ರಮೇಶ್ ಅರವಿಂದ್ (Ramesh Aravind) ಅವರು ನಿರ್ದೇಶನ ಮಾಡಿ ನಟಿಸಿರುವ ಸಿನಿಮಾ 100. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಕುಟುಂಬ ಸಮೇತ ನೋಬಹುದಾದ ಚಿತ್ರ ಆಗಿದೆ. ಇದೇ ತಿಂಗಳು ಅಂದರೆ ನವೆಂಬರ್ 19ರಂದು 100 ಸಿನಿಮಾ ರಿಲೀಸ್ ಆಗಲಿದ್ದು, ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಚಿತ್ರದ ಪ್ರಮೋಷನ್ಗಾಗಿ ದಾವಣಗೆರೆ ತಲುಪಿದ್ದ ಚಿತ್ರತಂಡ ಅಲ್ಲಿ ತಮ್ಮ ಚಿತ್ರದ ಕುರಿತಾದ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದೆ. 100 ಚಿತ್ರ ಕನ್ನಡದಲ್ಲಿ ರಮೇಶ್ ಅರವಿಂದ್ ಅಭಿನಯದ 102ನೇ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರು ಇನ್ಸ್ಪೆಕ್ಟರ್ ವಿಷ್ಣು ಪಾತ್ರಕ್ಕೆ ಜೀವ ತುಂಬಿದ್ದು, ಸೈಬರ್ ಸ್ಟಾಕರ್ ಹಾಗೂ ಪೊಲೀಸ್ ಅಧಿಕಾರಿಯ ನಡುವಿನ ಕತೆ ಇದಾಗಿದೆಯಂತೆ.
ಈಗ ಲವರ್ ಬಾಯ್ ಇಮೇಜ್ ಈಗ ಸರಿಯಾಗಲ್ಲ ಎನ್ನುವ ರಮೇಶ್ ಅವರು ಸಮಯಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ಈಗ ಇಂತಹ ಸಿನಿಮಾಗಳನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಬೇಸ್ ಮಾಡಿ, ಫ್ಯಾಮಿಲಿ ಥ್ರಿಲ್ಲರ್ ಮೂಲಕ ಈ ಕತೆ ಹೇಳಲಾಗಿದೆ. ರಮೇಶ್ ರೆಡ್ಡಿ ನಿರ್ಮಿಸಿರುವ ಈ ಸಿನಿಮಾಗೆ ಪೊಲೀಸ್ ಸಹಾಯವಾಣಿ 100 ಹೆಸರನ್ನೇ ಇಡಲಾಗಿದೆ. ಇದು ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿದೆ. 2 ಗಂಟೆಯ ಈ ಚಿತ್ರದಲ್ಲಿ ತುಂಬಾ ಶಾರ್ಪ್ ಆಗಿ ಕತೆ ಹೇಳುವ ಪ್ರಯತ್ನ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ಶಿವಾಜಿ ಸುರತ್ಕಲ್ ಸಿನಿಮಾ ಹಿಟ್ ಆಗಿದ್ದು ಖುಷಿ ತಂದಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಅದೇ ರೀತಿಯ ಸಸ್ಪೆನ್ಸ್, ಥ್ರಿಲ್ಲರ್ ಆದ ಇದೇ ತಿಂಗಳು 19 ರಂದು ಬಿಡುಗಡೆಯಾಗಲಿರುವ "100" ಫಿಲ್ಮ್ ನಲ್ಲಿಯೂ ಇದೆ. ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಹೆಂಡ್ತಿ ಕಳೆದುಕೊಂಡು ನಾಯಕ ಡಿಪ್ರೆಷನ್ಗೆ ಹೋಗಿರುತ್ತಾನೆ. ಈ ಸಿನಿಮಾದಲ್ಲಿ ಆ ರೀತಿ ಆಗಿಲ್ಲ. ತುಂಬು ಕುಟುಂಬ ಇರುತ್ತೆ. ಹೆಂಡತಿ ಹಾಗೂ ಮಗು ಸಹ ಇದ್ದು, ಇದು ಪಕ್ಕಾ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಕೂಡ ಇದೆ ಎಂದು ಹೇಳಿದ ಅವರು, ಈ ಸಿನಿಮಾದಲ್ಲಿ ಅರ್ಧ ಭಾಗ ನೈಜ ಕಥೆ ಆಧಾರಿತವಾದದ್ದು. ನನ್ನ ಸ್ನೇಹಿತನಿಗೆ ಆದ ಅನಾಹುತವನ್ನು ಸಿನಿಮಾದಲ್ಲಿ ಚಾಚೂ ತಪ್ಪದೇ ತರಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ Rajinikanth ಸಂತಾಪ: ಸಿಟ್ಟಿಗೆದ್ದ ನೆಟ್ಟಿಗರು..!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ನಮಗೆಲ್ಲ ದೊಡ್ಡ ಶಾಕ್. ಈಗ ಎಲ್ಲರೂ ಈ ನೋವಿನಿಂದ ನಿಧಾನವಾಗಿ ಹೊರ ಬರುವ ಪ್ರಯತ್ನದಲ್ಲಿದ್ದಾರೆ. ಸರ್ಕಾರ ಥಿಯೇಟರ್ನಲ್ಲಿ ಶೇಕಡಾ ನೂರರಷ್ಟು ಆಸನಕ್ಕೆ ಅನುಮತಿ ಕೊಟ್ಟ ಬಳಿಕ ಬಿಡುಗಡೆಯಾದ 2-3 ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಪುನೀತ್ ಸಾವಿನ ನಂತರದ ಬೆಳವಣಿಗೆಗಳು ನಮಗೂ ಗೊತ್ತಿವೆ. ಚಿತ್ರಮಂದಿರಕ್ಕೆ ಜನರು ಬಂದರೆ ಮಾತ್ರ ನಿರ್ಮಾಪಕರಿಗೆ ಲಾಭ ಆಗುವುದು. ಇಲ್ಲದಿದ್ದರೆ ನಷ್ಟ ಆಗುತ್ತೆ ಎಂದು ನಟ ನಿರ್ದೇಶಕ ರಮೇಶ್ ಅರವಿಂದ್ ಹೇಳಿದ್ದಾರೆ.
ಕೊರೋನಾ ಬಂದಾಗ ಇಡೀ ಚಿತ್ರರಂಗವೇ ನಿಂತು ಹೋಯ್ತು. ಆಗ ಥಿಯೇಟರ್ಗಳು ಬಾಗಿಲು ತೆರೆಯಲಿಲ್ಲ. ನಟರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಮಸ್ಯೆ ಅನುಭವಿಸಿದರು. ಅಭಿಮಾನಿಗಳು ಥಿಯೇಟರ್ಗೆ ಬಂದು ಚಿತ್ರ ನೋಡಿದಾಗ ಮಾತ್ರ ನಿರ್ಮಾಪಕರಿಗೆ ಲಾಭ ಆಗುತ್ತದೆ. ಎಲ್ಲವೂ ಸರಾಗವಾಗಿ ನಡೆಯುತ್ತದೆ. ಟಿಕೆಟ್ ಸೇಲ್ ಆಗದಿದ್ದರೆ ಹಾಕಿದ ಬಂಡವಾಳವೂ ಬರುವುದಿಲ್ಲ. ಆಗ ಎಲ್ಲ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಟನೆ ಮಾಡಬಹುದು ಹಾಗೂ ನಿರ್ದೇಶಿಸಲೂಬಹುದು. ಆದ್ರೆ, ಜನರೇ ಚಿತ್ರಮಂದಿರಗಳಿಗೆ ಬಾರದಿದ್ದರೆ ಏನು ಪ್ರಯೋಜನ ಆಗಲ್ಲ ಎಂದಿದ್ದಾರೆ.
ಇದನ್ನೂ ಓದಿ: 100 Movie: ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿ ಮಾಡಿದ ನಟ Ramesh Aravind
ಪುನೀತ್ ರಾಜಕುಮಾರ್ ಅಗಲಿಕೆಯ ಸತ್ಯ ನಮಗೆಲ್ಲ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೆಲವರು ಜಿಮ್ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಜಿಮ್ ಮಾಲೀಕರು ಫೋನ್ ಮಾಡಿ ಈ ಬಗ್ಗೆ ನನ್ನ ಬಳಿಕ ಚರ್ಚೆಯನ್ನೂ ಮಾಡಿದ್ದಾರೆ. ನನ್ನ ಪ್ರಕಾರ ಬೇಸಿಕ್ ಫಿಟ್ನೆಸ್ ಬಹಳ ಮುಖ್ಯ. ಇದು ಎಲ್ಲರಿಗೂ ಬೇಕೇ ಬೇಕು. ಕನಸು ಈಡೇರಿಸಿಕೊಳ್ಳಲು ನಮ್ಮ ದೇಹ ಮುಖ್ಯವಾದದ್ದು ಎಂದಿದ್ದಾರೆ.
ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇದರಲ್ಲಿ ಎರಡು ಮಾತಿಲ್ಲ. ದೇಹ ಸದೃಢವಾಗಿಟ್ಟುಕೊಳ್ಳಲು ಜಿಮ್ಗೆ ಹೋಗಬೇಕು ಎಂದೇನಿಲ್ಲ ಅನ್ನೋದು ನನ್ನ ಅಭಿಪ್ರಾಯ. ಆದ್ರೆ, ಚಿಕ್ಕದಾಗಿ ಅಭ್ಯಾಸ ಮಾಡಬೇಕು. ಅಂಗಾಂಗಳ ಚಲನೆ ಇರಬೇಕು. ಈಗ ಕಂಪ್ಯೂಟರ್, ಮೊಬೈಲ್ ನೋಡ್ತಾ ಕೂರುತ್ತೇವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇನೆ. ಯೋಗಾಭ್ಯಾಸ ಮಾಡಿದರೆ ಒಳಿತು. ನಾನು ವಾರಕ್ಕೆ ನಾಲ್ಕೈದು ದಿನವಾದರೂ ಅಭ್ಯಾಸ ಮಾಡುತ್ತೇನೆ. ಇದರಿಂದ ಡಿಪ್ರೆಷನ್ ದೂರವಾಗಿ, ಬುದ್ದಿವಂತಿಕೆ ಹೆಚ್ಚಾಗುತ್ತದೆ. ಚಿಂತೆಯೂ ಇರಲ್ಲ ಎಂದು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ