RIP Puneeth Rajkumar; ನನ್ನದು ಮಗನನ್ನು ಕಳೆದುಕೊಂಡ ನೋವು: ಶಿವರಾಜ್‍ಕುಮಾರ್ ಕಣ್ಣೀರು

ನನ್ನದು ಮಗನನ್ನು ಕಳೆದುಕೊಂಡ ನೋವು. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಪ್ಪು ಹೋಗಿದ್ದಕ್ಕೆ ನೋವಾಗಿದೆ. ಕುಟುಂಬದ ನೋವು ಇದ್ದೇ ಇರುತ್ತದೆ. ನಿಮ್ಮೆಲ್ಲರನ್ನ ನೋಡಿದಾಗ ಆ ನೋವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾ ಶಿವಣ್ಣ ಭಾವುಕರಾದರು.

ಶಿವರಾಜ್‍ಕುಮಾರ್ ಕಣ್ಣೀರು

ಶಿವರಾಜ್‍ಕುಮಾರ್ ಕಣ್ಣೀರು

  • Share this:
ಬೆಂಗಳೂರು: ಅಮ್ಮ ಪಾರ್ವತಮ್ಮ  (Parvathamma Rajkumar) ಅವರ ಪಕ್ಕದಲ್ಲಿಯೇ ಬೆಟ್ಟದ ಹೂ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಭೂ ತಾಯಿ ಮಡಿಲು ಸೇರಿದ್ದಾರೆ. ರಾಜ್ ಕುಮಾರ್ ಕುಟುಂಬಸ್ಥರು ಮತ್ತು ಸಂಬಂಧಿಕರು ಸದಾಶಿವನಗರದ ದೊಡ್ಮನೆ ತಲುಪಿದ್ದಾರೆ. ಎರಡು ದಿನದಿಂದ ತಮ್ಮ ಅಪ್ಪು ಪಕ್ಕವೇ ಕುಳಿತಿದ್ದ ಶಿವಣ್ಣ (Shivarajkumar) ಮನೆಗೆ ಹಿಂದಿರುಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವಣ್ಣ, ನನ್ನದು ಮಗನನ್ನು ಕಳೆದುಕೊಂಡ ನೋವು. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಪ್ಪು ಹೋಗಿದ್ದಕ್ಕೆ ನೋವಾಗಿದೆ. ಕುಟುಂಬದ ನೋವು ಇದ್ದೇ ಇರುತ್ತದೆ. ನಿಮ್ಮೆಲ್ಲರನ್ನ ನೋಡಿದಾಗ ಆ ನೋವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾ ಶಿವಣ್ಣ ಭಾವುಕರಾದರು.

ಸಿಎಂ, ಪೊಲೀಸರಿಗೆ ಧನ್ಯವಾದ

ಎಲ್ಲರೂ ದುಃಖ ನುಂಗಿ ಮುಂದೆ ನಡೆಯಬೇಕು. ಅಭಿಮಾನ‌ ಇರಲಿ ಆದರೆ ಅದರಿಂದ ಹಾನಿಯಾಗಬಾರದು. ನಿಮ್ಮ ಅಪ್ಪುನಾ ನೀವ್ ನೋಡ್ದೆ ಇನ್ಯಾರು ನೋಡೋಕೆ ಸಾಧ್ಯ? ಅಭಿಮಾನಿಗಳಲ್ಲಿ ಯಾವುದೇ ಹಾನಿಯಾಗದಂತೆ ಮನವಿ ಮಾಡಿಕೊಂಡರು. ಇಂದು ಏನೇನೋ ವಿಧಿ ವಿಧಾನ ಇತ್ತು ಅದು ಪೂರ್ಣವಾಗಿದೆ. ಅಪ್ಪು ಇಲ್ಲ ಅಂತ ಹೇಳೋಕೆ ಮಾತು ಬರುತ್ತಿಲ್ಲ. ಇಲ್ಲೇ ಎಲ್ಲೋ ಚಿತ್ರೀಕರಣಕ್ಕೆ ಹೋಗಿದ್ದಾನೆ ಅಂತ ಅನ್ನಿಸುತ್ತಿದೆ.

ಹಾಲು ತುಪ್ಪ ಆಗುವ ತನಕ ಅಭಿಮಾನಗಳಿಗೆ ನೋಡಲು ಅವಕಾಶ ಇಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಮಾತನಾಡಿ ಸಮಾಧಿ ಬಳಿ ಬಿಡಿಸುವ ಯತ್ನ ಮಾಡುತ್ತೇವೆ. ಇದೇ ವೇಳೆ ಸಹಕಾರ ನೀಡಿದ ಸಿಎಂ ಬೊಮ್ಮಾಯಿ ಮತ್ತು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.

ಇದನ್ನೂ ಓದಿ:  RIP Puneeth Rajkumar: ಭೂ ತಾಯಿ ಮಡಿಲು ಸೇರಿದ ‘ಬೆಟ್ಟದ ಹೂವು‘; ಬಾರದೂರಿಗೆ ಪಯಣ ಬೆಳೆಸಿದ ‘ರಾಜಕುಮಾರ‘

ನನ್ನ ಮಗ ನನ್ನೊಂದಿಗೆ ಇಲ್ಲ

ಇದೇ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar), ಮೂರು ದಿನಗಳಿಂದ ಸರ್ಕಾರ ಹಾಗೂ ಮಾಧ್ಯಮದವರು ಸಾಕಷ್ಟು ಸಹಕಾರ ಮಾಡಿದ್ದಾರೆ ಅಭಿಮಾನಿಗಳು ಸಹ ಸಾವಧಾನದಿಂದ ಇದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮಯೂರ ಚಿತ್ರೀಕರಣದ ವೇಳೆ ಅಪ್ಪು ಜನಿಸಿದ್ದನು. ಇಂದು ನನ್ನ ಮಗ ಅಪ್ಪು ನಮ್ಮೊಟ್ಟಿಗಿಲ್ಲ ಅಪ್ಪು ನನಗಿಂತ 10 ವರ್ಷ ಚಿಕ್ಕವನು.

ನಾನು ಅವನನ್ನ ಮಗನೆ ಅಂತಾ ಕರೀತಾ ಇದ್ದೇ. ಪುತ್ರ ಶೋಕಂ ನಿರಂತರಂ ಅನ್ನೋ ಹಾಗೆ ನನಗೆ ಈಗ ಆಗಿದೆ. ಮೊದಲು ಅಪ್ಪಾಜಿ ಅಮ್ಮನಿಗೆ ನಮಸ್ಕರಿಸುತ್ತಿದ್ದೀವಿ. ಈಗ ಅಪ್ಪುಗೆ ಸಹ ನಮಸ್ಕರಿಸುತ್ತೇವೆ ಎಂದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನಡೆಸಲಾಯಿತು. ರಾಘವೇಂದ್ರ ರಾಜ್​ಕುಮಾರ್​ ಮಗ ವಿನಯ್​ ರಾಜ್​ಕುಮಾರ್​ ಅಂತಿಮ ಸಂಸ್ಕಾರ ನೆರವೇರಿಸಿದರು. ಡಾ.ರಾಜ್​ಕುಮಾರ್​ ಕುಟುಂಬಸ್ಥರು ಹಾಗೂ ಸಿಎಂ ಸೇರಿ ಗಣ್ಯಾತಿಗಣ್ಯರು, ಚಿತ್ರರಂಗದ ನಟ-ನಟಿಯರು ದೊಡ್ಮನೆ ಹುಡುಗನಿಗೆ ಅಂತಿಮ ನಮನ ಸಲ್ಲಿಸಿದರು. ಎಲ್ಲರ ಪ್ರೀತಿಯ ಅಪ್ಪು ಕುಟುಂಬಸ್ಥರ ‘ಮೈತ್ರಿ‘ ತೊರೆದು ‘ಪೃಥ್ವಿ‘ ಸೇರಿದರು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ:  How much Workout: ಒಬ್ಬ ವ್ಯಕ್ತಿ ಎಷ್ಟು ವ್ಯಾಯಾಮ ಮಾಡ್ಬೇಕು? ವರ್ಕೌಟ್​ಗೂ ಹೃದಯಕ್ಕೂ ಏನು ಲಿಂಕ್?

ಮಂಗಳವಾರ ಹಾಲು-ತುಪ್ಪ ಬಿಡುವ ಕಾರ್ಯ

ಮಂಗಳವಾರ ಪುನೀತ್​ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ಮಾಡಲಾಗುತ್ತದೆ. ಅಲ್ಲಿಯವರೆಗೂ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕಂಠೀರವ ಸ್ಟುಡಿಯೋ ಬಳಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಂಡು ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
Published by:Mahmadrafik K
First published: