Puneeth Rajkumar: ಆಕಾಶದಲ್ಲೂ ಮಿನುಗಲಿದೆ ಪವರ್ 'ಸ್ಟಾರ್; ಈ ವರ್ಷವೇ ನಭಕ್ಕೆ ಹಾರಲಿದೆ ಪುನೀತ್ ಉಪಗ್ರಹ

ಸರಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ 'ಪುನೀತ್' ಉಪಗ್ರಹವನ್ನು ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಉಪಗ್ರಹ

ಪುನೀತ್​ ರಾಜ್​ಕುಮಾರ್​ ಉಪಗ್ರಹ

  • Share this:
ಸ್ಯಾಂಡಲ್‌ವುಡ್ (Sandalwood) ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ದೈಹಿಕವಾಗಿ ‌ನಮ್ಮನ್ನು ಅಗಲಿ ಇಂದಿಗೆ 10 ತಿಂಗಳಾಯ್ತು. ಆದರೆ ‘ಅಪ್ಪು’ (Appu) ಕನ್ನಡಿಗರ ಮನೆ, ಮನಗಳಲ್ಲಿ ಎಂದೆಂದಿಗೂ ಅಮರರಾಗಿ ಇರುತ್ತಾರೆ. ಈ ‘ವೀರ ಕನ್ನಡಿಗ’ (Veera Kannadiga) ತಮ್ಮ ನಟನೆಯಿಂದ 'ಆಕಾಶ'ದ ಎತ್ತರಕ್ಕೆ ಬೆಳೆದವರು, ತಮ್ಮ ಸಮಾಜಸೇವೆಯಿಂದ 'ಸ್ಟಾರ್‌'ನಂತೆ (Star) ಬೆಳಗಿದವರು. ಇದೀಗ ಈ 'ಪವರ್ ಸ್ಟಾರ್‌' ಹೆಸರು 'ಆಕಾಶ'ದಲ್ಲಿ ಮಿನುಗೋಕೆ ಸಮಯ ಕೂಡಿ ಬಂದಿದೆ. ವರ್ಷಾಂತ್ಯಕ್ಕೆ ಪುನೀತ್​ ಉಪಗ್ರಹ ನಭಕ್ಕೆ ಜಿಗಿಯಲಿದೆ.

ವಿದ್ಯಾರ್ಥಿಗಳು ನಿರ್ಮಿಸ್ತಿರೋ ಪುನೀತ್​ ಉಪಗ್ರಹ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ 'ಪುನೀತ್' ಉಪಗ್ರಹವನ್ನು ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಉಪಗ್ರಹಕ್ಕೆ ‘ಪುನೀತ್ ರಾಜ್‌ಕುಮಾರ್’ ಹೆಸರು ನಾಮಕರಣ

ಉಪಗ್ರಹ ತಯಾರಿಸಲು ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಅದರಲ್ಲೂ ಮಲ್ಲೇಶ್ವರಂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಯಾರಿಸುತ್ತಿರುವ ಮೊದಲ ಉಪಗ್ರಹವಾಗಿದೆ. ಇದಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡಲಾಗಿದೆ.

twitter has removed the blue tick of Puneeth Rajkumars account
ಪುನೀತ್ ರಾಜ್‌ಕುಮಾರ್


ಸಚಿವ ಅಶ್ವತ್ಥ್ ನಾರಾಯಣ್ ಅವರಿಂದ ಘೋಷಣೆ

ಈ ಉಪಗ್ರಹ ಯೋಜನೆಯ ಪ್ರಗತಿ ಕುರಿತು ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅಶ್ವತ್ಥ್ ನಾರಾಯಣ್, “ಇದರ ಅಂಗವಾಗಿ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿ ಬೆಳೆಸಲು ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಅಂತಿಮವಾಗಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾಕ್ಕೆ ಕರೆದುಕೊಂಡು ಹೋಗಲಾಗುವುದು” ಎಂದರು.

ಸುಮಾರು 1.9 ಕೋಟಿ ರೂಪಾಯಿ ವೆಚ್ಚದ ಯೋಜನೆ

ವಿದ್ಯಾರ್ಥಿಗಳು ತಯಾರಿಸಲಿರುವ ಈ ಉಪಗ್ರಹ ಯೋಜನೆಗೆ ಸುಮಾರು 1.90 ಕೋಟಿ ರೂಪಾಯಿ ವೆಚ್ಚವಾಗಲಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಸುಮಾರು 20 ಶಾಲೆಗಳ ಮಕ್ಕಳು ಭಾಗಿಯಾಗಲಿದ್ದಾರೆ. ಈ ಉಪಗ್ರಹವನ್ನು ವರ್ಷಾಂತ್ಯಕ್ಕೆ ಉಡಾವಣೆ ಮಾಡಲು ತೀರ್ಮಾನಿಸಲಾಗಿದೆ.

ಸಾಮಾನ್ಯ ಉಪಗ್ರಹ ಅಭಿವೃದ್ಧಿಪಡಿಸಲು ಸುಮಾರು 50 ಕೋಟಿಯಿಂದ  60 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಅಲ್ಲದೆ, ಅದರ ತೂಕ ಕೂಡಾ 50 ಕಿಲೋ ಇರುತ್ತದೆ. ಆದರೆ, ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ, ಪರಿವರ್ತನೆ ಆಗಿದೆ. ಇಲ್ಲಿ ಒಂದೂವರೆ ಕಿಲೋ ತೂಕದಲ್ಲಿ 1. ಕೋಟಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿ ಉಪಗ್ರಹ ಉಡಾವಣೆ ಯೋಜನೆಯ ಪರಿಕಲ್ಪನೆ ರೂಪಿಸಲಾಗಿದೆ  ಎಂದು ಸಚಿವ ಅಶ್ವತ್ಥ್ ನಾರಾಯಣ ಅವರು ವಿವರಿಸಿದರು.

ಪುನೀತ್ ರಾಜ್‌ಕುಮಾರ್ ಹೆಸರೇ ಯಾಕೆ?

ಪುನೀತ್ ರಾಜ್‌ಕುಮಾರ್ ಎಂದರೆ ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಪ್ರತಿ ಕನ್ನಡಿಗರಿಗೂ ಇಷ್ಟ. ಅದರಲ್ಲೂ ಯುವಕರು ಹಾಗೂ ಮಕ್ಕಳಿಗೆ ಅಪ್ಪು ಎಂದರೆ ಫೇವರೇಟ್‌. ಹೀಗಾಗಿ ವಿದ್ಯಾರ್ಥಿಗಳು ತಯಾರಿಸುತ್ತಿರುವ ಈ ಉಪಗ್ರಹಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಟ್ಟು, ಮುಖ್ಯವಾಗಿ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯಲು ಪ್ರಯತ್ನಿಸಲಾಗಿದೆ. ಜೊತೆಗೆ ಸಮಾಜಸೇವೆ ಹಾಗೂ ಚಿತ್ರರಂಗದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮಾಡಿರುವ ಸಾಧನೆಗೂ ಗೌರವ ಸಲ್ಲಿಸಿದಂತಾಗುತ್ತದೆ.

ಅಪ್ಪು ಅಗಲಿ 10  ತಿಂಗಳು

ಇನ್ನು ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ 10 ತಿಂಗಳು ಕಳೆದಿದೆ. ಇಷ್ಟು ದಿನಗಳಾದರೂ ಕನ್ನಡಿಗರ ಮನದಿಂದ ಪುನೀತ್ ಮರೆಯಾಗಿಲ್ಲ.  ಅಸಂಖ್ಯಾತ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಪುನೀತ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
Published by:Pavana HS
First published: