ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಮಿಂಚಿದ ಬಳಿಕ ಕಿರಿಕ್ ಸುಂದರಿ, ಕರ್ನಾಟಕ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ಗೆ ಹಾರಿದ್ದಾರೆ. ಮೊದಲ ಬಾಲಿವುಡ್ ಸಿನಿಮಾ ತೆರೆಗೆ ಬರುವ ಮುನ್ನವೇ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದೂ ಅಂತಾ ಇಂತಾ ಸ್ಟಾರ್ ಜೊತೆಗಲ್ಲ. ಬದಲಾಗಿ ಭಾರತದ ಅತಿದೊಡ್ಡ ಸೂಪರ್ಸ್ಟಾರ್ ಬಿಗ್ಬಿ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ತಮ್ಮ ಎರಡನೇ ಹಿಂದಿ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಹೌದು, ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ಗಳಲ್ಲಿ ಮಿಂಚಿದ ಬಳಿಕ ಸದ್ಯ ಬಾಲಿವುಡ್ನತ್ತ ಮುಖ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಎರಡು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರ ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನೂ ಅನೌನ್ಸ್ ಆಗಿತ್ತು. ಶಾಂತನು ಬಗ್ಚೀ ಆಕ್ಷನ್ ಕಟ್ ಹೇಳುತ್ತಿರುವ ಈ ಸ್ಪೈ ಥ್ರಿಲ್ಲರ್ನಲ್ಲಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿದ್ದಾರೆ.
ಅದರ ಬೆನ್ನಲ್ಲೇ ರಶ್ಮಿಕಾ ಮತ್ತೊಂದು ಬಾಲಿವುಡ್ ಸಿನಿಮಾ ಏಪ್ರಿಲ್ 1ರಂದು ಸೆಟ್ಟೇರಿದೆ. ಹೆಸರು ಗುಡ್ಬೈ. ವಿಶೇಷ ಅಂದರೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಭಾನುವಾರವೇ ಅಮಿತಾಭ್ ಬಚ್ಚನ್ ಗುಡ್ಬೈ ಚಿತ್ರದ ಶೂಟಿಂಗ್ ಸೆಟ್ ಸೇರಿಕೊಳ್ಳಲಿದ್ದಾರೆ. ಚಿಲ್ಲರ್ ಪಾರ್ಟಿ, ಕ್ವೀನ್, ಶಾನ್ದಾರ್, ಸೂಪರ್ 30 ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ, ನಿರ್ಮಾಪಕ ವಿಕಾಸ್ ಬೆಹ್ಲ್ ಗುಡ್ಬೈಗೂ ಆಕ್ಷನ್ ಕಟ್ ಹೇಳಲಿದ್ದಾರೆ. ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.
https://twitter.com/iamRashmika/status/1377862272148676610?s=19
ಗುಡ್ಬೈ, ಕೌಟುಂಬಿಕ ಮೌಲ್ಯಗಳ ಸುತ್ತುವ ಕಥಾವಸ್ತುವಾಗಿದ್ದು, ಭಾವನೆಗಳಿಗೆ ಹಾಗೂ ಮನರಂಜನೆಗೆ ಎರಡಕ್ಕೂ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲೂ ಹೀಗಾಗಿತ್ತಲ್ವಾ ಎಂದುಕೊಳ್ಳುವಷ್ಟು ನೈಜತೆಯಿಂದ ಗುಡ್ಬೈ ಕಥೆ ಕೂಡಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನಿನ್ನೆ ಮುಹೂರ್ತವಾದ ಬೆನ್ನಲ್ಲೇ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಭಾನುವಾರ ಅರ್ಥಾತ್ ಏಪ್ರಿಲ್ 4ರಂದು ಬಿಗ್ಬಿ ಅಮಿತಾಭ್ ಬಚ್ಚನ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಸಿನಿಲೋಕದ ದಿಗ್ಗಜನೊಂದಿಗೆ ತೆರೆ ಹಂಚಿಕೊಳ್ಳಲಿರುವ ಸಂಭ್ರಮ ರಶ್ಮಿಕಾ ಮಂದಣ್ಣ ಅವರದು.
ಇನ್ನು ಗುಡ್ಬೈ ಚಿತ್ರದ ಮೂಲಕ ಹಿಂದಿ ಕಿರುತೆರೆ ಸ್ಟಾರ್ ಶಿವಿನ್ ನಾರಂಗ್ ಬಾಲಿವುಡ್ ಡೆಬ್ಯೂ ಮಾಡುತ್ತಿದ್ದಾರೆ. ಜೊತೆಗೆ ಪಲ್ಲವಿ ಗುಲಾಟಿ ಸಹ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಗುಡ್ಬೈ ಮುಂದಿನ ವರ್ಷ ರಿಲೀಸ್ ಆಗಲಿದೆ.
ಇದನ್ನೂ ಓದಿ: Malaika Arora: ಕೊರೋನಾ ಲಸಿಕೆ ಪಡೆದ ನಟಿ ಮಲೈಕಾ ಅರೋರಾ ಜನತೆಗೆ ನೀಡಿದ ಸಂದೇಶ ಏನು ಗೊತ್ತಾ?
ಕೆಲ ದಿನಗಳ ಹಿಂದಷ್ಟೇ ನಟ ಅಮಿತಾಭ್ ಬಚ್ಚನ್ ಕಣ್ಣಿನ ಸರ್ಜರಿಗೆ ಒಳಗಾಗಿದ್ದರು. ಇನ್ನು ಇತ್ತೀಚೆಗಷ್ಟೇ ಮೊದಲ ಡೋಸ್ ಕೊವಿಡ್ ಲಸಿಕೆ ಪಡೆದಿದ್ದು, ಕೆಲ ದಿನಗಳಿಂದ ರೆಸ್ಟ್ನಲ್ಲಿದ್ದಾರೆ. ಕಳೆದ ವರ್ಷ ಗುಲಾಬೋ ಸಿತಾಬೋ ಓಟಿಟಿ ರಿಲೀಸ್ ಬಳಿಕ ಮತ್ತೆ ಅಮಿತಾಭ್ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಈ ವರ್ಷ ಕಡಿಮೆ ಅಂದರೂ ಬಿಗ್ಬಿ ಅಮಿತಾಭ್ ಬಚ್ಚನ್ ನಟಿಸಿರುವ ಮೂರು ಚಿತ್ರಗಳು ರಿಲೀಸ್ ಆಗಲಿವೆ. ಈಗಾಗಲೇ ಚೆಹ್ರೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಝುಂಡ್, ಬ್ರಹ್ಮಾಸ್ತ್ರ ಸಿನಿಮಾಗಳೂ ಇದೇ ವರ್ಷ ರಿಲೀಸ್ ಆಗಲಿವೆ.
ಇನ್ನು ಈಗಾಗಲೇ ಕನ್ನಡದ ಪೊಗರು ಚಿತ್ರದಲ್ಲಿ ಈ ವರ್ಷ ಸಕ್ಸಸ್ ಕಂಡಿರುವ ರಶ್ಮಿಕಾ ಕೂಡ ತಮಿಳಿನ ಸುಲ್ತಾನ್, ತೆಲುಗಿನ ಪುಷ್ಪಾ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಾಗುತ್ತಲೇ ಬಾಲಿವುಡ್ ಡೆಬ್ಯೂ ಚಿತ್ರ ಮಿಷನ್ ಮಜ್ನೂ ರಿಲೀಸ್ಗೆ ರೆಡಿಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ