ಸ್ಯಾಂಡಲ್ವುಡ್ ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ, ಹಲವು ಏಳು ಬೀಳುಗಳ ಬಳಿಕ ಕೆಲ ವರ್ಷಗಳಿಂದ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ. ಇನ್ನು ಈ ಟ್ರ್ಯಾಕ್ ಬದಲಿಸಲು ಅವಕಾಶ ನೀಡದಂತೆ ಮುನ್ನುಗ್ಗಿ ಸಾಗಿದ್ದಾರೆ. ಈ ವರ್ಷ ಕನ್ನಡದಲ್ಲಿ ಅರ್ಧ ಡಜನ್ಗೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವುದಲ್ಲದೇ ತೆಲುಗು ಹಾಗೂ ತಮಿಳು ಭಾಷೆಗಳಿಗೂ ಡೆಬ್ಯೂ ಮಾಡುತ್ತಿದ್ದಾರೆ. ಅದರ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ ನಟ ಧನಂಜಯ. ಹೌದು, ಡಾಲಿ ಪಿಕ್ಚರ್ಸ್ ಬ್ಯಾನರ್ನ ಅಡಿಯಲ್ಲಿ ಈಗಾಗಲೇ ಬಡವ ರ್ಯಾಸ್ಕಲ್ ಸಿನಿಮಾ ನಿರ್ಮಿಸುತ್ತಿರುವ ಧನಂಜಯ ಅದರ ಬೆನ್ನಲ್ಲೇ ಹೆಡ್ ಬುಶ್ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಬೆಂಗಳೂರಿನ ಮಾಜಿ ಡಾನ್ ಎಂಪಿ ಜೈರಾಜ್ ಜೀವನಾಧಾರಿತ ಹೆಡ್ ಬುಶ್ ಚಿತ್ರವನ್ನು ಅಶು ಬೆದ್ರಾ ನಿರ್ಮಿಸಬೇಕಿತ್ತು. ಆದರೆ ಅವರು ಕಾರಣಾಂತರಗಳಿಂದ ಕೊನೆಯ ಹಂತದಲ್ಲಿ ಹಿಂದೆ ಸರಿದ ಕಾರಣ ಸೋಮಣ್ಣ ಟಾಕೀಸ್ ಜೊತೆ ಸೇರಿ ಧನಂಜಯ ಅವರೇ ಈ ಸಿನಿಮಾ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಯೋಪಿಕ್ಗೆ ಶೂನ್ಯ ಆಕ್ಷನ್ ಕಟ್ ಹೇಳುತ್ತಿದ್ದು, ನಾಳೆಯಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಡಾಲಿ ಧನಂಜಯ್ ಅಭಿನಯದ ಹೆಡ್ ಬುಶ್ಗೆ ನಾಯಕಿಯಾಗಿ ತೆಲುಗು ಹಾಗೂ ಪಂಜಾಬಿ ಸಿನಿಮಾಗಳಲ್ಲಿ ನಟಿಸಿರುವ ಪಾಯಲ್ ರಜಪೂತ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆರ್ಎಕ್ಸ್ 100, ಆರ್ಡಿಎಕ್ಸ್ ಲವ್, ವೆಂಕಿ ಮಾಮಾ, ಡಿಸ್ಕೋ ರಾಜ, ಅನಗನಗಾ ಓ ಅತಿಥಿ ಸೇರಿದಂತೆ ಹಲವು ಪಂಜಾಬಿ ಸಿನಿಮಾಗಳಲ್ಲೂ ನಟಿಸಿರುವ ಪಾಯಲ್ ಇತ್ತೀಚೆಗಷ್ಟೇ ಏಂಜೆಲ್ ಚಿತ್ರದ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟಿದ್ದರು. ಅದರ ಬೆನ್ನಲ್ಲೇ ಈಗ ಹೆಡ್ ಬುಶ್ ಮುಖೇನ ಸ್ಯಾಂಡಲ್ವುಡ್ ಡೆಬ್ಯೂ ಮಾಡುತ್ತಿದ್ದಾರೆ.
ಇನ್ನು 1960ರಿಂದ 80ರ ದಶಕಗಳಲ್ಲಿ ನಡೆಯುವ ಕಥೆಯಾದ ಕಾರಣ ಕೋಲಾರ ಹಾಗೂ ಮೈಸೂರಿನ ಕೆಲ ಭಾಗಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಹೆಡ್ ಬುಶ್ ಚಿತ್ರಕ್ಕಾಗಿಯೇ ಹಲವು ತಿಂಗಳ ಕಾಲ ವರ್ಕೌಟ್ ಮಾಡಿ ಬಾಡಿ ಬಿಲ್ಡ್ ಮಾಡಿಕೊಂಡಿದ್ದಾರೆ ನಟ ಧನಂಜಯ. ಸಿನಿಮಾ ಎರಡು ಭಾಗಗಳಲ್ಲಿ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: Shwetha Srivatsav: ಫೋಟೋಶೂಟ್ನಲ್ಲಿ ಮಗಳ ಜೊತೆ ಮಿಂಚಿದ ಶ್ವೇತಾ ಶ್ರೀವಾತ್ಸವ
ಆಗಸ್ಟ್ 20ರಂದು ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ತೆರೆಗೆ ಬರಲಿದ್ದು, ಅದರಲ್ಲೂ ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದಾಗುತ್ತಲೇ ಶಂಕರ್ ಗುರು ಆಕ್ಷನ್ ಕಟ್ ಹೇಳಿರುವ ಧನಂಜಯ ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ ಬಡವ ರ್ಯಾಸ್ಕಲ್ ಸೆಪ್ಟೆಂಬರ್ 24ರಂದು ರಿಲೀಸ್ ಆಗಲಿದೆ. ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇದನ್ನೂ ಓದಿ: Bigg Boss Winner: ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಇವರೇ ನೋಡಿ..!
ಸದ್ಯ ಡಾಲಿ ಧನಂಜಯ ಶಿವ ರಾಜ್ಕುಮಾರ್ ನಟಿಸುತ್ತಿರುವ ಬೈರಾಗಿ, ಡಾಲಿ, ತೋತಾಪುರಿ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅರ್ಧ ಡಜನ್ಗೂ ಹೆಚ್ಚು ಕನ್ನಡ ಸಿನಿಮಾಗಳ ಜೊತೆಗೆ ಡಾಲಿ ಧನಂಜಯ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿರುವ ಪುಷ್ಪ ಚಿತ್ರದ ಮೂಲಕ ಟಾಲಿವುಡ್ ಡೆಬ್ಯೂ ಮಾಡುತ್ತಿದ್ದಾರೆ. ಅದರ ಬೆನ್ನಲ್ಲೇ ತಮಿಳಿಗೂ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ