news18-kannada Updated:January 25, 2021, 8:48 AM IST
ರಾಗಿಣಿ ದ್ವಿವೇದಿ
ಬೆಂಗಳೂರು (ಜ. 25): ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಸುಮಾರು 145 ದಿನಗಳ ಕಾಲ ಜೈಲು ಸೇರಿದ್ದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಕೊನೆಗೂ ಇಂದು ಜೈಲಿನಿಂದ ಬಿಡುಗಡೆ ಭಾಗ್ಯ ಸಿಗಲಿದೆ. ಅವರಿಗೆ ಜಾಮೀನು ಸಿಕ್ಕಿ 4 ದಿನಗಳಾಗಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ. ಗುರುವಾರವೇ ಸುಪ್ರೀಂಕೋರ್ಟ್ನಿಂದ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕಿದ್ದರೂ ಅದರ ಆದೇಶ ಪ್ರತಿ ಶುಕ್ರವಾರ ಮಧ್ಯಾಹ್ನ ಸಿಕ್ಕಿತ್ತು. ಆ ಆದೇಶ ಪ್ರತಿಯನ್ನು ಶನಿವಾರ ಎನ್ಡಿಪಿಎಸ್ ಕೋರ್ಟ್ಗೆ ನೀಡಲಾಗಿತ್ತು. ಆಗ ವಿಧಿಸಲಾಗಿದ್ದ ಷರತ್ತುಗಳನ್ನು ಪೂರೈಸಲಾಗದ ಹಿನ್ನೆಲೆಯಲ್ಲಿ ರಾಗಿಣಿಯ ಜೈಲು ವಾಸ ಮುಂದುವರೆದಿತ್ತು. ನಿನ್ನೆ ಭಾನುವಾರವಾದ್ದರಿಂದ ರಾಗಿಣಿ ಅನಿವಾರ್ಯವಾಗಿ ಜೈಲಿನಲ್ಲೇ ಉಳಿದುಕೊಂಡಿದ್ದರು. ಇಂದು ಎನ್ಡಿಪಿಎಸ್ ಕೋರ್ಟ್ನಲ್ಲಿ ಷರತ್ತುಗಳನ್ನು ಪೂರೈಸಿದ ನಂತರ ರಾಗಿಣಿ ಪರ ವಕೀಲರು ಬಿಡುಗಡೆ ಆದೇಶ ಪಡೆಯಲಿದ್ದಾರೆ.
ಕಳೆದ ಗುರುವಾರ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿದ್ದ ರಾಗಿಣಿಯ ಆದೇಶ ಪ್ರತಿಯನ್ನು ಪಡೆದುಕೊಂಡು ಶುಕ್ರವಾರ ಮಧ್ಯಾಹ್ನದ ಬಳಿಕ ವಕೀಲರು ಬೆಂಗಳೂರಿಗೆ ಬಂದಿದ್ದರು. ಶನಿವಾರ ಎನ್ ಡಿಪಿಎಸ್ ಕೋರ್ಟ್ನಲ್ಲಿ ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ವಕೀಲರು ಹಾಜರು ಪಡಿಸಿದ್ದರು. ಆದರೆ, ರಾಗಿಣಿಗೆ ಜಾಮೀನು ಮಂಜೂರು ಮಾಡಲು ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. 3 ಲಕ್ಷ ರೂ. ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಎಂಬ ಷರತ್ತುಗಳನ್ನು ಎನ್ಡಿಪಿಎಸ್ ಕೋರ್ಟ್ ವಿಧಿಸಿತ್ತು. ಆ ಷರತ್ತುಗಳನ್ನು ಪೂರೈಸಲು ರಾಗಿಣಿ ಪರ ವಕೀಲರು ಸಮಯಾವಕಾಶ ಕೇಳಿದ್ದರು. ಹೀಗಾಗಿ, ಇಂದು ಕೋರ್ಟ್ನ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ, ರಾಗಿಣಿಗೆ ಜಾಮೀನು ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಜಾಮೀನು ಸಿಕ್ಕಿ ಮೂರು ದಿನ ಕಳೆದರೂ ನಟಿ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ; ಇನ್ನು 2 ದಿನ ಜೈಲೇ ಗತಿ
ಸುಮಾರು 145 ದಿನಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಗಿಣಿ ದ್ವಿವೇದಿ ಕಾಲ ಕಳೆಯುತ್ತಿದ್ದಾರೆ. ಹಲವು ಬಾರಿ ಜಾಮೀನಿಗೆ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕೊನೆಗೂ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ, ಆ ಆದೇಶ ಪ್ರತಿಯನ್ನು ಬೆಂಗಳೂರಿನ ಎನ್ಡಿಪಿಎಸ್ ನ್ಯಾಯಾಲಯಕ್ಕೆ ತಲುಪಿಸಲು ವಿಳಂಬವಾಗಿದ್ದರಿಂದ ಅವರ ಜೈಲುವಾಸ ಇನ್ನೂ ಮುಂದುವರೆದಿದೆ. ಇಂದು ಜಾಮೀನು ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ ಮಧ್ಯಾಹ್ನದ ನಂತರ ನಟಿ ರಾಗಿಣಿ ಜೈಲಿನಿಂದ ಹೊರಬರಲಿದ್ದಾರೆ.
2020ರ ಸೆ.4ರಂದು ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆ ನಡೆಸಿ, ಬಂಧಿಸಲಾಗಿತ್ತು. ನವೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಮತ್ತೋರ್ವ ನಟಿ ಸಂಜನಾ ಗಲ್ರಾನಿಗೆ ಇತ್ತೀಚೆಗಷ್ಟೆ ಜಾಮೀನು ಸಿಕ್ಕಿತ್ತು.
Published by:
Sushma Chakre
First published:
January 25, 2021, 8:46 AM IST