ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೊದಲಾರ್ಧದ ಚಿತ್ರೀಕರಣ ಮುಗಿದಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ (Rakshit Shetty) ಇನ್ಸ್ಟಾಗ್ರಾಮ್ನಲ್ಲಿ (Instagram) ಮಾಹಿತಿ ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ (Rukmini Vasanth) ಮಿಂಚಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ಇಬ್ಬರು ಮನು ಹಾಗೂ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ . ಮೊದಲಾರ್ಧದ ಚಿತ್ರೀಕರಣದಲ್ಲಿ ತೆಗೆದ ಫೋಟೋಗಳನ್ನು ರಕ್ಷಿತ್ ಶೆಟ್ಟಿ Instagram ನಲ್ಲಿ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರ ದಶಕದ ಹಿಂದೆ ನಡೆಯುವ ಪ್ರೇಮಕಥೆ (Romantic drama) ಯಾಗಿದೆ. ಈ ಚಿತ್ರದಲ್ಲಿ 2 ಶೇಡ್ಗಳಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲಾರ್ಧ ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ 10 ರಿಂದ 15 ಕೆ.ಜಿ ತೂಕ ಇಳಿಸಿಕೊಂಡಿದ್ರು.
ಮತ್ತೆ 15 ಕೆ.ಜಿ ದಪ್ಪ ಆಗ್ಬೇಕಿದೆ ರಕ್ಷಿತ್!
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಅರ್ಧ ಭಾಗದ ಚಿತ್ರೀಕರಣಕ್ಕಾಗಿ ರಕ್ಷಿತ್ ಶೆಟ್ಟಿ 15 ಕೆ.ಜಿ ತೂಕ ಇಳಿಸಿಕೊಂಡಿದ್ರು. ಇದೀಗ ಉಳಿದ ಭಾಗದ ಶೂಟಿಂಗ್ ಗೆ 15 ಕೆ.ಜಿ ತೂಕ ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಲೇ ದಪ್ಪ ಆಗಲು ರಕ್ಷಿತ್ ವರ್ಕೌಟ್ ಶುರುಮಾಡಿದ್ದು, ಚಿತ್ರೀಕರಣಕ್ಕೆ ತಿಂಗಳ ಅಂತರ ನೀಡಲಾಗಿದೆ.
ಕಳೆದ ಡಿಸೆಂಬರ್ನಲ್ಲೇ ಚಿತ್ರ ಬಿಡುಗಡೆಗೆ ನಿರ್ಧರಿಸಿತ್ತು. ಆದ್ರೆ ಕೋವಿಡ್ 2ನೇ ಅಲೆಯ ಕಾರಣದಿಂದ 21 ದಿನಕ್ಕೆ ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಕಳೆದ ಮೇ ತಿಂಗಳಲ್ಲಿ ಸ್ಥಗಿತಗೊಂಡಿತ್ತು. ಇದೀಗ ಚಿತ್ರದ ಅರ್ಧ ಚಿತ್ರೀಕರಣ ಮುಗಿದಿದೆ.
ರಕ್ಷಿತ್ ಸಿನಿಮಾಗೆ ಹೇಮಂತ್ ಆಕ್ಷನ್ ಕಟ್
ಈ ಹಿಂದೆ ರಕ್ಷಿತ್ ಶೆಟ್ಟಿ ಯಶಸ್ವಿ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೂ ಹೇಮಂತ್ ರಾವ್ ನಿರ್ದೇಶಕರಾಗಿದ್ರು. ಇದೀಗ ಮತ್ತೆ ರಕ್ಷಿತ್, ಹೇಮಂತ್ ಜೋಡಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗ್ತಿದ್ದಾರೆ.
ಇದನ್ನೂ ಓದಿ : Richard Anthony: ದಾಖಲೆ ಬರೆದ ರಿಚರ್ಡ್ ಆಂಟನಿ: ಅಭಿಮಾನಿಗಳಿಗಾಗಿ ಪುಟ್ಟ ಪತ್ರ ಬರೆದ ರಕ್ಷಿತ್ ಶೆಟ್ಟಿ..!
ಇನ್ನು ಈ ಸಿನಿಮಾವನ್ನು ಪುಷ್ಕರ್ ಚಿತ್ರ ನಿರ್ಮಾಣ ಸಂಸ್ಥೆಯ ಪುಷ್ಕರ ಮಲ್ಲಿಕಾರ್ಜುನ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿದ್ದು, ಅವರ ಇತ್ತೀಚಿನ ಚಿತ್ರಗಳಾದ ಟಗರು, ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಸಲಗ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ವು. ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಚಿತ್ರಕ್ಕೂ ಇವರೇ ಸಂಗೀತ ನೀಡಿದ್ದಾರೆ.
‘ಇದು ದಶಕದ ಹಿಂದಿನ ಪ್ರೇಮಕಥೆ’
ಇನ್ನು ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಹೇಮಂತ್, ನಮ್ಮ ಚಿತ್ರ 2010ರಲ್ಲಿ ನಡೆಯೋ ಪ್ರೇಮಕಥೆ ಅಂತ ಹೇಳಿದ್ದಾರೆ. ಕೋವಿಡ್ 19ನಿಂದ ಚಿತ್ರೀಕರಣ ತಡವಾಗಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಬೆಂಗಳೂರು ಹಾಗೂ ಶಿವಮೊಗ್ಗದಲ್ಲೇ ನಡೆದಿದೆ. ನಗರದ ಹಲವೆಡೆ ಶೂಟಿಂಗ್ ಮಾಡಿದ್ದೇವೆ. ಮತ್ತೆ ಕೊರೊನಾ ಮೂರನೇ ಅಲೆ ಅಡ್ಡಿ ಮಾಡ್ತಿದೆ. ನೈಟ್ ಕರ್ಪೂನಿಂದ ಶೂಟಿಂಗ್ಗೆ ಸ್ವಲ್ಪ ತೊಂದರೆಯಾಗಿದೆ ಎಂದ್ರು
ಇದನ್ನೂ ಓದಿ Sandalwood: ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್..! ಚಾರ್ಲಿ 777 ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ
ನಾನು ಹಾಗೂ ರಕ್ಷಿತ್ ಮಾಡ್ತಿರೋ 2ನೇ ಸಿನಿಮಾ ಇದಾಗಿದೆ. ಚಿತ್ರದ ಅರ್ಧಭಾಗ ಮುಗಿದಿದ್ದು, ಇನರ್ಧ ಭಾಗಕ್ಕಾಗಿ ರಕ್ಷಿತ್ 15 ಕೆ.ಜಿ ತೂಕ ಹೆಚ್ಚಿಸಬೇಕಿದೆ ಹೀಗಾಗಿ 40 ದಿನಗಳ ಕಾಲ ರಕ್ಷಿತ್ಗೆ ಟೈಮ್ ಕೊಟ್ಟಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಮಂತ್ ಹೇಳಿದ್ದಾರೆ. ಇತ್ತ ರಕ್ಷಿತ್ ಶೆಟ್ಟಿ ಸಹ ಚಿತ್ರಕ್ಕಾಗಿ ವರ್ಕೌಟ್ ಶುರು ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಅವರ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ