ರಾಬರ್ಟ್ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ 50 ಕೋಟಿ ಕ್ಲಬ್ ಸೇರಿದೆ. ಕನ್ನಡದಷ್ಟೇ ತೆಲುಗಿನಲ್ಲಿಯೂ ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರದ ನಿರೂಪಣೆ ಮೂಲಕವೇ ಪ್ರೇಕ್ಷಕರನ್ನು ಸೆಳೆದಿರುವ ರಾಬರ್ಟ್ ಯಶಸ್ವಿ ಪ್ರದರ್ಶನದ ಹಿನ್ನಲೆ ಇಂದು ಚಿತ್ರತಂಡ ಸಕ್ಸಸ್ ಮೀಟ್ ನಡೆಸಿದೆ. ನಟ ದರ್ಶನ್ ಸೇರಿದಂತೆ ಚಿತ್ರ ತಂಡಕ್ಕೆ ನಿರ್ದೇಶಕ ತರುಣ್ ಕಿಶೋರ್ ಧನ್ಯವಾದ ತಿಳಿಸಿದ್ದಾರೆ. ಲಾಕ್ಡೌನ್ ಸಡಿಲಗೊಂಡ ಬಳಿಕ ಅದ್ದೂರಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು, ರಾಬರ್ಟ್ ಪಾತ್ರವನ್ನು ದರ್ಶನ್ಗಾಗಿಯೇ ಸೃಷ್ಟಿಸಿದ್ದಾಗಿ ತಿಳಿಸಿದರು. ಅಲ್ಲದೇ ದರ್ಶನ್ ಅವರಿಗೆ ಇದು 52ನೇ ಸಿನಿಮಾವಾದರೆ, ತಮಗೆ ದರ್ಶನ್ ಜೊತೆ ಇದು ಎರಡನೇ ಚಿತ್ರ. ಚೌಕ ಸಿನಿಮಾ ಚಿತ್ರೀಕರಣದ ವೇಳೆಯೇ ಅವರಿಗೆ ಒನ್ಲೈನ್ ಸ್ಟೋರಿ ಹೇಳಿದ್ದು, ಆಗಲೇ ಅವರು ಕತೆ ಒಪ್ಪಿಕೊಂಡಿದ್ದರು ಎಂದು ಸಿನಿಮಾ ಹುಟ್ಟಿದ ಕ್ಷಣದ ಬಗ್ಗೆ ತಿಳಿಸಿದರು.
ಮಲ್ಟಿಫ್ಲೆಕ್ಸ್ನಲ್ಲಿ ದರ್ಶನ್ ಸಿನಿಮಾ ಓಡಲ್ಲ ಎಂದಿದ್ರು
ಚಿತ್ರದ ಯಶಸ್ಸಿನ ಬಗ್ಗೆ ಮಾತು ಆರಂಭಿಸಿದ ನಟ ದರ್ಶನ್, ನನ್ನ ಸಿನಿಮಾಗಳು ಮಲ್ಟಿ ಫ್ಲೆಕ್ಸ್ಗಳಲ್ಲಿ ಓಡಲ್ಲ ಅಂತಿದ್ರು. ಈಗ 4 ದಿನದಲ್ಲಿ 46 ಲಕ್ಷ ರೂಪಾಯಿ ಮಲ್ಟಿಫಕ್ಸ್ನಿಂದ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನು ಓದಿ: ವೇಷ ಬದಲಿಸಿಕೊಂಡು ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ನೋಡಿದ ದರ್ಶನ್: 50 ಕೋಟಿ ಕ್ಲಬ್ ಸೇರಿದ ರಾಬರ್ಟ್ ..!
ಇದೇ ವೇಳೆ ನಿರ್ಮಾಪಕರಿ ಕಿವಿಮಾತು ಹೇಳಿದ ಅವರು, ಮುಂದೆ ನನ್ನ ಬಳಿ ಬರೋ ನಿರ್ಮಾಪಕರು ದಯಮಾಡಿ ವಿತರಣೆ ಮಾಡುವುದಕ್ಕೆ ಮಾತ್ರ ಬನ್ನಿ. ಇದನ್ನು ಎಚ್ಚರಿಕೆ ಅಂದುಕೊಂಡ್ರೂ ತಪ್ಪಲ್ಲ. ಯಜಮಾನ ಸಿನಿಮಾಗೆ ಹೀಗೇ ಆಗಿದ್ದು. ಒಡೆಯ ಸಿನಿಮಾದ 4 ಕೋಟಿ ರೂಪಾಯಿ ಇನ್ನೂ ವಿತರಕರಿಂದ ಬಂದಿಲ್ಲ. 53 ಸಿನಿಮಾ ಆಯ್ತು, ಈಗ ಇನ್ನೂ ಸಿನಿಮಾ ಬ್ಯುಸಿನೆಸ್ ಕಲಿತಿದೀನಿ. ಯಜಮಾನ ಚಿತ್ರದ್ದೂ ಹೀಗೆ ಯಾಮಾರಿಸಿದ್ದಾರೆ. ಅದಕ್ಕೇ ಹೇಳ್ತಿದೀನಿ ವಿತರಣೆ ಮಾಡೋಕಾದ್ರೆ ಬನ್ನಿ. ನಾವು ಲೈಟ್ ಮ್ಯಾನ್ ಗೆ 500 ರೂಪಾಯಿ ಕೊಡೋಕೇ ಒದ್ದಾಡುತ್ತಿರುತ್ತೇವೆ. ಅಲ್ಲಿ ಕೋಟಿ ರೂಪಾಯಿ ಹೊಡೆದುಕೊಂಡು ಹೋಗಿರುತ್ತಾರೆ ಇದೇ ಹಿನ್ನಲೆಯಿಂದ ಈ ಮನವಿ ಎಂದರು.
ಚಿತ್ರರಂಗ ಬೆಳಿಬೇಕು:
ಯಜಮಾನ ಸಿನಿಮಾ ಮೊದಲನೇ ದಿನವೇ ಪೈರಸಿ ಆಗಿತ್ತು. ಒಬ್ಬ ಹುಡುಗನನ್ನು ನಮ್ಮ ಹುಡುಗರು ಹಿಡಿದುಕೊಂಡು ಬಂದಿದ್ದರು. ಅವನು ಲಿಂಕ್ ಶೇರ್ ಮಾಡಿದ್ದ ಅಷ್ಟೇ . ಅವನನ್ನು ಪೊಲೀಸ್ ಠಾಣೆಯಿಂದ ನಮ್ಮ ನಿರ್ಮಾಪಕರೇ ಬಿಡಿಸಿಕೊಂಡು ಬಂದರು ಅವನು ಜೈಲನ್ನೇ ಜೀವನದಲ್ಲಿ ನೋಡಿರಲಿಲ್ಲ. ನಾನು ನನ್ನ ಫ್ಯಾನ್ಸ್ ನ ಬಿಟ್ಟುಕೊಡಲ್ಲ. ಈ ತರ ಜಗಳಗಳು ಬೇಡ. ಚಿತ್ರರಂಗ ಬೆಳೆಯಬೇಕು ಎಂದರು.
(ಮಾಹಿತಿ : ಹರ್ಷವರ್ಧನ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ