Hubballi: ಅಪ್ಪು ಇನ್ಮುಂದೆ ಬರೋಲ್ಲ, ಪುನೀತ್ ಎಂಟ್ರಿ ಕೊಟ್ಟ ಕೂಡಲೇ ಗೋಡೆಗೆ ಗುದ್ದಿ ಭಾವುಕನಾದ ಅಭಿಮಾನಿ

ಅಪ್ಪು ಅವರ ಕೊನೆಯ ಚಿತ್ರ ಪ್ರದರ್ಶನ. ಅಪ್ಪು ಅಭಿಮಾನಿಗಳಿಗೆ ಒಂದು ಜೇಮ್ಸ್ ಬಂದಿದೆ ಅನ್ನೋ ಖುಷಿ ಜೊತೆಗೆ, ಇನ್ನು ಮುಂದೆ ಅವರ ಚಿತ್ರ ನೋಡೋಕೆ ಆಗಲ್ವಲ್ಲಾ ಅಂತ ಕಣ್ಣೀರು. ಅಪ್ಪು ಅಭಿಮಾನಿಯೋರ್ವ ಸಿಟ್ಟಿನಲ್ಲಿ ಗೋಡೆಗೆ ಗುದ್ದಿ ಸಿನಿಮಾ ನೋಡದೆ ಹೊರಬಂದಿದ್ದಾರೆ

ಪುನೀತ್ ಅಭಿಮಾನಿ

ಪುನೀತ್ ಅಭಿಮಾನಿ

  • Share this:
ಹುಬ್ಬಳ್ಳಿ(ಮಾ.18): ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ ದೇಶಾದ್ಯಂತ ಭರ್ಜರಿ ಎಂಟ್ರಿ ಕೊಟ್ಟಿದೆ. ಪುನೀರ್ ಹುಟ್ಟು ಹಬ್ಬ, ಜೇಮ್ಸ್ ಚಿತ್ರ ಬಿಡುಗಡೆ ಅಪ್ಪು ಅಭಿಮಾನಿಗಳಲ್ಲಿ (Appu Fans) ಸಂಭ್ರಮ ದುಪ್ಪಟ್ಟುಗೊಳ್ಳುವಂತೆ ಮಾಡಿತು. ಆದರೆ ಅಪ್ಪು ಅಗಲಿಕೆ ಅವರ ಅಭಿಮಾನಿಗಳನ್ನು ಪದೇ ಪದೇ ಕಾಡಿತು. ಹುಬ್ಬಳ್ಳಿಯಲ್ಲಿ (Hubballi) ಅಭಿಮಾನಿಯೋರ್ವ ಜೇಮ್ಸ್ ನಲ್ಲಿ ಪುನೀತ್ ಎಂಟ್ರೀ ಕೊಟ್ಟ ಕೂಡಲೇ, ಭಾವುಕನಾಗಿ ಗೋಡೆಗೆ ಗುದ್ದಿ, ಕಣ್ಣೀರು ಹಾಕಿ ಚಿತ್ರ ನೋಡಲಾಗದೆ ಹೊರ ಬಂದಿದ್ದಾನೆ. ಜೇಮ್ಸ್ ಚಿತ್ರ ಪ್ರದರ್ಶನದ ವೇಳೆ ಅಪ್ಪು ನೆನೆಸಿಕೊಂಡು ಅಭಿಮಾನಿ ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಪ್ಪು ಅಭಿಮಾನಿ ರಾಘು ಗದ್ಗದಿತರಾಗಿದ್ದಾರೆ.

ಜೈ ರಾಜವಂಶ ಅಭಿಮಾನಿ ಸಂಘದ ಅಧ್ಯಕ್ಷ ರಾಘು ಹುಬ್ಬಳ್ಳಿಯ ಅಪ್ಸರಾ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರ ನೋಡಲು ಹೋಗಿದ್ದರು. ಜೇಮ್ಸ್ ಚಿತ್ರದಲ್ಲಿ ಅಪ್ಪು ಎಂಟ್ರಿ ಕೊಟ್ಟ ಕೂಡಲೇ ರಾಘು ಭಾವುಕರಾಗಿದ್ದಾರೆ. ಕಣ್ಣೀರು ಹಾಕಿ ಕುಸಿದು ಕುಳಿತಿದ್ದಾರೆ. ನಂತರ ಸಾವರಿಸಿಕೊಂಡು ಚಿತ್ರಮಂದಿರದಿಂದ ಹೊರ ನಡೆದು ಬಂದಿದ್ದಾರೆ.

ಸಿನಿಮಾ ನೋಡಲಾಗದೆ ಹೊರಬಂದ ಅಭಿಮಾನಿ

ನಂತರ ನ್ಯೂಸ್ 18 ಕನ್ನಡದ ಜೊತೆ ಪುನೀತ್ ಜೊತೆಗಿನ ನಂಟನ್ನು ಹಂಚಿಕೊಂಡಿದ್ದಾರೆ. ಅಪ್ಪು ಎಂಟ್ರಿ ಕೊಟ್ಟ ಕೂಡಲೇ ನನಗೆ ತಡೆದುಕೊಳ್ಳಲಾಗಲಿಲ್ಲ. ಪ್ರತಿ ಸಿನಿಮಾ ದಲ್ಲಿ ಅಪ್ಪು ಎಂಟ್ರಿ ಕೊಟ್ಟಾಗ ಖುಷಿಪಡಲಿಲ್ಲ ಕೇಕೆ ಹಾಕ್ತಿದ್ದೆ. ಆದರೆ ಈ ಬಾರಿ ಮಾತ್ರ ದುಃಖ ತಡೆಯಲು ಆಗಲೇ ಇಲ್ಲ. ನಮ್ಮ  ಬಾಸ್ ನ್ನು ನೋಡದು ಇದೇ ಕೊನೆಯ ಸಲ ಅನಿಸಿಬಿಡ್ತು. ಹೀಗಾಗಿ ಚಿತ್ರ ನೋಡಕ್ಕೆ ಆಗದೆ ಹೊರಬಂದುಬಿಟ್ಟೆ.

ಎದೆ ಮೇಲಿದೆ ಟ್ಯಾಟೂ

ಅವರು ನಮ್ಮ ಜತೆ ಭೌತಿಕವಾಗಿ ಇಲ್ಲದೇ ಇರಬಹುದು. ಆದರೆ ಅಭಿಮಾನಿಗಳ ಹೃದಯದಲ್ಲಿ ಇದ್ದಾರೆ ಎಂದು ತಮ್ಮ ಎದೆ ಮೇಲೆ ಹಾಕಿಸಿಕೊಂಡ ಟ್ಯಾಟೂ ತೋರಿಸಿದ್ದಾರೆ.

ಬಡವರಿಗೆ ಉಚಿತ ನೇತ್ರ ಚಿಕಿತ್ಸೆ

ಕಟೌಟ್ ಗೆ ಹಾಲು ಸುರಿದು ಪಟಾಕಿ ಹಚ್ಚಿ ಹಣ ದುಂದುವೆಚ್ಚ ಮಾಡಬಾರದು. ಅಪ್ಪು ಹೆಸರಲ್ಲಿ ಏನಾದ್ರು ಒಳ್ಳೆ ಕೆಲ್ಸ ಮಾಡ್ಬೇಕು ಅಂತ ನೂರು ಜನರಿಗೆ ನೇತ್ರ ಚಿಕಿತ್ಸೆ ಕೊಡಿಸಿದ್ದೇವೆ. ನೇತ್ರ ಚಿಕಿತ್ಸೆ ಪಡೆದ ಎಲ್ಲರಿಗೂ ಜೇಮ್ಸ್ ಚಿತ್ರವನ್ನು ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ಗಿಡವನ್ನು ಕೊಟ್ಟು ಪರಿಸರ ಸಂರಕ್ಷಣೆಗೆ ಮನವಿ ಮಾಡಿದ್ದೇವೆ. ಅಪ್ಪು ಇನ್ನೇನಿದ್ದರೂ ನೆನಪು ಮಾತ್ರ ಎಂದು ರಾಘು ಕಣ್ಣೀರು ಹಾಕಿದ್ದಾರೆ.

ನೂರು ಜನರಿಗೆ ನೇತ್ರ ಚಿಕಿತ್ಸೆ, ಉಚಿತ ಶೋ...

ಜೇಮ್ಸ್ ಚಿತ್ರ ಪ್ರದರ್ಶನದ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಯಿಂದ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ನಡೆಯಿತು. 100 ಜನರ ಕಣ್ಣಿನ ಆಪರೇಷನ್ ಮೂಲಕ ಅಭಿಮಾನಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಗರದ ಎಂ ಎಂ ಜೋಶಿ ವೈದ್ಯರಿಂದ ಕಣ್ಣಿನ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ರಾಘು ವದ್ದಿ ಎನ್ನುವ ಅಪ್ಪು ಅಭಿಮಾನಿಯಿಂದ ವಿನೂತನವಾಗಿ ಆಚರಣೆ ನಡೆಯಿತು. ಕಣ್ಣಿನ ಚಿಕಿತ್ಸೆಗೊಳಗಾದ 100 ಜನರಿಗೆ ಪುನೀತ್ ಫೋಟೋ ನೀಡಿದ ಅಭಿಮಾನ ಮೆರೆಯಲಾಯಿತು. ಜೇಮ್ಸ್ ಸಿನಿಮಾಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಗಿಡ ಕೊಡೋ ಮೂಲಕ ಪರಿಸರ ಸಂರಕ್ಷಣೆಗೆ ಕರೆ ನೀಡಲಾಯಿತು.

ಹುಚ್ಚೆದ್ದು ಕುಣಿದ ಯುವತಿಯರು

ಹುಬ್ಬಳ್ಳಿಯಲ್ಲಿ ಜೇಮ್ಸ್ ಚಿತ್ರಪ್ರದರ್ಶನ ಅದ್ಧೂರಿಯಾಗಿ ಆರಂಭಗೊಂಡಿದೆ. ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಯುವತಿಯರು ಆಕರ್ಷಕ ನೃತ್ಯ ಮಾಡಿ ಗಮನ ಸೆಳೆದರು. ಹಲಗೆ ವಾದ್ಯ ಗಳಿಗೆ ತಕ್ಕಂತೆ ಯುವತಿಯರು ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ: Puneeth Rajkumar: ಚಲನಚಿತ್ರ ನಟರ ನಿಧನದ ನಂತರ ಬಿಡುಗಡೆಯಾದ ಅವರ ಸಿನಿಮಾಗಳು

ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರದ ಎದುರು ನೃತ್ಯ ಮಾಡಿದರು. ಚಿತ್ರ ಪ್ರದರ್ಶನಕ್ಕೆ ಹೋಗುವ ಮುಂಚೆ ಯುವತಿಯರು ಡ್ಯಾನ್ಸ್ ಮಾಡಿದರು. ಯುವತಿಯರನ್ನು ನೋಡಿ ಇತರರೂ ಕುಣಿದು ಕುಪ್ಪಳಿಸಿದರು. ಹುಬ್ಬಳ್ಳಿಯ ಅಪ್ಸರಾ ಟಾಕೀಸ್ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಜೇಮ್ಸ್ ನೋಡೋಕೆ ಬಂದೋರಿಗೆ ಭರ್ಜರಿ ಬಾಡೂಟ

ಜೇಮ್ಸ್ ಚಿತ್ರ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಹುಬ್ಬಳ್ಳಿಯಲ್ಲಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜೈ ರಾಜ ವಂಶ ಅಭಿಮಾನಿ ಸಂಘದಿಂದ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಹುಬ್ಬಳ್ಳಿಯ ಅಪ್ಸರಾ ಟಾಕೀಸ್ ನಲ್ಲಿ ಚಿತ್ರ ವೀಕ್ಷಣೆಗೆ ಬಂದವರಿಗೆ ಬಿರಿಯಾನಿ ಬಾಡೂಟ ಸಿಕ್ಕಿತು.

ಇದನ್ನೂ ಓದಿ: Puneeth Rajkumar Fan: ತೆಂಗಿನ ಗರಿಯಲ್ಲಿ ‘ಅಪ್ಪು‘ ಸಿರಿ, 17 ಬಗೆಯ ವಸ್ತಗಳಲ್ಲಿ ಪುನೀತ್ ಚಿತ್ರ ಮೂಡಿಸಿದ ಕಲಾವಿದನಿಗೆ ಸೆಲ್ಯೂಟ್

ಚಿಕನ್ ಬಿರಿಯಾನಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು. ಪುನೀತ್ ರಾಜ್ ಕುಮಾರ್ ಗೆ ಬಿರಿಯಾನಿ ಅಂದ್ರೆ ಇಷ್ಟ. ಹುಬ್ಬಳ್ಳಿಗೆ ಬಂದಾಗ್ಲೂ ಬಿರಿಯಾನಿಯನ್ನು ಇಷ್ಟಪಟ್ಟು ತಿಂತಿದ್ರು. ಆ ಹಿನ್ನೆಲೆಯಲ್ಲಿ ಪುನೀತ್ ಹುಟ್ಟುಹಬ್ಬ ಮತ್ತು ಜೇಮ್ಸ್ ಚಿತ್ರವೀಕ್ಷಣೆಗೆ ಬಂದವರಿಗೆ ಬಿರಿಯಾನಿ ವ್ಯವಸ್ಥೆ ಮಾಡಿರೋದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

ಉಪಹಾರದ ವ್ಯವಸ್ಥೆ:

ಒಟ್ಟಾರೆ ಹುಬ್ಬಳ್ಳಿಯಲ್ಲಿ ಅಪ್ಪು ಆರ್ಭಟ ಜೋರಾಗಿದ್ದು, ಕಟೌಟ್ ಗಳಿಗೆ ನಿರಂತರ ಕ್ಷೀರಾಭಿಷೇಕ, ಪಟಾಕಿ ಸಿಡಿಸೋದು ಮುಂದುವರಿದೇ ಇದೆ. ಚಿತ್ರ ನೋಡಲು ಬಂದೋರಿಗೆ ಬೆಳಿಗ್ಗೆಯಿಂದಲೂ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ದಿನವಿಡೀ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
Published by:Divya D
First published: