ಬಾಹುಬಲಿ ನಂತರ ರಾಜಮೌಳಿ ಅವರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್ಆರ್ಆರ್. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಕೋಮರಾಮ್ ಭೀಮ್ ಹಾಗೂ ರಾಮ್ ಚರಣ್ ತೇಜ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ರಾಮ್ ಚರಣ್ ತೇಜ ಅವರ ಹುಟ್ಟುಹಬ್ಬಕ್ಕೆ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಮಾಡಲಾಗಿತ್ತು. ಆ ವಿಡಿಯೋಗೆ ಜೂನಿಯರ್ ಎನ್ಟಿಆರ್ ಮಾತುಕೊಟ್ಟಂತೆ ಅವರೇ ಕಂಠದಾನ ಮಾಡಿದ್ದರು. ಇನ್ನು ಅದರಂತೆಯೇ ಜೂನಿಯರ್ ಎನ್ಟಿಆರ್ ಅವರ ಹುಟ್ಟುಹಬ್ಬಕ್ಕೆ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ ಕೊರೋನಾ ಲಾಕ್ಡೌನ್ನಿಂದಾಗಿ ಅದು ಸಾಧ್ಯವಾಗಲಿಲ್ಲ. ಎಲ್ಲರೂ ಮನೆಗಳಲ್ಲೇ ಲಾಕ್ ಆಗಿದ್ದ ಕಾರಣದಿಂದ ರಾಮ್ ಚರಣ್ ಸಹ ಆಗ ಕಂಠದಾನ ಮಾಡಲಾಗಿರಲಿಲ್ಲ. ಇದರಿಂದಾಗಿ ಮೇ 20ರಿಂದ ಇಲ್ಲಿಯವರೆಗೆ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಕಾತರರಾಗಿ ಕಾಯುತ್ತಲೇ ಇದ್ದಾರೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.
ಐದು ತಿಂಗಳ ನಂತರ ಆರ್ಆರ್ಆರ್ ಚಿತ್ರತಂಡ ಜೂನಿಯರ್ ಎನ್ಟಿಆರ್ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಮಾಡಿದೆ. ಆದರೆ ಹೇಳಿದ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ರಿಲೀಸ್ ಆಗಿದೆ.
ಈ ವಿಶೇಷ ವಿಡಿಯೋ ರಿಲೀಸ್ ಆಗುವ ಒಂದು ದಿನ ಮೊದಲೇ ಜೂ.ಎನ್ಟಿಆರ್ ಅಭಿಮಾನಿಗಳು ಟ್ವಿಟರ್ನಲ್ಲಿ ಈ ವಿಷಯವನ್ನು ಟ್ರೆಂಡ್ ಮಾಡಲಾರಂಭಿಸಿದ್ದಾರೆ. ನಿನ್ನೆಯಿಂದಲೇ ಈ ವಿಷಯ ಟ್ರೆಂಡಿಂಗ್ನಲ್ಲಿದೆ. ಎಲ್ಲೆಡೆ ಈಗ ಭೀಮ್ ಮೇನಿಯಾ ಸದ್ದು ಮಾಡುತ್ತಿದೆ.
ಇನ್ನು ಇದೇ ತಿಂಗಳ ಆರಂಭದಲ್ಲಿ ರಾಜಮೌಳಿ ಅವರು ಸಿನಿಮಾ ಚಿತ್ರೀಕರಣದ ಕೆಲಸ ಆರಂಭಿಸುತ್ತಿದ್ದಂತೆಯೇ ಒಂದು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಜೂನಿಯರ್ ಎನ್ಟಿಆರ್ ಅವರ ಪಾತ್ರ ಪರಿಚಯಿಸುವ ವಿಡಿಯೋ ರಿಲೀಸ್ ದಿನಾಂಕವನ್ನು ಪ್ರಕಟಿಸಿದ್ದರು.
ರಾಮ್ ಚರಣ್ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋವನ್ನು ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡಲಾಗಿತ್ತು. ಆ ವಿಡಿಯೋಗೆ ಜೂನಿಯರ್ ಎನ್ಟಿಆರ್ ಕಂಠದಾನ ಮಾಡಿದ್ದರು. ಮಲಯಾಳಂ ಒಂದನ್ನು ಬಿಟ್ಟು ಉಳಿದ ಎಲ್ಲ ಭಾಷೆಗಳಲ್ಲೂ ಜೂನಿಯರ್ ಎನ್ಟಿಆರ್ ಅವರೇ ಹಿನ್ನೆಲೆ ಧ್ವನಿ ನೀಡಿದ್ದರು.
ರಾಜಮೌಳಿ ನಿರ್ದೇಶನದ ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ-ನಟಿಯರಾದ ಅಜಯ್ ದೇವಗನ್, ಆಲಿಯಾ ಭಟ್ ಸಹ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ