Priyanka Chopra ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗೋಕೆ 149 ಕೋಟಿ ಖರ್ಚು ಮಾಡಿದ್ರಂತೆ!

Priyanka-Nick Jonas: ಈ ಜೋಡಿ ತಮ್ಮ ಭವಿಷ್ಯದ ಮಗುವನ್ನು ಗಮನದಲ್ಲಿರಿಸಿಕೊಂಡು ಹೊಸ ಮನೆಗಾಗಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಮಕ್ಕಳಿಗೆ ಹೆಚ್ಚಿನ ಸ್ಥಳಾವಕಾಶ ಹಾಗೂ ಸಾಕಷ್ಟು ಹಸಿರುಮಯವಾದ ವಾತಾವರಣದ ಅವಶ್ಯಕತೆಯಿರುತ್ತದೆ ಎಂಬ ಅಭಿಪ್ರಾಯ ಇಬ್ಬರದ್ದಾಗಿತ್ತು.

ಪ್ರಿಯಾಂಕಾ - ನಿಕ್ ಜೋನಸ್

ಪ್ರಿಯಾಂಕಾ - ನಿಕ್ ಜೋನಸ್

  • Share this:
ಈಗಾಗಲೇ ನಮಗೆಲ್ಲ ಗೊತ್ತಿರುವಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಗೂ ಅವರ ಪತಿ ನಿಕ್ ಜೋನಸ್ (Nick Jonas) ಅವರು ತಮ್ಮ ಮೊದಲ ಸಂತಾನವನ್ನು ಬಾಡಿಗೆ ತಾಯ್ತನದ (Surrogacy) ಮೂಲಕ ಪಡೆದಿದ್ದಾರೆ. ಈ ಕುರಿತು ಸ್ವತಃ ದಂಪತಿಗಳೇ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ಕುರಿತು ಹೇಳಿಕೆಯನ್ನೂ ನೀಡಿದ್ದರು. ಈ ನಡುವೆ ಪ್ರಿಯಾಂಕಾ ಅವರ ಕಸಿನ್ ಆಗಿರುವ ಮೀರಾ ಚೋಪ್ರಾ ದಂಪತಿಗಳು ಮಗಳನ್ನು ಪಡೆದಿದ್ದಾರೆಂದು ದೃಢೀಕರಿಸಿದ್ದಾರೆ. ಇದಕ್ಕೂ ಮುಂಚೆ, ಪ್ರಿಯಾಂಕಾ ಹಾಗೂ ನಿಕ್ ದಂಪತಿಗಳು ಮೊದಲ ಬಾರಿಗೆ ಸಂತಾನಾಪೇಕ್ಷೆ ವ್ಯಕ್ತಪಡಿಸಿದ್ದಾಗ ಭವಿಷ್ಯದಲ್ಲಿ ಎಲ್ಲವೂ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಲಾಸ್ ಏಂಜಲೀಸ್ (Los Angeles) ನಗರದಲ್ಲಿ ಹೊಸ ಮನೆಯನ್ನು ಕೊಂಡುಕೊಳ್ಳುವ ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ತಕ್ಕ ಮನೆಯ ಶೋಧನೆ ಪ್ರಕ್ರಿಯೆಯಲ್ಲಿ ದಂಪತಿಗಳಿಬ್ಬರು ನಿರತರಾಗಿದ್ದಾರೆ ಎಂಬ ಸುದ್ದಿಯನ್ನು ಪೀಪಲ್ ಮ್ಯಾಗಜೀನ್ (People Magazine) ಪ್ರಕಟಿಸಿತ್ತು.

ಆಗಸ್ಟ್ 2019ರಲ್ಲಿ ಹೊಸ ಮನೆಗಾಗಿ ಶೋಧ ಆರಂಭಿಸಿದ್ದ ಅವರು ಅದೇ ವರ್ಷದ ನವೆಂಬರ್‌ವರೆಗೆ ಒಂದು ಮನೆಯನ್ನು ಅಂತಿಮ ಮಾಡಿ ಕೊಂಡುಕೊಂಡಿದ್ದರು. ಆ ಮನೆಗಾಗಿ ಅವರು ವ್ಯಯಿಸಿದ ಮೊತ್ತ ಬರೋಬ್ಬರಿ 20 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 149 ಕೋಟಿ ರೂಪಾಯಿ ಎನ್ನಲಾಗಿದೆ.

ಅಂತಾರಾಷ್ಟ್ರೀಯ ವರದಿಯೊಂದರ ಪ್ರಕಾರ ಈ ಜೋಡಿ ತಮ್ಮ ಭವಿಷ್ಯದ ಮಗುವನ್ನು ಗಮನದಲ್ಲಿರಿಸಿಕೊಂಡು ಹೊಸ ಮನೆಗಾಗಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಮಕ್ಕಳಿಗೆ ಹೆಚ್ಚಿನ ಸ್ಥಳಾವಕಾಶ ಹಾಗೂ ಸಾಕಷ್ಟು ಹಸಿರುಮಯವಾದ ವಾತಾವರಣದ ಅವಶ್ಯಕತೆಯಿರುತ್ತದೆ ಎಂಬ ಅಭಿಪ್ರಾಯ ಇಬ್ಬರದ್ದಾಗಿತ್ತು.

ಮನೆ ಕೊಂಡ ಮೇಲೆ ಸಾಕಷ್ಟು ಬದಲಾವಣೆ ಮಾಡಿದ್ರು

ಮನೆ ಖರೀದಿಸಿದ ನಂತರ ನಿಕ್ ಹಾಗೂ ಪ್ರಿಯಾಂಕಾ ಆ ಮನೆಯನ್ನು ಕುಟುಂಬ ಸ್ನೇಹಿ ವಾತಾವರಣ ಹೊಂದಿರುವಂತಹ ಮನೆಯನ್ನಾಗಿ ಪರಿವರ್ತಿಸಲು ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆನ್ನಲಾಗಿದೆ. ಅದಕ್ಕಾಗಿ ದಂಪತಿಗಳು ತಿಂಗಳುಗಟ್ಟಲೆ ಆ ಮನೆಯಲ್ಲಿ ಸಮಯವನ್ನು ಕಳೆದಿದ್ದರೆಂದು ತಿಳಿದುಬಂದಿದೆ.

ಇದನ್ನೂ ಓದಿ: Priyanka Chopra: ಪ್ರಿಯಾಂಕ, ನಿಕ್‌ ಮಗುವಿನ ಫೋಟೋ ವೈರಲ್​! ಇವ್ರದ್ದಲ್ಲಾ ಅಂದ್ರೆ ಮತ್ತಿನ್ಯಾರದ್ದು ಈ ಪಾಪು?

ಕಳೆದ ವರ್ಷವಷ್ಟೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮೊಂದಿಗೆ ಆಚರಿಸುವಂತೆ ಪ್ರಿಯಾಂಕಾ ಮತ್ತು ನಿಕ್ ಜೋಡಿಯು ತಮ್ಮ ಹತ್ತಿರದ ಬಂಧು ಹಾಗೂ ಸ್ನೇಹಿತರನ್ನು ಮನೆಗೆ ಆಮಂತ್ರಿಸಿದ್ದರು. ಸಂಜೆಯ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಅವರ ಸಂಬಂಧಿಗಳು ದಂಪತಿಗಳ ಜೊತೆಗೂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮೇರಿಕಾದಲ್ಲಿದ್ದರೂ ಭಾರತೀಯ ಹಬ್ಬಗಳ ಆಚರಣೆ ಬಿಟ್ಟಿಲ್ಲ

ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಪ್ರತಿಯೊಬ್ಬರೂ ಭಾರತೀಯ ಉಡುಗೆ ತೊಟ್ಟು ಪೂಜೆಯಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಪ್ರಿಯಾಂಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ "ಮನೆಯಲ್ಲಿ ನಾವಿಬ್ಬರೂ ಜೊತೆಗೂಡಿ ಆಚರಿಸುತ್ತಿರುವ ನಮ್ಮ ಮೊದಲ ದೀಪಾವಳಿ" ಎಂದೂ ಸಹ ಬರೆದುಕೊಂಡಿದ್ದರು.

ಈಗಲೂ ಸಹ ಪ್ರಿಯಾಂಕಾ ಹಾಗೂ ನಿಕ್ ದಂಪತಿ ತಮ್ಮ ಮಗಳ ಹೆಸರನ್ನಾಗಲಿ ಅಥವಾ ಭಾವಚಿತ್ರವನ್ನಾಗಲಿ ಎಲ್ಲಿಯೂ ಹಂಚಿಕೊಂಡಿಲ್ಲ. ಆ ಬಗ್ಗೆ ಯಾವ ಮಾಹಿತಿಯನ್ನೂ ದಂಪತಿ ಇನ್ನು ಬಿಟ್ಟುಕೊಟ್ಟಿಲ್ಲ. ಆದಾಗ್ಯೂ ಅವರ ಅನುಯಾಯಿಗಳು ಈಗಲೂ ಸಾಮಾಜಿಕ ಮಾಧ್ಯಮಗಳ ಮೂಲಕ ದಂಪತಿಗಳ ಬಾಳಿನಲ್ಲಿ ಹೊಸ ಸಂತಾನದ ಆಗಮನಕ್ಕೆ ಶುಭ ಕೋರಿ ಹರಸುತ್ತಿದ್ದಾರೆ.

ಪ್ರಿಯಾಂಕಾ ಗುರಿ ಬೇರೆಯೇ ಇತ್ತು

ಚಿತ್ರರಂಗಕ್ಕೆ ಸಂಬಂಧಿಸಿದ ಹಲವಾರು ಪ್ರಶಸ್ತಿ-ಪ್ರಶಂಸೆಗಳನ್ನು ಪಡೆದಿರುವ ಪ್ರಿಯಾಂಕಾ ಚೋಪ್ರಾ ಮೂಲತಃ ಏರೋನಾಟಿಕಲ್ ಇಂಜಿನಿಯರಿಂಗ್ ಮಾಡುವ ಆಸೆ ಹೊಂದಿದ್ದರು. ಆದರೆ ಅವರ ಬ್ಯೂಟಿ ಪೇಜಂಟ್ ಮಿಸ್ ವರ್ಲ್ಡ್ 2000 ನಿಂದಾಗಿ ಸಿಕ್ಕ ಯಶಸ್ಸು ಅವರಿಗೆ ಚಿತ್ರರಂಗ ಹುಡುಕಿಕೊಂಡು ಬರುವಂತೆ ಮಾಡಿತು. ಈ ಸಂದರ್ಭದಲ್ಲಿ ಚಿತ್ರರಂಗ ಆಯ್ದುಕೊಂಡ ನಟಿ ಅದರಲ್ಲೇ ತಮ್ಮ ಕರಿಯರ್ ಮಾಡಿಕೊಂಡರು.

ಇದನ್ನೂ ಓದಿ: Priyanka-Nick ದಂಪತಿಯ ಮಗು ಅವಧಿಗೂ ಮುನ್ನ ಜನಿಸಿದ್ದಕ್ಕೆ ಕಾರಣ ಇದಾ? ಅಮೇರಿಕಾದ ಪತ್ರಿಕೆಯೊಂದರ ವರದಿ ಇದು

ತಮಿಳು ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದ ನಂತರ ಬಾಲಿವುಡ್ ಸೇರಿಕೊಂಡಿದ್ದರು. ಅಲ್ಲಿಂದ ಅಪಾರ ಯಶಸ್ಸುಗಳಿಸಿದ ನಟಿ ಬಾಲಿವುಡ್‌ನಲ್ಲಿ ಹೆಚ್ಚು ಸಂಭಾವನೆಗಳಿಸುವ ನಟಿಯರಲ್ಲಿ ಒಬ್ಬರಾಗಿ ಯಶಸ್ವಿ ಪಡೆದರು. 2018ರಲ್ಲಿ ಅಮೆರಿಕದ ನಟ ಹಾಗೂ ಗಾಯಕರಾದ ನಿಕ್ ಜೋನಸ್ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದ ಅವರು ಜೋನಸ್ ಅವರ ಮದುವೆಯಾಗುವ ಪ್ರಸ್ತಾವನೆಯನ್ನು ಪುರಸ್ಕರಿಸಿ ಆಗಸ್ಟ್ 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಅದೇ ವರ್ಷ ಡಿಸೆಂಬರ್‌ನಲ್ಲಿ ಇಬ್ಬರೂ ಸತಿ-ಪತಿಗಳಾದರು.

ಮದುವೆಯ ತರುವಾಯ ಪ್ರಿಯಾಂಕಾ ಚೋಪ್ರಾ ತಮ್ಮ ಹೆಸರನ್ನು ಅಧಿಕೃತವಾಗಿ ಪ್ರಿಯಾಂಕಾ ಚೋಪ್ರಾ ಜೋನಸ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ. ಇದೀಗ ಅವರ ಬಾಳಿನಲ್ಲಿ ಮಗಳ ಪಾದಾರ್ಪಣೆಯಾಗಿದ್ದು ಕುಟುಂಬ ಪರಿಪೂರ್ಣತೆಯ ಅನಂದವನ್ನು ದಂಪತಿಗಳು ಹೊಂದುವಂತಾಗಿದೆ.
Published by:Soumya KN
First published: