News18 India World Cup 2019

'ಮಣಿಕರ್ಣಿಕಾ' ಸಿನಿಮಾ ಪೋಸ್ಟರ್ ರಿಲೀಸ್​​​​: ಗಣರಾಜ್ಯೋತ್ಸವಕ್ಕೆ ತೆರೆ ಕಾಣಲಿದೆ ಝಾನ್ಸಿ ರಾಣಿಯ ಕಥೆ

news18
Updated:August 15, 2018, 1:07 PM IST
'ಮಣಿಕರ್ಣಿಕಾ' ಸಿನಿಮಾ ಪೋಸ್ಟರ್ ರಿಲೀಸ್​​​​: ಗಣರಾಜ್ಯೋತ್ಸವಕ್ಕೆ ತೆರೆ ಕಾಣಲಿದೆ ಝಾನ್ಸಿ ರಾಣಿಯ ಕಥೆ
news18
Updated: August 15, 2018, 1:07 PM IST
ನ್ಯೂಸ್​18 ಕನ್ನಡ

ಸ್ವಾತಂತ್ರ್ಯೋತ್ಸವ ದಿನವಾದ ಇಂದು ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಜೀವನಕಥೆಯನ್ನು ಆಧರಿಸಿದ 'ಮಣಿಕರ್ಣಿಕಾ' ಸಿನಿಮಾದ ಮೊದಲ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ದೇಶಭಕ್ತಿ ಸಾರುವ ಈ ಸಿನಿಮಾದ  ಪೋಸ್ಟರ್​ ಈಗಾಗಲೇ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಬಾಲಿವುಡ್​ ನಟಿ ಕಂಗನಾ ರಣಾವತ್​ ಈ ಸಿನಿಮಾದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣದ ಆರಂಭದ ದಿನದಿಂದಲೂ ಸಾಕಷ್ಟು ಸುದ್ದಿಯಾಗಿದ್ದ ಈ ಸಿನಿಮಾ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ತನ್ನ ದತ್ತುಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು, ಖಡ್ಗ ಹಿಡಿದು ಯುದ್ಧ ಮಾಡುತ್ತಿರುವ ಲಕ್ಷ್ಮೀಬಾಯಿಯ ಲುಕ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 ವಾರಣಾಸಿಯಲ್ಲಿ ಜನಿಸಿದ ಮಣಿಕರ್ಣಿಕಾ ನಂತರ ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್​ ಅವರನ್ನು ಮದುವೆಯಾಗಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಎನಿಸಿಕೊಂಡರು. ಸಕಲ ವಿದ್ಯೆಯಲ್ಲಿ ಪಾರಂಗತರಾಗಿದ್ದ ಲಕ್ಷ್ಮೀಬಾಯಿ ಬ್ರಿಟಿಷ್​ ಈಸ್ಟ್​ ಇಂಡಿಯಾ ಕಂಪನಿ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದರು. ಅವರ ಜೀವನವನ್ನು ಆಧರಿಸಿ ಮಾಡಲಾಗುತ್ತಿರುವ ಈ ಸಿನಿಮಾವನ್ನು ತೆಲುಗಿನ 'ವೇದಂ', 'ಮಹಾನಟಿ' ಮುಂತಾದ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಕ್ರಿಷ್​ ನಿರ್ದೇಶಿಸಿದ್ದಾರೆ.

ಬಾಹುಬಲಿ, ಭಜರಂಗಿ ಭಾಯಿಜಾನ್​ ಸಿನಿಮಾಗಳಿಗೆ ಕತೆ ಬರೆದಿದ್ದ ವಿಜಯೇಂದ್ರ ಪ್ರಸಾದ್​ ಈ ಸಿನಿಮಾಗೆ ಕತೆ ಬರೆದಿದ್ದಾರೆ. ಹಾಗಾಗಿ, ನಿರೀಕ್ಷೆಯೂ ಹೆಚ್ಚೇ ಇದೆ.  ಗಾಂಧಿ ಜಯಂತಿಯಂದು ಈ ಸಿನಿಮಾದ ಟೀಸರ್​ ಹೊರಬೀಳಲಿದ್ದು, ಲಕ್ಷ್ಮೀಬಾಯಿಯ ಜನ್ಮದಿನವಾದ ನವೆಂಬರ್​ 19ರಂದು ಟ್ರೈಲರ್​ ಬಿಡುಗಡೆಯಾಗಲಿದೆ. 2019ರ ಜನವರಿ ತಿಂಗಳಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಹಿಂದಿನ ದಿನ 'ಮಣಿಕರ್ಣಿಕಾ' ತೆರೆಗೆ ಬರಲಿದೆ.

ಈ ಮೊದಲು ಝಾನ್ಸಿ ರಾಣಿಯ ಲುಕ್​ನಲ್ಲಿರುವ ಕಂಗನಾ ಅವರ ಫಸ್ಟ್​ ಲುಕ್​ ಬಿಡುಗಡೆಯಾದಾಗಲೂ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಪೋಸ್ಟರ್​ನಲ್ಲಿ ವೀರರಾಣಿಯಾಗಿ ಕಾಣಿಸಿಕೊಂಡಿರುವ ಕಂಗನಾ ಅವರ ಬಗ್ಗೆ ಅಭಿಮಾನಿಗಳು ಮತ್ತು ಬಾಲಿವುಡ್​ ಚಿತ್ರರಂಗದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್​ ಮಾಡುತ್ತಿದ್ದಾರೆ.

ವಿವಾದದಿಂದಲೂ ಗಮನಸೆಳೆದಿದ್ದ ಸಿನಿಮಾ:

ಬಾಲಿವುಡ್​ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಮಣಿಕರ್ಣಿಕಾ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಯಾದಾಗ ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ವಿದೇಶಿ ಬರಹಗಾರ ಬರೆದಿರುವ ಪುಸ್ತಕವನ್ನು ಆಧರಿಸಿ ನಿರ್ಮಿಸಲಾಗಿರುವ ಈ ಸಿನಿಮಾದಲ್ಲಿ ಬ್ರಿಟಿಷ್​ ಪ್ರಜೆ ಮತ್ತು ಲಕ್ಷ್ಮೀಬಾಯಿ ಅವರ ಸಂಬಂಧದ ಬಗ್ಗೆಯೂ ತೋರಿಸಲಾಗುತ್ತಿದೆ. ಇದರಿಂದ ಲಕ್ಷ್ಮೀಬಾಯಿ ಅವರ ಹೆಸರಿಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ, ಈ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಬ್ರಾಹ್ಮಣ ಮಹಾಸಭಾದ ಪ್ರತಿನಿಧಿಗಳು ಹೇಳಿಕೆ ನೀಡಿದ್ದರು.

ಬ್ರಾಹ್ಮಣ ಸಮುದಾಯದ ಹೆಮ್ಮೆಯಾಗಿರುವ ರಾಣಿ ಲಕ್ಷ್ಮೀಬಾಯಿ ರಜಪೂತರ ರಾಣಿಯಾದ್ದರಿಂದ ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ರಜಪೂತ ಕರಣಿ ಸೇನಾ ಕೂಡ ಹೇಳಿಕೆ ನೀಡಿತ್ತು. ಇದೇ ಕರಣಿಸೇನಾ ಈ ಹಿಂದೆ ಪದ್ಮಾವತಿ ಸಿನಿಮಾಗೂ ವಿರೋಧ ವ್ಯಕ್ತಪಡಿಸಿ ವಿವಾದ ಸೃಷ್ಟಿಯಾಗಲು ಕಾರಣವಾಗಿತ್ತು.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...