ಕೊರೋನಾ ವೈರಸ್ ಭೀತಿಯಿಂದ ಈಗಾಗಲೇ ಬಾಲಿವುಡ್-ಸ್ಯಾಂಡಲ್ವುಡ್ ಸ್ತಬ್ಧವಾಗಿದೆ. ಆದರೆ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಫುಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಉಪೇಂದ್ರ ಅಭಿನಯದ ಕಬ್ಜ ಕೂಡ ಇದೀಗ ಚಿತ್ರೀಕರಣ ಸ್ಥಗಿತಗೊಳಿಸಿದೆ.
500 ಕ್ಕೂ ಅಧಿಕ ಜನರನ್ನು ಹೊಂದಿದ್ದ ಕಬ್ಜ ಚಿತ್ರವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿರಲಿಲ್ಲ. ಆದರೆ ಮುಂದಿನ ಚಿತ್ರೀಕರಣಕ್ಕೆ ಮತ್ತಷ್ಟು ಕಲಾವಿದರು ಸೆಟ್ಗೆ ಆಗಮಿಸಬೇಕಿದೆ. ಆದರೆ ನಮ್ಮ ಉದ್ದೇಶಕ್ಕಾಗಿ ಅವರಿಗೆ ಅಪಾಯ ತಂದೊಡ್ಡುವುದು ಸರಿಯಲ್ಲ. ವೈರಸ್ ಹರಡುವಿಕೆ ತಡೆಗಟ್ಟಲು ಈಗಾಗಲೇ ಸರ್ಕಾರ ಕೂಡ ಮುಂದಾಗಿದೆ. ಹಾಗೆಯೇ ಸರ್ಕಾರ ನೀಡಿದ ಆದೇಶಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ಹೀಗಾಗಿ ಚಿತ್ರೀಕರಣ ನಿಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ನಿರ್ದೇಶಕ ಚಂದ್ರು ತಿಳಿಸಿದ್ದಾರೆ.
ಸದ್ಯ ಒಂದು ವಾರಗಳ ಕಾಲ ಶೂಟಿಂಗ್ ನಿಲ್ಲಿಸಲಾಗಿದ್ದು, ಆ ಬಳಿಕ ಬೆಂಗಳೂರಿನ ಮಿನರ್ವ ಮಿಲ್ಸ್ನಲ್ಲಿ ದೊಡ್ಡ ಸೆಟ್ನಲ್ಲಿ ಚಿತ್ರೀಕರಣ ಮುಂದುವರೆಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಕಬ್ಜ ನಿರ್ದೇಶಕರು ಹೇಳಿದ್ದಾರೆ.
ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಈ ಚಿತ್ರವು 1980 ದಶಕದ ಗ್ಯಾಂಗ್ಸ್ಟರ್ ಕಥೆ ಹೇಳಲಿದ್ದು, ಈ ಚಿತ್ರವನ್ನು 7 ಭಾಷೆಗಳಲ್ಲಿ ತೆರೆಗೆ ತರಲು ಆರ್.ಚಂದ್ರು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಉಪ್ಪಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್ ರಾವ್, ಜಯ ಪ್ರಕಾಶ್, ಕಾಟ್ ರಾಜು, ಸುಬ್ಬರಾಜು, ಎಂ ಕಾಮರಾಜ್ ಮತ್ತು ಅವಿನಾಶ್ ಸೇರಿದಂತೆ ದೊಡ್ಡ ನಟ ನಟಿಯರ ದಂಡೇ ಇದೆ.
ಪ್ಯಾನ್ ಇಂಡಿಯಾ ಸಿನಿಮಾ ಮಾದರಿಯಲ್ಲಿ ಮೂಡಿ ಬರುತ್ತಿರುವ ಕಬ್ಜಗೆ ಸಂಗೀತ ನೀಡುತ್ತಿರುವುದು ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಎಂಬುದು ಮತ್ತೊಂದು ವಿಶೇಷ. ಅಂದಹಾಗೆ ಕಬ್ಜ ಅಲ್ಲದೆ, ಯುವರತ್ನ ಸೇರಿದಂತೆ ಕನ್ನಡದ ಒಂದಷ್ಟು ಸಿನಿಮಾಗಳು ಈಗಾಗಲೇ ಶೂಟಿಂಗ್ ನಿಲ್ಲಿಸಿದ್ದು, ಭಯದ ವಾತಾವರಣ ನೀಗಿದ ಬಳಿಕ ಶೂಟಿಂಗ್ ಪುನರಾರಂಭಿಸಲು ತೀರ್ಮಾನಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ