Salaga Kannada Movie: ಮೀಸೆ ಚಿಗುರದ ಚಿಲ್ಟಾರಿ, ಪಲ್ಟಾರಿ ಯುವಕರೆಲ್ಲ ರೌಡಿಸಂ ಮಾಡಿ ನಾನೇ ಡಾನ್ ಆಗಬೇಕು ಅಂತ ಕಾಲರ್ ಮೇಲೆ ಎತ್ತಿ ದೌಲತ್ತಿನಲ್ಲಿ ತಿರುಗಾಡುತ್ತಾ ಇರ್ತಾರೆ. ಅಂಥವರಿಗೆಲ್ಲ ’ಸಲಗ’ (Salaga) ಸಿನಿಮಾ ಒಂದು ಪಾಠ. ಹುಟ್ಟಿದಾಗಲೇ ಯಾರೂ ರೌಡಿಗಳಾಗಲ್ಲ. ಈ ಸಮಾಜ, ಕಾನೂನು ವ್ಯವಸ್ಥೆ ಒಬ್ಬ ವ್ಯಕ್ತಿಯನ್ನ ರೌಡಿಯಾಗುವಂತೆ (Rowdyism based) ಹೇಗೆ ಫೋರ್ಸ್ ಮಾಡುತ್ತೆ ಅನ್ನುವುದೆ ‘ಸಲಗ’ ಸಿನಿಮಾದ ಒನ್ ಲೈನ್ ಸ್ಟೋರಿ. ಹೌದು, ಸ್ಯಾಂಡಲ್ವುಡ್ನ (Sandalwood) ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ‘ಸಲಗ’ ರಾಜ್ಯಾದ್ಯಂತ ತೆರೆಕಂಡು ಹೌಸ್ಫುಲ್ (Housefull) ಪ್ರದರ್ಶನ ಕಾಣುತ್ತಿದೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ (Duniya Vijay direction) ಮಾಡಿರುವ ’ಸಲಗ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಕಿಲ್ಲರ್ ಕೊರೋನಾ ಬಳಿಕ ಸ್ಟಾರ್ ನಟನೊಬ್ಬನ ಸಿನಿಮಾ ತೆರೆಗೆ ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ (Movie Fans) ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ನಿನ್ನೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕ ಮಹಾಪ್ರಭುಗಳು ಏನಂತಾರೆ? ಡಾಲಿ ಧನಂಜಯ್ (Dhanajay), ದುನಿಯಾ ವಿಜಯ್ ಕಾಂಬೋ ವರ್ಕೌಟ್ ಆಗಿದ್ಯಾ? ವಿಜಯ ನಿರ್ದೇಶನಕ್ಕೆ ಎಷ್ಟು ಮಾರ್ಕ್ಸ್? ಇಲ್ಲಿದೆ ನೋಡಿ...
ರೌಡಿಸಂನ ಕ‘ರಾ’ಳತೆ ಬಿಚ್ಚಿಟ್ಟ ಸಿನಿಮಾ
‘ಸಲಗ’ ಸಿನಿಮಾದ ಟೀಸರ್, ಪೋಸ್ಟರ್ಗಳನ್ನ ನೋಡಿದಾಗಲೇ ಇದೊಂದು ಪಕ್ಕಾ ರೌಡಿಸಂ ಸಿನಿಮಾ ಅನ್ನೋದು ಗೊತ್ತಿತ್ತು. ಆದರೆ ಸಿನಿಮಾದಲ್ಲಿ ರೌಡಿಸಂ ಆಳ-ಅಗಲ ಎಷ್ಟಿದೆ ಅನ್ನುವುದನ್ನ ಸಖತ್ ‘ರಾ’ ಆಗಿ ತೋರಿಸಲಾಗಿದೆ. ’ಸಲಗನನ್ನ ನಾನು ಹೊಡಿತೀನಿ, ನಾನು ಸಾಯಿಸ್ತಿನಿ, ಸಲಗ ನನ್ನ ಬೇಟೆ’ ಎಂಬ ಡೈಲಾಗ್ಗಳಿಂದಲೇ ಆರಂಭವಾಗುವ ಸಿನಿಮಾ ಭೂಗತ ಲೋಕದ ಕರಾಳ ವ್ಯವಸ್ಥೆಯನ್ನ ಎಳೆ ಎಳೆಯಾಗಿ ಬಿಚ್ಚಿಡುತ್ತೆ. ರಕ್ತದೋಕುಳಿ ನಡುವೆ ಒಂದು ಫ್ಲಾಶ್ಬ್ಯಾಕ್, ಆ ಫ್ಲಾಶ್ಬ್ಯಾಕ್ನಲ್ಲಿ ಸಮಾಜಕ್ಕೆ ಒಂದು ಮೆಸೇಜ್. ಜೊತೆಗೆ ಒಳ್ಳೆಯ ಎಂಟರ್ಟೈನ್ಮೆಂಟ್. ಒಂದು ಸಿನಿಮಾಗೆ ಬೇಕಿರುವ ಎಲ್ಲ ಅಂಶಗಳು ಸಲಗ ಸಿನಿಮಾದಲ್ಲಿದೆ. ಆದರೆ ರಕ್ತಪಾತದ ಅಬ್ಬರ ಕೊಂಚ ಹೆಚ್ಚಾಗಿಯೇ ಇದೆ.
ಇದನ್ನೂ ಓದಿ: ಸಂತೋಷ್ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಹೋದ Salaga: 300 ಚಿತ್ರಮಂದಿರಗಳಲ್ಲಿ 1,200 ಶೋಗಳು..!
‘ಸಲಗ’ನ ಸುತ್ತ ಸುತ್ತುವ ಕಥೆ
ಜೈಲಿನಲ್ಲೇ ಕೂತು ಬೆಂಗಳೂರನ್ನೇ ಆಳುವ ಸಲಗ. ಒಳಗೆ ಇದ್ದೆ, ತನ್ನ ವಿರುದ್ಧ ತೊಡೆ ತಟ್ಟಿದವರ ಕಥೆ ಮುಗಿಸಿ ಮೆರೆದಾಡುವ ಸಲಗ. ಇತ್ತ ಆತ ರಿಲೀಸ್ ಆದರೆ ಕೊಚ್ಚಿ ಹಾಕಬೇಕೆಂಬ ಹಸಿದ ತೋಳಗಳಂತೆ ಕಾಯುವ ರೌಡಿಗಳು. ಸಲಗ ರಿಲೀಸ್ ಬಳಿಕ ಸಾಯಿಸಲು ಸ್ಕೆಚ್ ಹಾಕಿದ್ದವರ ಕಥೆಯೇ ಮುಗಿಸುವ ಹೀರೋ .ಇದರ ಮಧ್ಯೆ ರೌಡಿ ಪಡೆಗಳಿಗೆ ನಿಂತಲ್ಲೇ ಪ್ಯಾಂಟ್ ಒದ್ದೆ ಮಾಡಿಸುವ ಖಡಕ್ ಪೊಲೀಸ್ ಅಧಿಕಾರಿ. ಮದುವೆಯಾದರೆ ಸಲಗನನ್ನೇ ಆಗಬೇಕು ಅನ್ನುವ ಹುಡುಗಿ. ಕಡೆಗೆ ಸಲಗ ರೌಡಿಸಂಗೆ ಬರಲು ಕಾರಣವೇನು ಅನ್ನುವ ಫ್ಲಾಶ್ಬ್ಯಾಕ್. ಇದಿಷ್ಟು ಸಲಗ ಸಿನಿಮಾದ ಪ್ರಮುಖ ಅಂಶಗಳು. ಸಲಗ ರೌಡಿಯಾಗಿದ್ದೇಕೆ ಎಂದು ತಿಳಿದುಕೊಳ್ಳುವುದರ ಜೊತೆಗೆ ಸಮಾಜದ ಕ್ರೂರ ಮುಖವನ್ನ ಅನಾವರಣ ಮಾಡಲಾಗಿದೆ. ಈ ಸಮಾಜ, ಕಾನೂನು ವ್ಯವಸ್ಥೆ ಒಬ್ಬ ವ್ಯಕ್ತಿಯನ್ನ ಹೇಗೆ ರೌಡಿ ಮಾಡಲಾಗುತ್ತೆ ಅಂತ ತೋರಿಸಲಾಗಿದೆ.
ವಿಜಯ್ ಮೊದಲ ಪ್ರಯತ್ರಕ್ಕೆ ಫುಲ್ ಮಾರ್ಕ್ಸ್
ನಿರ್ದೇಶಕನಾಗಿ ಮೊದಲ ಯತ್ನದಲ್ಲಿ ದುನಿಯಾ ವಿಜಯ ಅವರ ಪರಿಶ್ರಮ ಎದ್ದು ಕಾಣುತ್ತೆ. ಸಿನಿಮಾದ ಪ್ರತಿ ವಿಭಾಗದಲ್ಲೂ ವಿಜಯ್ ಕೆಲಸ ವರ್ಕೌಟ್ ಆಗಿದೆ. ಜನರ ನಾಡಿ ಮಿಡಿತವನ್ನ ಅರ್ಥಮಾಡಿಕೊಂಡು ವಿಜಯ್ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಏನಿದ್ದರೆ ಜನ ನೋಡುತ್ತಾರೆ ಅನ್ನುವುದು ವಿಜಯ್ಗೆ ಚೆನ್ನಾಗಿ ತಿಳಿದಿದೆ. ವಿಜಯ್ ನಿರ್ದೇಶನ ಅವರ ಮೇಲೆ ಭರವಸೆ ಹುಟ್ಟಿಸುತ್ತದೆ. ಅವರ ನಟನೆಯೂ ಕೂಡ ಪಾತ್ರಕ್ಕೆ ತಕ್ಕಂತೆ ಗಾಂಭೀರ್ಯತೆಯಿಂದ ಕೂಡಿದೆ.
ಇದನ್ನೂ ಓದಿ: Duniya Vijay: Salaga ಚಿತ್ರತಂಡಕ್ಕೆ ಜೊತೆಯಾದ ಪುನೀತ್ ರಾಜ್ಕುಮಾರ್
ಕಲಾವಿದರ ಅದ್ಭುತ ನಟನೆಯೆ ಸಿನಿಮಾಗೆ ಪ್ಲಸ್
ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ 'ಡಾಲಿ' ಧನಂಜಯ್ ಮಿಂಚಿದ್ದಾರೆ. ಸಾವಿತ್ರಿ ಪಾತ್ರ ಮಾಡಿರುವ ಸುಧಿ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡುತ್ತಾರೆ. ಕೆಂಡ ಪಾತ್ರಧಾರಿ ಶ್ರೇಷ್ಠ ತೆರೆ ಮೇಲೆ ಇರುವಷ್ಟು ಸಮಯ ಅಬ್ಬರಿಸಿದ್ದಾರೆ. ಇನ್ನೂ ಯಶ್ ಶೆಟ್ಟಿ, ನೀನಾಸಂ ಅಶ್ವತ್ಥ್, ಚನ್ನಕೇಶವ, ಸಂಪತ್, ಜಹಾಂಗೀರ್, ಉಷಾ, ಕಾಂತರಾಜ್ ಎಲ್ಲರೂ ಕೂಡ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಲಗ ಫ್ಲಾಶ್ಬ್ಯಾಕ್ನಲ್ಲಿ ವಿಜಯ ಅವರ ಬಾಲ್ಯದ ಪಾತ್ರ ಮಾಡಿರುವ ಶ್ರೀಧರ್ ಸಿಕ್ಕ ಪಾತ್ರವನ್ನ ಬಳಸಿಕೊಂಡಿದ್ದಾರೆ. ಸಿನಿಮಾದ ಸೆಕೆಂಡ್ ಹಾಫ್ನಲ್ಲಿ ಶ್ರೀಧರ್ ಮಿಂಚಿದ್ದಾರೆ. ರೌಡಿಸಂ ಕಥೆ ಹೊಂದಿರುವ ಸಿನಿಮಾ ಆಗಿರುವುದರಿಂದ ಹೀರೋಯಿನ್ ಪಾತ್ರಕ್ಕೆ ಅಷ್ಟೊಂದು ಸ್ಕೋಪ್ ಇಲ್ಲ. ಕೆಲ ಸೀನ್ಗಳಿಗಷ್ಟೇ ನಟಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಾರೆ.
‘ಸಲಗ’ ಸಿನಿಮಾದ ರಿಯಲ್ ಹೀರೋ ಚರಣ್ ರಾಜ್
ಸಿನಿಮಾದ ಮೊದಲ ದೃಶ್ಯದಿಂದ ಕೊನೆ ದೃಶ್ಯದವರೆಗೂ ಕಣ್ಣಿಗೆ ಕಾಣಿಸದಿದ್ದರೂ ಚರಣ್ ರಾಜ್ ಸಖತ್ ಸೌಂಡ್ ಮಾಡಿದ್ದಾರೆ. ತಮ್ಮ ವಿಭಿನ್ನ ಮ್ಯೂಸಿಕ್ನಿಂದಲೇ ಸಿನಿಮಾವನ್ನ ತೂಗಿಸಿಕೊಂಡು ಹೋಗಿದ್ದಾರೆ. ಸಿನಿಮಾದಲ್ಲಿ ಹಿನ್ನಲೆ ಸಂಗೀತವೇ ಹೈಲೆಟ್ಸ್. ಸೂರಿ ಅಣ್ಣ.. ಸಲಗ ಟೈಟಲ್ ಟ್ರ್ಯಾಕ್ ಹಾಡುಗಳು ಇಷ್ಟವಾಗುತ್ತೆ.
ಡೈಲಾಗ್ಸ್ಗಳೇ ಸಿನಿಮಾಗೆ ಪ್ಲಸ್- ಮೈನಸ್
ಹೌದು, ರೌಡಿಸಂ ಕಥಾಹಂದರ ಹಿನ್ನಲೆ ಸಂಭಾಷಣೆಯಲ್ಲಿ ಸಾಕಷ್ಟು ಅವಾಚ್ಯ ಶಬ್ದಗಳನ್ನ ಬಳಸಲಾಗಿದೆ. ಇದು ಫ್ಯಾಮಿಲಿ ಪ್ರೇಕ್ಷರಿಗೆ ಇರಿಸು ಮುರಿಸು ಉಂಟು ಮಾಡುತ್ತದೆ. 'ಟಗರು' ಸಿನಿಮಾದಿಂದ ಖ್ಯಾತಿ ಪಡೆದಿದ್ದ ಮಾಸ್ತಿ, ಸಂಭಾಷಣೆ ವಿಚಾರದಲ್ಲಿ ಇಲ್ಲೂ ಸದ್ದು ಮಾಡಿದ್ದಾರೆ. ಸಂಭಾಷಣೆಯೇ 'ಸಲಗ' ಚಿತ್ರದ ಪ್ಲಸ್ ಹಾಗೂ ಮೈನಸ್ ಎನ್ನಬಹುದು. ಶಿವಸೇನ ಕ್ಯಾಮರಾ ಹಿಂದೆ ತಮ್ಮ ಕೈಚಳಕ ತೋರಿದ್ದಾರೆ.
(ವರದಿ - ವಾಸುದೇವ್.ಎಂ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ