.


First published: