ಗಾಯಕಿ ರಾನು ಮಂಡಲ್ ವಿನಾಕಾರಣ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮೇಕಪ್ನಿಂದ ನೆಟ್ಟಿಗರ ಗಮನ ಸೆಳೆದಿದ್ದ ಗಾಯಕಿ, ಈ ಬಾರಿ ಕಾರ್ಯಕ್ರಮವೊಂದರಲ್ಲಿ ಹಾಡು ಮರೆತು ಹೋಗಿ ವೈರಲ್ ಆಗಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ರಾನು ಮಂಡಲ್ ವೇದಿಕೆಯ ಮೇಲೆ ಹಾಡಲು ನಿಂತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಹಾಡನ್ನು ಮರೆತುಬಿಟ್ಟರು. ಈ ವೇಳೆ ಇಂಗ್ಲಿಷ್ನಲ್ಲಿ ಮಾತನಾಡಲು ಯತ್ನಿಸಿ ಇದೀಗ ಟ್ರೋಲಿಗರ ಆಹಾರವಾಗಿದ್ದಾರೆ.
ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರ ಕಾರ್ಯಕ್ರಮದಲ್ಲಿ ರಾನು ಕಾಣಿಸಿಕೊಂಡಿದ್ದರು. ಸಂದರ್ಶನದ ಬಳಿಕ ರಾನು ಅವರನ್ನು ವೇದಿಕೆಯಲ್ಲಿ ಹಾಡಲು ಕೇಳಿಕೊಂಡಿದ್ದರು. 'ಹಿಮೇಶ್ ರೇಶಮ್ಮಿಯಾ ಅವರೊಂದಿಗೆ ಹಾಡಿದ ಹಾಡನ್ನು ನಾನು ಹಾಡಬೇಕೇ?' ಎಂದಾಗ ಅದೇ ಆಗಬಹುದು ಎಂದು ನಿರೂಪಕಿ ಹೇಳಿದರು. ಕೆಲ ನಿಮಿಷಗಳ ಕಾಲ ಹಾಡನ್ನು ಯೋಚಿಸಿದ ರಾನು, 'ಓ ದೇವರೇ, ನಾನು ಮರೆತಿದ್ದೇನೆ' ಎಂದು ಹೇಳಿದ್ದಾರೆ. ರಾನು ಅವರ ಇಂಗ್ಲಿಷ್ನ ತಪ್ಪುಗಳನ್ನೇ ಬಳಸಿಕೊಂಡ ಟ್ರೋಲಿಗರು ಇದೀಗ ಇಂಟರ್ನೆಟ್ ಸ್ಟಾರ್ರನ್ನು ಗೇಲಿ ಮಾಡುತ್ತಿದ್ದಾರೆ.
ಈ ಹಿಂದೆ ಕೂಡ ರಾನು ಅವರ ಮೇಕಪ್ ಅನ್ನು ಸಾಮಾಜಿಕ ತಾಣಗಳಲ್ಲಿ ಮೀಮ್, ಟ್ರೋಲ್ಗಳ ಮೂಲಕ ಅಪಹಾಸ್ಯ ಮಾಡಲಾಗಿತ್ತು. ಅಲ್ಲದೆ ಫೋಟೋ ಕ್ಲಿಕ್ಕಿಸಲು ಬಂದ ಅಭಿಮಾನಿಯೊಂದಿಗೆ ರಾನು ಕೋಪದಿಂದ ವರ್ತಿಸಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಇಂಟರ್ನೆಟ್ನಲ್ಲಿ ರಾನು ವಿಡಿಯೋ ವೈರಲ್ ಆಗುತ್ತಿದೆ. ಇದು ಕೂಡ ಟ್ರೋಲ್ ಮೂಲಕ ಎಂಬುದೇ ವಿಪರ್ಯಾಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ