ಭೂಗತ ದೊರೆ ಮುತ್ತಪ್ಪ ರೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರಲಿದೆ ಎಂದು ಬಹಳ ಸಮಯದಿಂದ ಹೇಳಲಾಗುತ್ತಿತ್ತು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರು ಕಳೆದ ಮೇ ತಿಂಗಳಿನಲ್ಲಿ ಅಗಲಿದರು. ಆಗಿನಿಂದಲೇ ಅವರ ಬಯೋಪಿಕ್ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿತ್ತು. ಈಗ ಅದಕ್ಕೆ ಕಾಲಕೂಡಿ ಬಂದಿದೆ. ರಾಮನಗರದ ಶಿಲ್ಹಾಂದರ ರೆಸಾರ್ಟ್ನಲ್ಲಿ ಮುತ್ತಪ್ಪ ರೈ ಜೀವನಾಧರಿತ ಚಿತ್ರದ ಮರ್ಹೂತ ನೆರವೇರಿತು. ಎಂ ಆರ್ ಎಂದು ಈ ಸಿನಿಮಾಗೆ ಶೀರ್ಷಿಕೆ ನೀಡಲಾಗಿದೆ. ಸೌಭಾಗ್ಯ ಲಕ್ಷ್ಮೀ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂಆರ್ ಚಿತ್ರ ಮೂಡಿ ಬರುತ್ತಿದ್ದು, ಚಿತ್ರಕ್ಕೆ ರವಿ ಶ್ರೀವತ್ಸ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಡೆಡ್ಲಿಸೋಮ ಚಿತ್ರದ ನಿರ್ಮಾಪಕರಾದ ಶೋಭರಾಜ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ನಿರ್ಮಾಪಕರ ಮಗ ದೀಕ್ಷಿತ್ , ಮುತ್ತಪ್ಪ ರೈ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ನಿನ್ನೆ ರಾಮನಗರ ರೆಸಾರ್ಟ್ನಲ್ಲಿ ಚಿತ್ರದ ಫೋಟೋಶೂಟ್ ಜೊತೆಗೆ ಹೀರೋ ಎಂಟ್ರಿ ಸೀನ್ ಶೂಟ್ ಮಾಡಲಾಯಿತು. ಹೆಲಿಕಾಪ್ಟರ್ ಜೊತೆಗೆ ಹೈ-ಫೈ ಕಾರುಗಳ ಮೂಲಕ ನಾಯಕನ ಎಂಟ್ರಿ ಆಗುತ್ತದೆ. ಈ ದೃಶ್ಯದ ಚಿತ್ರೀಕರಣ ಮಾಡಲಾಯಿತು.
ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ದೇಶಕ ರವಿ ಶ್ರೀವತ್ಸ, ಮುತ್ತಪ್ಪ ರೈ ಅವರ ಜೀವನ ಚರಿತ್ರೆ ಚಿತ್ರದ ಮಾತುಕತೆಗೆಂದು ನಾನು ಅವರನ್ನ ಭೇಟಿಯಾಗಲು ಸಿಡ್ನಿಗೆ ಹೋಗಿದ್ದೆ. ಆದರೆ ಕಾರಣಾಂತರಗಳಿಂದ ಅವರ ಭೇಟಿ ಸಾಧ್ಯವಾಗಲಿಲ್ಲ. 20 ವರ್ಷಗಳಿಂದ ನಿರಂತರವಾಗಿ ಕಥೆ ಎಳೆದುಕೊಂಡು ಬಂದಿದ್ದೇನೆ, ಈಗ ಚಿತ್ರ ಸೆಟ್ಟೇರುತ್ತಿದೆ. 5 ತಿಂಗಳ ಶೂಟಿಂಗ್ ನಡೆಯಲಿದೆ ಎಂದಿದ್ದಾರೆ.
ಮುಂಬೈ, ದುಬೈ, ಮಂಗಳೂರು, ಪುತ್ತೂರು ಸೇರಿದಂತೆ ಬೆಂಗಳೂರಿನಲ್ಲೂ ಎಂಆರ್ ಸಿನಿಮಾದ ಶೂಟಿಂಗ್ ನಡೆಯಲಿದೆ. 3 ಹಂತದಲ್ಲಿ ಸಿನಿಮಾ ಮಾಡಲು ಪ್ಲಾನ್ ಮಾಡಲಾಗಿದೆಯಂತೆ. ಡೆಡ್ಲಿ ಸೋಮ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯ ಮಾಡಿದ್ದ ದೀಕ್ಷಿತ್ ಈ ಚಿತ್ರದ ಹೀರೋ ಆಗಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಇರಲಿದೆ. 1952 - 2020 ರವರೆಗಿನ ಮುತ್ತಪ್ಪ ರೈ ಜೀವನ ಚರಿತ್ರೆಯನ್ನ ಕುಟುಂಬಸ್ಥರ ಜೊತೆ ಚರ್ಚಿಸಿ ಸಿನಿಮಾ ತೆಗೆಯಲಾಗುತ್ತಿದೆಯಂತೆ.
ಚಿತ್ರದ ನಾಯಕನಾಗಿ ಅಭಿನಯಿಸುತ್ತಿರುವ ದೀಕ್ಷಿತ್ ಮಾತನಾಡಿ, ಮುತ್ತಪ್ಪ ರೈ ರವರ ಪಾತ್ರ ಮಾಡುತ್ತಿರುವುದು ನಿಜಕ್ಕೂ ಖುಷಿಯಿಂದ ವಿಚಾರ, ಈ ಸಿನಿಮಾವನ್ನ ರವಿಶ್ರೀವತ್ಸರವರು ನಿರ್ದೇಶಕ ಮಾಡ್ತಿರುವುದು ಇನ್ನೊಂದು ಖುಷಿ. ನಾನು ಸಹ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದೇನೆಂದು ಅಭಿಪ್ರಾಯಪಟ್ಟರು. ಇನ್ನು, ಇದೇ ಸಂದರ್ಭದಲ್ಲಿ ಮುತ್ತಪ್ಪ ರೈ ಜೊತೆಗೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ನಿರ್ದೇಶಕರ ಭಾವಚಿತ್ರಕ್ಕೆ ಗೌರವಸಲ್ಲಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ