ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ರಾನು ಮಂಡಲ್ ಈಗೇನು ಮಾಡ್ತಿದ್ದಾರೆ?

ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ.. ಹಾಡಿನ ಒಂದು ವಿಡಿಯೋ ರಾನು ಜೀವನವನ್ನೇ ಬದಲಿಸಿತ್ತು. ಅದರ ಬೆನ್ನಲ್ಲೇ ಬಾಲಿವುಡ್​ ಚಿತ್ರಗಳಿಗೆ ಹಾಡುವ ಅವಕಾಶಗಳು ಅರಸಿ ಬರುತ್ತಿದ್ದವು.

zahir | news18-kannada
Updated:February 28, 2020, 2:46 PM IST
ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ರಾನು ಮಂಡಲ್ ಈಗೇನು ಮಾಡ್ತಿದ್ದಾರೆ?
Ranu mondal
  • Share this:
ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿ ಬಾಲಿವುಡ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ರಾನು ಮಂಡಲ್ ಹೀಗೇನು ಮಾಡುತ್ತಿದ್ದಾರೆ? ಇಂತಹದೊಂದು ಪ್ರಶ್ನೆ ಹಲವರಲ್ಲಿದೆ. ಏಕೆಂದರೆ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಹಾಡುತ್ತಿದ್ದ ರಾನು ಅವರನ್ನು ಸೋಷಿಯಲ್ ಮೀಡಿಯಾ ಒಂದೇ ದಿನಕ್ಕೆ ಸ್ಟಾರ್ ಸಿಂಗರ್ ಆಗಿಸಿತ್ತು.

ಲತಾ ಮಂಗೇಶ್ಕರ್ ಅವರ 'ಏಕ್ ಪ್ಯಾರ್ ಕಾ ನಗ್ಮಾ ಹೈ'.. ಹಾಡಿನ ಒಂದು ವಿಡಿಯೋ ರಾನು ಜೀವನವನ್ನೇ ಬದಲಿಸಿತ್ತು. ಅದರ ಬೆನ್ನಲ್ಲೇ ಬಾಲಿವುಡ್​ ಚಿತ್ರಗಳಿಗೆ ಹಾಡುವ ಅವಕಾಶಗಳು ಅರಸಿ ಬರುತ್ತಿದ್ದವು. ಅದರಲ್ಲೂ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರ 'ಹ್ಯಾಪಿ ಹಾರ್ಡಿ ಮತ್ತು ಹೀರ್' ಚಿತ್ರದ ತೇರಿ ಮೇರಿ ಕಹಾನಿ ಗೀತೆಗೆ ತಮ್ಮ ಮಧುರ ಕಂಠ ನೀಡಿದ್ದರು.

ಚೊಚ್ಚಲ ಹಾಡಿಗೆ ರಾನುಗೆ ಹಿಮೇಶ್ ರೇಶ್ಮಿಯಾ 7 ಲಕ್ಷ ರೂ ಸಂಭಾವನೆ ನೀಡಿದ್ದಾರೆ ಎಂದು ವರದಿಯಾಗಳಾಗಿದ್ದವು. ಆ ಬಳಿಕ ಹಿಂದಿ, ಮಲಯಾಳಂ, ಬೆಂಗಾಲಿ ಚಾನೆಲ್​ಗಳಲ್ಲಿ ಮುಖ್ಯ ಅತಿಥಿಯಾಗಿ ಹಾಡುಗಳನ್ನು ಹಾಡುತ್ತಾ ಒಂದಷ್ಟು ಹಣವನ್ನು ಕೂಡ ಸಂಪಾದಿಸಿದ್ದರು.

ಆದರೆ ಅದಾದ ಬಳಿಕ ರಾನು ಮಂಡಲ್ ವಿನಾಕಾರಣ ಸುದ್ದಿಯಾಗಿದ್ದರು. ಒಂದೆಡೆ ಮೇಕಪ್​ನಿಂದ ಟ್ರೋಲ್​ಗೆ ಒಳಗಾಗಿದ್ದರೆ, ಮತ್ತೊಂದೆಡೆ ಅಭಿಮಾನಿಯೊಂದಿಗಿನ ಅನುಚಿತ ವರ್ತನೆಯಿಂದ ಸುದ್ದಿಯಾದರು. ಅದರ ನಡುವೆ ಕಾರ್ಯಕ್ರಮವೊಂದರಲ್ಲಿ ಹಾಡು ಮರೆತು ಹೋಗಿ ಅಪಹಾಸ್ಯಕ್ಕೀಡಾಗಿದ್ದರು. ವೇದಿಕೆಯ ಮೇಲೆ ಹಾಡಲು ನಿಂತಿದ್ದ ಗಾಯಕಿ ಇದ್ದಕ್ಕಿದ್ದಂತೆ ಹಾಡನ್ನು ಮರೆತುಬಿಟ್ಟರು. ಈ ವೇಳೆ ಇಂಗ್ಲಿಷ್​ನಲ್ಲಿ ಮಾತನಾಡಲು ಯತ್ನಿಸಿ ಟ್ರೋಲಿಗರಿಗೆ ಆಹಾರವಾಗಿದ್ದರು.

ಹೀಗೆ ಸುದ್ದಿ ಮೇಲೆ ಸುದ್ದಿಯಾಗುತ್ತಿದ್ದ ರಾನು ಕುರಿತಾದ ಯಾವುದೇ ಅಪ್ಡೇಟ್​ಗಳು ಕಳೆದ ಕೆಲ ತಿಂಗಳಿಂದ ಲಭ್ಯವಿರಲಿಲ್ಲ. ಇದೀಗ ರಾನು ವರ್ತನೆಯೇ ಅವರನ್ನು ಮತ್ತೊಮ್ಮೆ ಹಳೆಯ ಸ್ಥಿತಿಗೆ ದೂಡಿದೆ ಎನ್ನಲಾಗುತ್ತಿದೆ. ಏಕೆಂದರೆ ಯಾವುದೇ ಸಿನಿಮಾದಲ್ಲೂ ಗಾಯಕಿಗೆ ಅವಕಾಶ ನೀಡಲಾಗುತ್ತಿಲ್ಲ. ಅವರನ್ನು ಚಾನೆಲ್​ಗಳೂ ಕೂಡ ಕರೆಸಿ ಹಾಡಿಸುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅವರ ಅಹಂಕಾರದ ವರ್ತನೆ ಎಂದು ವರದಿಯೊಂದು ತಿಳಿಸಿದೆ.


ಇದರ ನಡುವೆ ರಾನು ಮಂಡಲ್ ಜೀವನಚರಿತ್ರೆ ಸಿನಿಮಾ ಆಗಲಿದೆ ಎನ್ನಲಾಗುತ್ತಿದೆ. ಆ ಚಿತ್ರಕ್ಕೆ ರಾನು ಅವರು ಧ್ವನಿ ನೀಡುವ ಸಾಧ್ಯತೆಯಿದೆ. ಅದು ಬಿಟ್ಟರೆ ರಾನುಗೆ ಯಾವುದೇ ಕೆಲಸವಿಲ್ಲ. ಒಟ್ಟಿನಲ್ಲಿ ಏಕಾಏಕಿ ನೇಮ್-ಫೇಮ್ ದಕ್ಕಿಸಿಕೊಂಡ ಬಡ ಗಾಯಕಿಯ ಮಾಡಿದ ಸಣ್ಣ ಪುಟ್ಟ ತಪ್ಪುಗಳೇ ಆಕೆಗೆ ಮುಳುವಾಗಿದ್ದು ಮಾತ್ರ ವಿಪರ್ಯಾಸ.
First published:February 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ