ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದಾಗಲೇ ಸಖತ್ ಸೌಂಡ್ ಮಾಡಿದ್ದ 'ಸಲಗ' ಎಂಟ್ರಿಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ. ದುನಿಯಾ ವಿಜಯ್ ನಿರ್ದೇಶಕ ಕಮ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಜಬರ್ದಸ್ತ್ ಟೀಸರ್ ಕಳೆದ ತಿಂಗಳು ಬಿಡುಗಡೆಯಾಗಿತ್ತು. ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆಯಾಗಿ ರಿಲೀಸ್ ಮಾಡಲಾಗಿದ್ದ ಟೀಸರ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿತ್ತು.
ಇದಕ್ಕೂ ಮುನ್ನ ಸೂರಿ ಅಣ್ಣಾ..ಸಾಂಗ್ ಮೂಲಕ ಅಭಿಮಾನಿಗಳಿಗೆ ಕಿಕ್ಕೇರಿಸಿದ್ದ ಸಲಗ ಇದೀಗ ಅಂಡರ್ವರ್ಲ್ಡ್ ಮತ್ತೊಂದು ಮಜಲನ್ನು ತೋರಿಸಲು ಮಾರ್ಚ್ ತಿಂಗಳನ್ನು ಆರಿಸಿಕೊಂಡಿದೆ. ಮಾರ್ಚ್ ತಿಂಗಳೇ ಯಾಕೆ ಅಂದರೆ...ಯುಗಾದಿ ಹಬ್ಬ. ಹೌದು, ವಿಜಿ ಫ್ಯಾನ್ಸ್ಗೆ ಹಬ್ಬದ ಉಡುಗೊರೆಯಾಗಿ ಸಲಗ ಚಿತ್ರವನ್ನು ಮುಂದಿಡಲು ಚಿತ್ರತಂಡ ಯೋಜನೆ ರೂಪಿಸಿದೆ. ಅದರಂತೆ ಮಾರ್ಚ್ 27 ರಂದು ರಾಜ್ಯಾದ್ಯಂತ ಸಲಗನ ದರ್ಬಾರ್ ಶುರುವಾಗಲಿದೆ.
ಸಲಗ ಪಕ್ಕಾ ಮಾಸ್ ಚಿತ್ರವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ನಲ್ಲಿ ವರ್ಲ್ಡ್ ಯಾವುದೇ ಕಲರಲ್ಲಿದ್ದರೂ...ಈ ಅಂಡರ್ವರ್ಲ್ಡ್ ಮಾತ್ರ ಕೆಂಪು ಕಲರಲ್ಲಿರುತ್ತೆ...ಎಂಬ ರಕ್ತಪಾತದ ಮುನ್ಸೂಚೆನೆಯ ಡೈಲಾಗ್ನೊಂದಿಗೆ ಚಿತ್ರದ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ. ಇಲ್ಲಿ ದುನಿಯಾ ವಿಜಿ ಆನೆ ನಡೆದಿದ್ದೇ ದಾರಿ ಎಂಬಂತಹ ಖತರ್ನಾಕ್ ರೌಡಿ ಪಾತ್ರದಲ್ಲಿ ಅಭಿನಯಿಸಿದರೆ, ಬ್ಲ್ಯಾಕ್ ಕೋಬ್ರಾಗೆ ಟಕ್ಕರ್ ಕೊಡುವ ಅವತಾರದಲ್ಲಿ ಡಾಲಿ ಧನಂಜಯ್ ಕಾಣಿಸುತ್ತಿದ್ದಾರೆ.
'ಟಗರು', 'ಯಜಮಾನ' ಸಿನಿಮಾದಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ 'ಮಿಠಾಯಿ ಸೂರಿ' ಧನಂಜಯ್ ಈ ಬಾರಿ ಖಡಕ್ ಖಾಕಿಧಾರಿಯಾಗಿ ಕಾಣಿಕೊಂಡಿರುವುದು ವಿಶೇಷ. ದುನಿಯಾ ವಿಜಯ್ ಅವರ ಚೊಚ್ಚಲ ಆ್ಯಕ್ಷನ್ ಕಟ್ಗೆ ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಇನ್ನು ಟಗರು ಚಿತ್ರಕ್ಕಾಗಿ ದುಡಿದ ತಂಡವೇ ಇಲ್ಲೂ ಜೊತೆಗೂಡಿದ್ದು, ಈ ಮೂಲಕ ಮತ್ತೊಂದು ಭರ್ಜರಿ ಹಿಟ್ ಹುಡಕಾಟದಲ್ಲಿ ಚಿತ್ರತಂಡ.
ಇದನ್ನೂ ಓದಿ: ದ್ವಿಶತಕ ಸಿಡಿಸಿ ವಿಚಿತ್ರವಾಗಿ ಸಂಭ್ರಮಿಸಿದ ಬಾಂಗ್ಲಾ ಕ್ರಿಕೆಟಿಗ
ಇನ್ನು ಚಿತ್ರದಲ್ಲಿ ಕೊಕ್ರೋಚ್ ಸುಧಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಹಾಗೆಯೇ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ಬಣ್ಣ ಹಚ್ಚಿದ್ದಾರೆ.ಇನ್ನು ಸೆಟ್ಟೇರಿದಾಗಲೇ ಹೈಪ್ ಕ್ರಿಯೇಟ್ ಮಾಡಿದ್ದ ದುನಿಯಾ ವಿಜಿ ಅವರ ಹೊಸ ಅವತಾರ ತೆರೆ ಮೇಲೆ ನೋಡಲು ಒಂದು ತಿಂಗಳು ಕಾಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ